ADVERTISEMENT

ನಾಳೆ ಮೋದಿ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಮೇ 2014, 14:07 IST
Last Updated 25 ಮೇ 2014, 14:07 IST

ನವದೆಹಲಿ (ಪಿಟಿಐ): ಇತ್ತೀಚಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭೂತ ಪೂರ್ವ ಗೆಲುವಿಗೆ ಕಾರಣರಾದ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದ ಪ್ರಾಂಗಣದಲ್ಲಿ ನೂತನ ಪ್ರಧಾನಿಯಾಗಿ ಸೋಮವಾರ ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 ಭಾರತದ 15ನೇ ಪ್ರಧಾನಿಯವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌, ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರಂತಹ ಸಾರ್ಕ್‌ ರಾಷ್ಟ್ರಗಳ ನಾಯಕರು ಸೇರಿದಂತೆ 3 ಸಾವಿರ ಅತಿಥಿಗಳು ಭಾಗವಹಿಸುವ ನಿರೀಕ್ಷೆ ಇದೆ.

63 ವರ್ಷದ ಮೋದಿ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಅಧಿಕಾರದ ಗೌಪ್ಯತೆ ಬೋಧಿಸಲಿದ್ದು, ನಿರ್ಗಮನ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಇತರ ಪಕ್ಷಗಳ ಮುಖಂಡರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮೋದಿ ಅವರ ತಾಯಿ ಹಿರಾಬಾ ಅವರೂ ಸಹ ಪದಗ್ರಹಣ ಸಮಾರಂಭಕ್ಕೆ ಬರುವ ನಿರೀಕ್ಷೆಗಳಿವೆ.

ADVERTISEMENT

ಷರೀಫ್‌ ಹಾಗೂ ರಾಜಪಕ್ಸೆ ಮಾತ್ರವಲ್ಲದೇ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್‌ ಕರ್ಜೈ, ಭೂತಾನ್‌ ಪ್ರಧಾನಿ ಶೇರಿಂಗ್‌ ತೊಬ್ಗಾಯ್‌, ನೇಪಾಳ ಪ್ರಧಾನಿ ಸುಶೀಲ್‌ ಕೊಯಿರಾಲಾ ಹಾಗೂ ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ಅಬ್ದುಲ್ಲಾ ಗಯೂಮ್‌ ಅವರು ಸೇರಿದಂತೆ ವಿದೇಶಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮೋದಿ ಪ್ರಮಾಣ ವಚನ ಸಮಾರಂಭದ ಸಮಯದಲ್ಲಿ ಪ್ರಧಾನಿ ಶೇಖ್‌ ಹಸೀನಾ ಅವರು ಜಪಾನ್‌ಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಅಲ್ಲಿನ ಸಂಸತ್ತಿನ ಸ್ಪೀಕರ್‌ ಶಿರಿನ್‌ ಚೌಧರಿ ಅವರು ಪದಗ್ರಹಣ ಸಮಾರಂಭದಲ್ಲಿ ಬಾಂಗ್ಲಾದೇಶವನ್ನು ಪ್ರತಿನಿಧಿಸಲಿದ್ದಾರೆ.

ಭಾರತದ ಪ್ರಧಾನಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿರುವುದು ಇದೇ ಮೊದಲು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪ್ರದಾಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಮೋದಿ ಅವರು ರಾಷ್ಟ್ರಪತಿ ಭವನದ ಮುಂದಿನ ಪ್ರಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ವಾಜಪೇಯಿ ಅವರಿಗಿಂತ ಮೊದಲು ಚಂದ್ರಶೇಖರ್‌ ಅವರು ಇಲ್ಲಿ ಪ್ರಮಾಣ ವಚನ ಸಮಾರಂಭ ನಡೆಸಿದ್ದರು.

ಇಂತಹ ಸಮಾರಂಭಗಳು ಸಾಮಾನ್ಯವಾಗಿ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿ ದರ್ಬಾರ್‌ ಸಭಾಂಗಣದಲ್ಲಿ ನಡೆಯುತ್ತವೆ. ಆದರೆ ಅಲ್ಲಿ ಸುಮಾರು 500 ಜನರಿಗಾಗುವಷ್ಟು ಮಾತ್ರವೇ ಸ್ಥಳಾವಕಾಶವಿದ್ದರಿಂದ ಪ್ರಾಂಗಣದಲ್ಲಿ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.