ADVERTISEMENT

ನರೋಡಾ ಪಾಟಿಯಾ ಪ್ರಕರಣದಲ್ಲಿ ಮಾಯಾಬೆನ್‌ ಕೊಡ್ನಾನಿ ಖುಲಾಸೆ: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಾಧ್ಯತೆ

ಏಜೆನ್ಸೀಸ್
Published 21 ಏಪ್ರಿಲ್ 2018, 2:25 IST
Last Updated 21 ಏಪ್ರಿಲ್ 2018, 2:25 IST
ನರೋಡಾ ಪಾಟಿಯಾ ಪ್ರಕರಣದಲ್ಲಿ ಮಾಯಾಬೆನ್‌ ಕೊಡ್ನಾನಿ ಖುಲಾಸೆ: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಾಧ್ಯತೆ
ನರೋಡಾ ಪಾಟಿಯಾ ಪ್ರಕರಣದಲ್ಲಿ ಮಾಯಾಬೆನ್‌ ಕೊಡ್ನಾನಿ ಖುಲಾಸೆ: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಾಧ್ಯತೆ   

ಅಹಮದಾಬಾದ್‌: 2002 ರಲ್ಲಿ ನಡೆದಿದ್ದ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಚಿವೆ ಮಾಯಾಬೆನ್‌ ಕೊಡ್ನಾನಿ ಅವರನ್ನು ಗುಜರಾತ್ ಹೈಕೋರ್ಟ್ ಖುಲಾಸೆಗೊಳಿಸಿರುವುದರಿಂದ ನಿರಾಸೆಗೊಂಡಿರುವ ಸಂತ್ರಸ್ತರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಸಾಕ್ಷಿಗಳು ನೀಡಿದ ಹೇಳಿಕೆ ಸಮಂಜಸವಾಗಿಲ್ಲದ ಕಾರಣ ‘ಸಂಶಯದ ಲಾಭ’ ಆಧಾರದ ಮೇಲೆ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಹರ್ಷ ದೇವಾನಿ ಹಾಗೂ ಎ.ಎಸ್. ಸೂಫಿಯಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಹೇಳಿತ್ತು.

2002ರ ಫೆಬ್ರುವರಿ 28ರಂದು ಅಹಮದಾಬಾದ್‌ನ ನರೋಡಾ ಪಾಟಿಯಾದಲ್ಲಿ ನಡೆದ ಗಲಭೆಯಲ್ಲಿ 97 ಮಂದಿ ಹತ್ಯೆಯಾಗಿತ್ತು. ಇವರಲ್ಲಿ ಬಹುತೇಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರು.

ADVERTISEMENT

ಗಲಭೆ ವೇಳೆ ತಮ್ಮ ಕುಟುಂಬದ ಎಂಟು ಮಂದಿಯನ್ನು ಕಳೆದುಕೊಂಡಿರುವ ಶಕೀಲಾ ಅನ್ಸಾರಿ ಎನ್ನುವವರು ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರು, ‘ಇದು ಕರಾಳ ದಿನ. ನಾನು ನನ್ನ ಕಣ್ಣಾರೆ ಎಲ್ಲವನ್ನೂ ನೋಡಿದ್ದೇನೆ. ಇಷ್ಟು ಹೇಳಿದ ಮೇಲೂ ನನ್ನ ಕುಟುಂಬದವರನ್ನು ಕೊಲೆ ಮಾಡಿದವರನ್ನು ಖುಲಾಸೆ ಗೊಳಿಸಲಾಗಿದೆ. ಇದೆಂಥಾ ನ್ಯಾಯ?’

‘ಮಾಯಾ ಕೊಡ್ನಾನಿ ಘಟನಾ ಸ್ಥಳದಲ್ಲೇ ಇದ್ದುದ್ದನ್ನು ನಾನು ನೋಡಿದ್ದೇನೆ. ತೀರ್ಪಿನಿಂದ ಬೇಸರವಾಗಿದೆ. ನಾವು ನಮ್ಮ ಕಣ್ಣುಗಳಿಂದ ನೋಡಿದ್ದನ್ನು ನ್ಯಾಯಾಲಯ ನಿರಾಕರಿಸಲು ಹೇಗೆ ಸಾಧ್ಯ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಕರಣದಲ್ಲಿ ಸಂತ್ರಸ್ತರ ಪರ ವಾದಿಸಿದ್ದ ವಕೀಲ ಶಾಮ್ಶಾದ್‌ ಪಠಾಣ್‌ ಅವರು, ‘ಈ ತೀರ್ಪು ಸಂವಿಧಾನದಲ್ಲಿ ನಂಬಿಕೆ ಇರಿಸಿದ್ದ ಎಲ್ಲರಿಗೂ ದುಃಖಕರವಾಗಿದೆ’ ಎಂದು ಹೇಳಿದ್ದು, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.