ADVERTISEMENT

ನಳಂದಾ ವಿ.ವಿ: ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಪಟ್ನಾ (ಪಿಟಿಐ/ಐಎಎನ್‌ಎಸ್‌): ಶತಮಾನಗಳ ಚರಿತ್ರೆ ಹೊಂದಿರುವ ಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯದಲ್ಲಿ  ಸುಮಾರು 800 ವರ್ಷಗಳ ನಂತರ ಪಾಠ, ಪ್ರವಚನ ಆರಂಭವಾಗಿವೆ.

ಬಿಹಾರದ ನಳಂದಾ ವಿಶ್ವವಿದ್ಯಾಲಯ­ದಲ್ಲಿ ಸೋಮವಾರ ಮತ್ತೆ ತರಗತಿ ಆರಂಭವಾಗುವುದರೊಂದಿಗೆ  ಎಂಟು ಶತಮಾನಗಳ ನಂತರ ನಳಂದಾ ವಿಶ್ವ­ವಿದ್ಯಾಲಯದಲ್ಲಿ  ಗತವೈಭವ ಮರುಕಳಿಸಿತು.

ಪಟ್ನಾದಿಂದ 112 ಕಿ.ಮೀ ದೂರದ­ಲ್ಲಿರುವ ಇತಿಹಾಸ ಪ್ರಸಿದ್ಧ ಬೌದ್ಧ ಕೇಂದ್ರವಾಗಿದ್ದ ರಾಜಗಿರ್‌ನಲ್ಲಿ ಹೊಸ ವಿ.ವಿ ಆರಂಭವಾಗಿದೆ. ಕ್ರಿ.ಶ. 413ರಲ್ಲಿ ಇದೇ ಸ್ಥಳದಲ್ಲಿ ಆರಂಭವಾಗಿದ್ದ  ವಿಶ್ವ­ವಿದ್ಯಾ­ಲಯ ತುರ್ಕಿಗಳ ದಾಳಿಯ ನಂತರ ಕ್ರಿ.ಶ 1193ರಲ್ಲಿ ಸ್ಥಗಿತಗೊಂಡಿತ್ತು.

ಪ್ರಸಕ್ತ ಸಾಲಿನ ಇತಿಹಾಸ ಮತ್ತು ಪರಿಸರ ವಿಜ್ಞಾನ ವಿಭಾಗಗಳಿಗೆ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ವಿ.ವಿಯ ಸಭಾಂಗಣದಲ್ಲಿ ಸೋಮವಾರ ಔಪಚಾರಿಕವಾಗಿ ತರಗತಿ ಆರಂಭಿಸ­ಲಾಗಿದೆ. ಸೆಪ್ಟೆಂಬರ್‌ ಎರಡನೇ ವಾರದ ವೇಳೆಗೆ ಅಧಿಕೃತ ವಾಗಿ ಉದ್ಘಾಟನೆ ನೆರವೇರಲಿದೆ  ಎಂದು ಕುಲಪತಿ ಗೋಪಾ ಸಬರ್‌ವಾಲ್‌ ತಿಳಿಸಿದ್ದಾರೆ.

ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್‌ ಈ ವಿಶ್ವವಿದ್ಯಾಲಯದ ಕುಲಾಧಿಪತಿಗಳು.
ಪ್ರವೇಶ ಕೋರಿ ದೇಶ, ವಿದೇಶಗಳ ಸಾವಿ­ರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಪ್ರವೇಶ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅವರು ತಿಳಿಸಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಪುತ್ರಿ ಹಾಗೂ ದೆಹಲಿ ವಿವಿಯ ಇತಿಹಾಸ ಉಪನ್ಯಾಸಕಿ ಉಪಿಂದರ್‌ ಕೌರ್‌ ಸೇರಿದಂತೆ ಎಂಟು ಜನರು ಅತಿಥಿ ಉಪನ್ಯಾಸಕರು ಪಾಠ ಮಾಡಲಿದ್ದಾರೆ ಎಂದರು.

ವಸತಿ ಸೌಕರ್ಯ ಸಹಿತ ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯ 2020ರ ವೇಳೆಗೆ ಸಿದ್ಧವಾಗಲಿದೆ. ವಿಜ್ಞಾನ, ತತ್ವಜ್ಞಾನ ಮತ್ತು ಧರ್ಮಶಾಸ್ತ್ರ ಹಾಗೂ ಸಮಾಜ ವಿಜ್ಞಾನ ಸ್ನಾತಕೋತ್ತರ ಪದವಿ ವಿಭಾಗಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.