ADVERTISEMENT

ನಾಲ್ವರು ಉಗ್ರರ ಹತ್ಯೆ

ಕಾಶ್ಮೀರ: ಅರೆ ಸೇನಾಪಡೆಯ ಸಿಬ್ಬಂದಿ ಬಲಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಶ್ರೀನಗರ: ಜಮ್ಮು–ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂಡ್ವರ ಪ್ರದೇಶದ ಅರಣ್ಯದಲ್ಲಿ ಬುಧವಾರ ತಡರಾತ್ರಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್‌–ಎ–ತಯಬಾ ಸಂಘಟನೆಯ ನಾಲ್ವರು ಉಗ್ರಗಾಮಿಗಳು ಹತರಾಗಿದ್ದಾರೆ. ಈ ಘಟನೆಯಲ್ಲಿ ಅರೆ ಸೇನಾಪಡೆಯ ಒಬ್ಬ ಸಿಬ್ಬಂದಿಯೂ ಬಲಿಯಾಗಿದ್ದಾನೆ. ಮೃತ ಉಗ್ರಗಾಮಿಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಇಲ್ಲಿ ತಿಳಿಸಿವೆ.

ಪಾಕ್ ದಾಳಿ: ಪೂಂಚ್ ಜಿಲ್ಲೆಯ ಕೆ.ಜಿ.ವಲಯದಲ್ಲಿ ಪಾಕಿಸ್ತಾನದ ಸೈನಿಕರು ಕೆಲವು ದಿನಗಳ ಬಳಿಕ ಗುರುವಾರ ಅಪ್ರಚೋದಿತ ದಾಳಿ ನಡೆಸಿದ್ದಾರೆ. ಅವರು ಗುಂಡಿನ ದಾಳಿಯನ್ನು ನಿಲ್ಲಿಸುವವರೆಗೆ ನಮ್ಮ ಸೈನಿಕರು ಗುಂಡಿನಿಂದಲೇ ತಕ್ಕ ಉತ್ತರ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿಬಿಐ ತನಿಖೆಗೆ: ಜಮ್ಮು–ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‌ (ಜೆಕೆಸಿಎ)ನಲ್ಲಿ ನಡೆದಿರುವ 113 ಕೋಟಿ ರೂಪಾಯಿ ಹಗರಣ ಬಗ್ಗೆ ಸಿಬಿಐ ತನಿಖೆಗೆ ರಾಜ್ಯ ಹೈಕೋರ್ಟ್ ಗುರುವಾರ ಆದೇಶಿಸಿದೆ. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರನ್ನು ಪ್ರಧಾನ ಆರೋಪಿ ಎಂದು ಹೆಸರಿಸಲಾಗಿದೆ. ತನಿಖೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್.ಪಾಲ್ ವಸಂತಕುಮಾರ್ ಮತ್ತು ನ್ಯಾಯಮೂರ್ತಿ  ಬಿ.ಎಲ್.ಭಟ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಆದೇಶಿಸಿದೆ.

*
ಭಾರತ ವಿರೋಧಿ ರೇಡಿಯೊ ಆರಂಭ
ಶ್ರೀನಗರ (ಐಎಎನ್‌ಎಸ್‌):
ಕಾಶ್ಮೀರದಲ್ಲಿ  ಭಾರತ ವಿರೋಧಿ ವಿಚಾರಗಳನ್ನು ಬಿತ್ತರಿಸಲು ಇಂಟರ್‌ನೆಟ್‌ ರೇಡಿಯೊ ಆರಂಭವಾಗಿದೆ. ‘ರೇಡಿಯೊ ಸದಾ–ಎ–ಹುರಿಯತ್–ಎ– ಜಮ್ಮು ಕಾಶ್ಮೀರ್’ ಹೆಸರಿನಲ್ಲಿ ರೇಡಿಯೊ ಪ್ರಸಾರ ಆರಂಭಿಸಲಾಗಿದೆ ಎಂದು ಭಾರತ ವಿರೋಧಿ ಸುದ್ದಿಜಾಲತಾಣ ಕಾಶ್ಮೀರ ಮೀಡಿಯಾ ತನ್ನ ವೆಬ್‌ಸೈಟಿನಲ್ಲಿ ಗುರುವಾರ ಪ್ರಕಟಿಸಿದೆ.

‘ಕಾಶ್ಮೀರದಲ್ಲಿ ಸೇನೆ ಮಾಡುತ್ತಿರುವ  ಮಾನವ ಹಕ್ಕುಗಳ ಉಲ್ಲಂಘನೆಯನ್ನು ಈ ರೇಡಿಯೊ  ಪ್ರಸಾರ ಮಾಡುತ್ತಿದೆ’ ಎಂದೂ ವೆಬ್‌ಸೈಟಿನಲ್ಲಿ ತಿಳಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವಿನ ಮಾತುಕತೆ ರದ್ದಿನ ಕಾರಣ, ಈ ರೇಡಿಯೊ ಪ್ರಸಾರ ಮಹತ್ವ ಪಡೆದಿದೆ ಎನ್ನಲಾಗಿದೆ.

ಕಾಶ್ಮೀರಿ, ಉರ್ದು, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ರೇಡಿಯೊ ಪ್ರಸಾರವಾಗುತ್ತಿದೆ. ಭಾರತ ವಿರೋಧಿ ಇಂಟರ್ನೆಟ್ ರೇಡಿಯೊ ಪ್ರಸಾರ ಕುರಿತು ಭಾರತದ ಬೇಹುಗಾರಿಕಾ ಸಂಸ್ಥೆ ಮೌನ ವಹಿಸಿದ್ದು, ರೇಡಿಯೊ ಪ್ರಸಾರ ನಿರ್ಬಂಧದ ಕುರಿತು ಯಾವುದೇ ಮಾಹಿತಿ ನೀಡಿಲ್ಲ.1965ರ ಭಾರತ– ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿಯೂ ರೇಡಿಯೊ ಸದಾ– ಎ– ಕಾಶ್ಮೀರ್ ಹೆಸರಿನಲ್ಲಿ ಭೂಗತವಾಗಿ ರೇಡಿಯೊ ಪ್ರಸಾರ ಆರಂಭಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT