ADVERTISEMENT

ನಾಳೆ ಜಯಲಲಿತಾ ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 22 ಮೇ 2015, 12:21 IST
Last Updated 22 ಮೇ 2015, 12:21 IST

ಚೆನ್ನೈ(ಪಿಟಿಐ): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ (67) ಅವರು ಶನಿವಾರ (ಮೇ 23)  ಬೆಳಿಗ್ಗೆ 11 ಗಂಟೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಐದನೆಯ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

‌ಶುಕ್ರವಾರ ಬೆಳಿಗ್ಗೆ ಇಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ, ಜಯಲಲಿತಾ  ಅವರನ್ನು   ಶಾಸಕಾಂಗ ಪಕ್ಷದ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.  ಎಂಟು ತಿಂಗಳ ಬಳಿಕ ಶಾಸಕಾಂಗ ಪಕ್ಷದ ಸಭೆಗೆ ಬರುವ ಮೂಲಕ ಅವರು ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ ಸೆಲ್ವಂ ಅವರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ, ತಮ್ಮ ನಾಯಕಿ ಜಯಲಲಿತಾ ಅವರು ಮತ್ತೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಲು  ಅನುವು ಮಾಡಿಕೊಟ್ಟರು.  ಮದ್ರಾಸ್‌ ವಿಶ್ವವಿದ್ಯಾಲಯದ ಶತಮಾನೋತ್ಸವ ಸಭಾಂಗಣದಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಜತೆಗೆ 28 ಸಚಿವರು ಪ್ರಮುಖವಾಗಿ ಪನ್ನೀರ್‌ ಸೆಲ್ವಂ  ಹಣಕಾಸು, ಎನ್‌.ಆರ್‌ ವಿಶ್ವನಾಥನ್‌ ಇಂಧನ, ಆರ್‌ ವೈದ್ಯಲಿಂಗಂ ವಸತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶುಕ್ರವಾರ ನಡೆದ ಎಐಎಡಿಎಂಕೆ ಶಾಸಕಾಂಗ ಸದಸ್ಯರ ಸಭೆಯಲ್ಲಿ, ವಿಜಯಕಾಂತ್‌ ನೇತೃತ್ವದ ಡಿಎಂಡಿಕೆ ಪಕ್ಷದ ಏಳು ಮಂದಿ  ಬಂಡಾಯ ಸಚಿವರು ಕೂಡ ಭಾಗವಹಿಸಿ ಬೆಂಬಲ ನೀಡಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT