ADVERTISEMENT

ನಾಯ್ಡು ‘ಇ–ಕ್ಯಾಬಿನೆಟ್‌’ ಸಭೆ

ಐಪಾಡ್‌ ಹಿಡಿದ ಆಂಧ್ರ ಮುಖ್ಯಮಂತ್ರಿ, ಸಚಿವರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST

ಹೈದರಾಬಾದ್‌: ಇಲ್ಲಿನ ಲೇಕ್‌ವ್ಯೂ ಅತಿಥಿ­ಗೃಹ­ದಲ್ಲಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆ ವಿಶಿಷ್ಟವಾಗಿತ್ತು. ಸಿ.ಎಂ ಸೇರಿದಂತೆ ಸಚಿವರು ಸಭೆಗೆ ಕಡತಗಳ ಬದಲಿಗೆ ಐಪಾಡ್‌ಗಳನ್ನು ತಂದಿದ್ದರು.

ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಹೆಸರಾಗಿರುವ  ನಾಯ್ಡು  ದೇಶದಲ್ಲೇ ಮೊದಲ ಬಾರಿಗೆ ಕಾಗದ ರಹಿತ ‘ಇ– ಕ್ಯಾಬಿನೆಟ್‌’ ಸಭೆ ನಡೆಸಿ­ದರು. ಇ– ಆಡಳಿತದ ಮತ್ತೊಂದು ಕ್ರಮ­ವಾಗಿ ಇದು ಗಮನ ಸೆಳೆಯಿತು. ಇದರೊಂದಿಗೆ ಸರ್ಕಾ­ರದ ಕಾರ್ಯ­ನಿರ್ವ­ಹಣೆಗೆ ಎಲೆಕ್ಟ್ರಾನಿಕ್‌ ಮಾದರಿಯ ಬಳಕೆಗೆ ಚಾಲನೆ ನೀಡಲಾಯಿತು.

ಟಿಡಿಪಿ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದ್ದು ‘ಇ– ಕ್ಯಾಬಿನೆಟ್‌’ ಸಭೆ ವಿಶೇಷ ಕಳೆ ನೀಡಿತು. ಸಭೆಯ ಕಾರ್ಯಸೂಚಿಯನ್ನು ಸಚಿವರಿಗೆ ಇ–ಮೇಲ್‌ ಮೂಲಕ ಕಳುಹಿಸಲಾಗಿತ್ತು ಮತ್ತು ನಡಾವಳಿ­ಗಳನ್ನು ಎಲೆಕ್ಟ್ರಾನಿಕ್‌ ವಿಧಾನದ ಮೂಲ­ಕವೇ ದಾಖಲು ಮಾಡ­ಲಾಯಿತು. ವಿವರವಾದ ಚರ್ಚೆಗಾಗಿ ಪ್ರಮುಖ ವಿಷಯಗಳನ್ನು ಪವರ್‌ ಪಾಯಿಂಟ್‌ ಮೂಲಕ ಮಂಡಿಸಲಾಯಿತು. 

ಬಹುತೇಕ ಸಚಿವರಿಗೆ ಐಪಾಡ್‌ ಬಳಕೆ ಹೊಸ­ದಾಗಿದ್ದರೂ ಯಾವುದೇ ಗೊಂದಲವಿಲ್ಲದೆ ನಾಲ್ಕು ಗಂಟೆ ನಡೆದ ಸಂಪುಟ ಸಭೆಯಲ್ಲಿ ಭಾಗಿ­ಯಾಗಿದ್ದರು. ‘ಇ– ಕ್ಯಾಬಿನೆಟ್‌’ಗಾಗಿ ವಿಶೇಷವಾಗಿ ಅ್ಯಪ್‌ ರೂಪಿಸಲಾಗಿತ್ತು. ‘ನಾವೀಗ 100 ದಿನಗಳನ್ನು ಪೂರೈಸಿದ್ದೇವೆ. ಇಂತಹ ನಿರ್ಣಾಯಕ ದಿನಗಳಲ್ಲಿ ರಾಜ್ಯಕ್ಕೆ ಅಗತ್ಯ­ವಾದ ನೀತಿ ರೂಪಿಸಲು ಯತ್ನಿಸಿದ್ದೇವೆ. ನಮ್ಮ ಪ್ರತಿ ಹೆಜ್ಜೆಯು ರಾಜ್ಯದ ಜನರ ಸುಂದರ ದಿನದ ಅರುಣೋದಯಕ್ಕೆ ಮುನ್ನುಡಿ ಹಾಡಲಿದೆ’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.