ADVERTISEMENT

ನವದಂಪತಿ ಮೂಲಕ ಚಿನ್ನ ಕಳ್ಳಸಾಗಣೆ

ಸುಂಕ ಅಧಿಕಾರಿಗಳ ಕಣ್ಣುತಪ್ಪಿಸಲು ಹೊಸ ತಂತ್ರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2015, 19:54 IST
Last Updated 21 ಸೆಪ್ಟೆಂಬರ್ 2015, 19:54 IST

ನವದೆಹಲಿ (ಪಿಟಿಐ): ಸುಂಕ ಅಧಿಕಾರಿಗಳಿಗೆ ಅನುಮಾನ ಬಾರದಂತೆ ಅವರ ಕಣ್ಣುತಪ್ಪಿಸಿ ವಿದೇಶಗಳಿಂದ ಅಗ್ಗದ ದರದಲ್ಲಿ ಚಿನ್ನ ತರಿಸಲು ಕಳ್ಳಸಾಗಣೆದಾರರು ಹೊಸದಾಗಿ ಮದುವೆಯಾದ ದಂಪತಿಗಳಿಗೆ ಆಮಿಷವೊಡ್ಡುವ ಹೊಸ ತಂತ್ರ ಪ್ರಾರಂಭಿಸಿದ್ದಾರೆ.

ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗಷ್ಟೇ ಗುಜರಾತ್‌ ದಂಪತಿಯಿಂದ 1.5 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡು ಅವರನ್ನು ಬಂಧಿಸಲಾಗಿತ್ತು. ಇದರಿಂದ ಕಳ್ಳಸಾಗಣೆದಾರರ ಹೊಸ ತಂತ್ರ ಬಯಲಾಗಿದೆ.

ಕಳ್ಳಸಾಗಣೆದಾರರಿಂದ ಉಚಿತ ವಿಮಾನದ ಟಿಕೆಟ್‌ ಮತ್ತು ತಲಾ ₹20 ಸಾವಿರ ಪಡೆದು, ಅದಕ್ಕೆ ಪ್ರತಿಯಾಗಿ ದೇಶವೊಂದರಿಂದ ಚಿನ್ನವನ್ನು  ಅತಿ ಕಡಿಮೆ ಬೆಲೆಗೆ ತಂದುಕೊಡಲು ಈ ದಂಪತಿ ಪ್ರಯತ್ನಿಸುತ್ತಿದ್ದರು.

‘ಮಾಹಿತಿಗಳನ್ನು ಆಧರಿಸಿ, ಥಾಯ್ಲೆಂಡ್‌ನಿಂದ ಬಂದ ದಂಪತಿಯನ್ನು ಬಂಧಿಸಲಾಯಿತು. ಇಬ್ಬರೂ ತಲಾ ಮೂರು ಚಿನ್ನದ ಬಳೆಗಳನ್ನು ಧರಿಸಿದ್ದರು. ದೇಶದೊಳಗೆ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಕಾರಣಕ್ಕೆ ಅವರನ್ನು ಬಂಧಿಸಲಾಯಿತು’ ಎಂದು ಹೆಚ್ಚುವರಿ ಸುಂಕ ಆಯುಕ್ತ (ಐಜಿಐಎ) ವಿನಾಯಕ್‌ ಆಜಾದ್‌ ತಿಳಿಸಿದರು.

ಆಭರಣ ವ್ಯಾಪಾರಿಯೊಬ್ಬ ಚಿನ್ನ ಕಳ್ಳಸಾಗಣೆ ಮಾಡಲು ತಮಗೆ ಆಮಿಷ ಒಡ್ಡಿದ್ದು, ತಮ್ಮ ವಿಮಾನದಲ್ಲಿಯೇ ಪ್ರಯಾಣಿಸಿದ್ದ ಎಂಬುದಾಗಿ ದಂಪತಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಆ ಮಾಹಿತಿ ಆಧಾರದಲ್ಲಿ ವ್ಯಾಪಾರಿಯನ್ನು ಸಹ ಬಂಧಿಸಲಾಯಿತು. ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಅಹಮದಾಬಾದ್‌ನ ದಂಪತಿಯಿಂದ ಒಟ್ಟು ₹40 ಲಕ್ಷ ಬೆಲೆ ಬಾಳುವ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇಪ್ಪತ್ತರ ಹರೆಯದ ಈ ದಂಪತಿ ಮೊದಲ ಬಾರಿಗೆ ವಿದೇಶಕ್ಕೆ ತೆರಳಿದ್ದರು. ಅವರು ತುಂಬಾ ಅನುಕೂಲಸ್ಥರೇನೂ ಅಲ್ಲ. ತಮಗೆ ಥಾಯ್ಲೆಂಡ್‌ಗೆ ಉಚಿತ ಪ್ರಯಾಣ ಸೌಲಭ್ಯ ಮತ್ತು ತಲಾ ₹20 ಸಾವಿರ ಹಣ ನೀಡಲಾಗಿತ್ತು ಎಂಬುದಾಗಿ ಹೇಳಿಕೊಂಡಿದ್ದಾರೆ ಎಂದು ಆಜಾದ್‌ ವಿವರಿಸಿದರು.

ಸುಂಕ ಅಧಿಕಾರಿಗಳಿಗೆ ಅನುಮಾನ ಬರಬಾರದೆಂದು ದೇಶದ ಬಡ ದಂಪತಿಗಳನ್ನು ಚಿನ್ನದ ಕಳ್ಳಸಾಗಣೆಗೆ ಬಳಸಿಕೊಳ್ಳುತ್ತಿರುವ ಜಾಲ ಬೆಳೆದಿರುವುದನ್ನು ಈ ಘಟನೆ ಸೂಚಿಸುತ್ತದೆ ಎಂದು ಹಿರಿಯ ಸುಂಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲು ಅಫ್ಘಾನಿಸ್ತಾನದ ಬಡ ಜನರನ್ನು ಬಳಸಿಕೊಳ್ಳಲಾಗುತ್ತಿತ್ತು.

*
ಮುಖ್ಯಾಂಶಗಳು
* ಬಡ ಕುಟುಂಬದ ದಂಪತಿಗಳಿಗೆ ಆಮಿಷ
* ಸಿಕ್ಕಿಬಿದ್ದ ಗುಜರಾತ್‌ ದಂಪತಿಯಿಂದ ಬಹಿರಂಗ
* ಜಾಲ ಬೃಹತ್ತಾಗಿ ಬೆಳೆದಿರುವ ಶಂಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.