ADVERTISEMENT

‘ನಿಂದನೆ’ ಆತಂಕದಲ್ಲಿ ರಾಜ್ಯ

ಕಾವೇರಿ: ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
‘ನಿಂದನೆ’ ಆತಂಕದಲ್ಲಿ ರಾಜ್ಯ
‘ನಿಂದನೆ’ ಆತಂಕದಲ್ಲಿ ರಾಜ್ಯ   

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದಕ್ಕೆ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ನಡೆಯಲಿರುವ  ವಿಚಾರಣೆ ಕರ್ನಾಟಕಕ್ಕೆ ತೀವ್ರ ಆತಂಕ ಉಂಟುಮಾಡಿದೆ.

ಸೆಪ್ಟೆಂಬರ್‌ ತಿಂಗಳಲ್ಲೇ ಮೂರು ಬಾರಿ ಹಿನ್ನಡೆ ಅನುಭವಿಸಿರುವ ಕರ್ನಾಟಕ, ನೀರು ಹರಿಸುವಂತೆ ಸೆ. 20ರಂದು ನೀಡಿರುವ ಆದೇಶ ಮಾರ್ಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದೆ.

ನೀರು ಬಿಡುವಂತೆ ಸೆ. 5ರಂದು ಹೊರಬಿದ್ದಿದ್ದ ಆದೇಶ ಮಾರ್ಪಾಡು ಕೋರಿ ಸೆ. 11ರಂದು ಮೊದಲು ಅರ್ಜಿ ಸಲ್ಲಿಸಿ, ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದ ಕರ್ನಾಟಕಕ್ಕೆ ಸೆ. 12ರಂದು ಪೂರಕ ಆದೇಶ ಹೊರಬೀಳದ್ದರಿಂದ ತೀವ್ರ ನಿರಾಸೆ ಎದುರಾಗಿತ್ತು.

ಏಳು ದಿನಗಳ ಕಾಲ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಸೆ. 20ರಂದು ಹೊರಬಿದ್ದಿರುವ ಆದೇಶ ಬದಿಗಿರಿಸಿ, ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ‘ಕುಡಿಯುವುದಕ್ಕೆ ಮಾತ್ರ ಜಲಾಶಯಗಳ ನೀರು ಉಪಯೋಗಿಸುವ’ ಕುರಿತು ಕೈಗೊಂಡ ತೀರ್ಮಾನವು, ‘ನ್ಯಾಯಾಂಗ ನಿಂದನೆ’ ಪ್ರಕರಣಕ್ಕೆ ಹಾದಿಯಾಗಬಹುದೇ ಎಂಬ ಆತಂಕ ಕರ್ನಾಟಕದ ಪಾಳಯದಲ್ಲಿ ಮಡುಗಟ್ಟಿದೆ.

ಏತನ್ಮಧ್ಯೆ, ‘ಕರ್ನಾಟಕ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೇ ಕೈಗೆತ್ತಿvಕೊಳ್ಳಬಾರದು. ದೇಶದ ಅತ್ಯುನ್ನತ ನ್ಯಾಯಾಲಯ ನೀಡಿರುವ ಆದೇಶದ ಪಾಲನೆಗೆ ಸೂಚಿಸಬೇಕು’ ಎಂದು ಕೋರಿ ತಮಿಳುನಾಡು ಸಹ ಸೋಮವಾರ ಆಕ್ಷೇಪಣೆ ಅರ್ಜಿ ಸಲ್ಲಿಸಿರುವುದು ಆತಂಕ ಉಲ್ಬಣಗೊಳ್ಳುವಂತೆ ಮಾಡಿದೆ.

ಮನದಟ್ಟು ಮಾಡುವ ಯತ್ನ: ಮೂರು ಬಾರಿ ನಡೆದಿರುವ ವಿಚಾರಣೆ ಸಂದರ್ಭ ಕರ್ನಾಟಕದ ನೋವಿನ ದನಿಯನ್ನೇ ಆಲಿಸುವ ಮನಸ್ಸು ಮಾಡದ ನ್ಯಾಯಮೂರ್ತಿಗಳು, ‘ಈಗಲಾದರೂ ಕರ್ನಾಟಕ ಎದುರಿಸುತ್ತಿರುವ ನೀರಿನ ಸಮಸ್ಯೆಯ ತೀವ್ರತೆ ಅರಿಯಲು ಮುಂದಾಗುವರೇ ಅಥವಾ ಆದೇಶ ಪಾಲಿಸದಿರುವ ಕಾರಣ ಮುಂದಿರಿಸಿ ಮತ್ತೆ ಕಿವಿ ಹಿಂಡುವ ಕೆಲಸ ಮಾಡುವರೇ’ ಎಂಬ ಜಿಜ್ಞಾಸೆಯಲ್ಲಿ ಕರ್ನಾಟಕ ಪರ ಕಾನೂನು ತಂಡ ಮುಳುಗಿದೆ.

ಕಾವೇರಿ ನೀರನ್ನು ಕೃಷಿ ಮತ್ತಿತರ ಯಾವುದೇ ಉದ್ದೇಶಕ್ಕೆ ಬಳಸದೆ ಕೇವಲ ಕುಡಿಯುವುದಕ್ಕೆ ಬಳಸುವ ನಿರ್ಧಾರವನ್ನು ಸೆ. 23ರಂದು ನಡೆದ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ವಿಶೇಷ ಅಧಿವೇಶನದಲ್ಲಿ ಕೈಗೊಳ್ಳಲಾಗಿದೆ ಎಂದೂ ಸೋಮವಾರದ ಅರ್ಜಿಯಲ್ಲಿ ವಿವರಿಸಲಾಗಿದೆ. ವಿಚಾರಣೆಯ ವೇಳೆಯೂ ಈ ವಿಷಯವನ್ನು ಮನದಟ್ಟು ಮಾಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಾಜರಾಗದಿರಲು ನಿರ್ಧಾರ: ಕಳೆದೆರಡು ಬಾರಿ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಸಭಾಂಗಣಕ್ಕೇ ಬಂದು ಕಲಾಪ ವೀಕ್ಷಿಸಿದ್ದ ಸಚಿವ ಎಂ.ಬಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಮಂಗಳವಾರದ ವಿಚಾರಣೆ ವೇಳೆ ಕೋರ್ಟ್‌ ಆವರಣದಿಂದ ದೂರವಿರುವಂತೆ ಕಾನೂನು ತಂಡ ಸಲಹೆ ನೀಡಿದೆ.

‘ನ್ಯಾಯಮೂರ್ತಿಗಳ ಮನಸ್ಥಿತಿ ಅರಿಯುವುದು ದುಸ್ತರ. ಸೆ. 20ರ ಆದೇಶ ಪಾಲಿಸದ್ದರಿಂದ ನ್ಯಾಯಾಂಗ ನಿಂದನೆ ಸೇರಿದಂತೆ ಯಾವುದೇ ಕಠಿಣ ಆದೇಶ ಹೊರಬೀಳುವ ಸಾಧ್ಯತೆ ಇದೆ. ಕೋರ್ಟ್‌ ಸಭಾಂಗಣದಲ್ಲಿ ನೀವು ಕಾಣಕೂಡದು’ ಎಂದು ಹಿರಿಯ ವಕೀಲ ಫಾಲಿ ನಾರಿಮನ್‌ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾರಕವಾದ ನಡೆ: ಕರ್ನಾಟಕವು ಸೆ.11ರಂದು ಸಲ್ಲಿಸಿದ್ದ ಆದೇಶ ಮಾರ್ಪಾಡು ಅರ್ಜಿಯಲ್ಲಿ ಸೇರಿಸಿದ್ದ ‘ಪ್ರತಿಭಟನೆಗಳು ಹೆಚ್ಚಿವೆ. ಹಿಂಸಾಚಾರ ಉಲ್ಬಣಿಸಿದೆ. ಕಾನೂನು ಸುವ್ಯವಸ್ಥೆ ಸರ್ಕಾರದ ನಿಯಂತ್ರಣ ಮೀರಿದೆ’ ಎಂಬ ಅಂಶಗಳೇ ಮಾರಕವಾಗಿ ಪರಿಣಮಿಸಿದ್ದವು. ಈ ಅಂಶಗಳ ಕುರಿತು ಸುಪ್ರೀಂ ಕೋರ್ಟ್‌ ಕರ್ನಾಟಕವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕಾವೇರಿ ಮೇಲುಸ್ತುವಾರಿ ಸಮಿತಿಯು ಸೆ. 19ರಂದು ಸಭೆ ಸೇರಿ 10 ದಿನಗಳ ಕಾಲ ನಿತ್ಯ 3,000 ಕ್ಯುಸೆಕ್‌ ನೀರು ಹರಿಸುವಂತೆ ಸೂಚಿಸಿದಾಗ ಪರೋಕ್ಷವಾಗಿ ಸಂತೃಪ್ತಿ ವ್ಯಕ್ತಪಡಿಸಿದ್ದ ರಾಜ್ಯಕ್ಕೆ, ಕೋರ್ಟ್‌ನ ಸೆ. 20ರ ಆದೇಶ ಗಾಯದ ಮೇಲೆ ಬರೆ ಎಳೆದಿತ್ತು. ಸಚಿವರಾದ ಎಂ.ಬಿ. ಪಾಟೀಲ, ಟಿ.ಬಿ. ಜಯಚಂದ್ರ ಅವರು ಸಾಧಕ– ಬಾಧಕಗಳ ಕುರಿತು ಹಿರಿಯ ವಕೀಲ ಫಾಲಿ ನಾರಿಮನ್‌ ಅವರೊಂದಿಗೆ ಚರ್ಚೆ ನಡೆಸಿದರು.

ನೀರಿಲ್ಲ: ರಾಜ್ಯದ ಪುನರುಚ್ಚಾರ
ಕರ್ನಾಟಕದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ನಿತ್ಯ ಪೂರೈಸುವಷ್ಟು ನೀರೂ ಇಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಸೋಮವಾರ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

ನಗರ ಪ್ರದೇಶಗಳ ಜನತೆಗೆ ನಿತ್ಯ ತಲಾ 135 ಲೀಟರ್‌, ಗ್ರಾಮೀಣರಿಗೆ 70 ಲೀಟರ್‌ ನೀರು ಪೂರೈಸಬೇಕು ಎಂಬುದು ನಿಯಮ. ಆದರೆ, ಮತ್ತೆ ಮಳೆ ಸುರಿಯದಿದ್ದರೆ ಈಗಿರುವ ಸಂಗ್ರಹದಲ್ಲೇ ಬೇಸಿಗೆಯಲ್ಲೂ ನೀರು ಪೂರೈಸಬೇಕು. ತಮಿಳುನಾಡಿಗೆ ನೀರು ಹರಿಸಿದರೆ ಜನತೆಗೆ ಅಗತ್ಯವಾಗಿರುವ ನೀರನ್ನೂ ನೀಡದ ಸ್ಥಿತಿ ಉದ್ಭವವಾಗಲಿದೆ ಎಂದು ತಿಳಿಸಲಾಗಿದೆ.

ಕಾವೇರಿ ಕಣಿವೆಯಲ್ಲಿನ ಒಟ್ಟು 740 ಟಿಎಂಸಿ ಅಡಿ ನೀರಿನಲ್ಲೇ ಆಯಾ ರಾಜ್ಯಗಳಿಗೆ ವಾರ್ಷಿಕ ಹಂಚಿಕೆ ಮಾಡಲಾಗಿದೆ. ಜನವರಿ 31ಕ್ಕೆ ಜಲ ವರ್ಷ ಪೂರ್ಣಗೊಳ್ಳಲಿದ್ದು, ಹಂಚಿಕೆ ಆಗಬೇಕಿರುವ ನೀರಿನ ಲೆಕ್ಕವನ್ನು ಆಗಲೇ ಹಾಕಬೇಕು ಎಂದು ಕರ್ನಾಟಕ ಮನವಿ ಮಾಡಿದೆ.

ಸಾಂಬಾ ಬೆಳೆಗೆ ವಾರ್ಷಿಕ 63 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಈಗಾಗಲೇ ಕರ್ನಾಟಕ 52 ಟಿಎಂಸಿ ಅಡಿ ನೀರನ್ನು ಮೆಟ್ಟೂರು ಜಲಾಶಯಕ್ಕೆ ಹರಿಸಿದೆ. ಅಲ್ಲಿ ಈಗ 50 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಸಾಂಬಾ ಬೆಳೆಗೆ ಸಾಕಾಗಲಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ ಅಲ್ಲಿ ಈಶಾನ್ಯ ಮಳೆಯ ಮಾರುತಗಳು ಮಳೆ ಸುರಿಸುವ ಸಾಧ್ಯತೆ ಇದೆ. ಗಡಿಯಲ್ಲಿರುವ ಬಿಳಿಗುಂಡ್ಲುವಿನಿಂದ ಮೆಟ್ಟೂರು ಜಲಾಶಯದವರೆಗೆ ಈಶಾನ್ಯ ಮಾರುತಗಳ ನೆರವಿನಿಂದಲೇ 42 ಟಿಎಂಸಿ ಅಡಿ ನೀರು ದೊರೆಯಲಿದೆ ಎಂದು ಹೇಳಿರುವ ಕರ್ನಾಟಕ, ಇದನ್ನು ಪರಿಗಣಿಸುವ ಮೂಲಕ ಕರ್ನಾಟಕದಿಂದ ನಿತ್ಯ 6,000 ಕ್ಯುಸೆಕ್‌ ನೀರು ಹರಿಸುವಂತೆ ಸೆ.20ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡಬೇಕು ಎಂದು ಕೋರಿದೆ.

‘ಇದು ನ್ಯಾಯಾಂಗ ನಿಂದನೆ’
‘ಸೆ. 5, 12 ಮತ್ತು 20ರಂದು ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿ. ಆದೇಶ ಪಾಲನೆ ಆಗುವವರೆಗೂ ಕರ್ನಾಟಕ ಸಲ್ಲಿಸಿರುವ ಆದೇಶ ಮಾರ್ಪಾಡು ಅರ್ಜಿಯ ವಿಚಾರಣೆ ನಡೆಸಬೇಡಿ’ ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಸೋಮವಾರ ಆಕ್ಷೇಪಣೆ ಅರ್ಜಿ ಸಲ್ಲಿಸಿದೆ.

ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಆದರೆ, ಅದನ್ನು ಧಿಕ್ಕರಿಸಿರುವ ಕರ್ನಾಟಕವು ನ್ಯಾಯಾಂಗ ನಿಂದನೆ ಮಾಡಿದಂತಾಗಿದೆ ಎಂದೂ ತಿಳಿಸಲಾಗಿದೆ.

ನಿರೀಕ್ಷಿಸಬಹುದಾದ 4 ದಾರಿ
1 ನ್ಯಾಯಾಲಯ ತಂತಾನೆ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆಯ ಕಠಿಣ ಕ್ರಮ ಜರುಗಿಸಬಹುದು.

ADVERTISEMENT

2  ನಿತ್ಯ 6000 ಕ್ಯುಸೆಕ್ ನೀರನ್ನು ಏಳು ದಿನಗಳ ಕಾಲ ಹರಿಸಬೇಕೆಂಬ ತನ್ನ ಆದೇಶವನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿ ಆದೇಶ ನೀಡಬಹುದು.

3 ನಿತ್ಯ 6000 ಕ್ಯುಸೆಕ್ ನೀರನ್ನು ಏಳು ದಿನಗಳ ಕಾಲ ಹರಿಸಬೇಕೆಂಬ ತನ್ನ ಆದೇಶವನ್ನು ಪಾಲಿಸಲೇಬೇಕೆಂದು ಕರ್ನಾಟಕಕ್ಕೆ ವಿಧಿಸಿ ಎಂಟು ದಿನಗಳ ಗಡುವನ್ನು ನಿಗದಿ ಮಾಡಬಹುದು.

4 ನೀರು ಬಿಡುವ ಪರಿಸ್ಥಿತಿ ಇಲ್ಲ ಎಂಬ ಕರ್ನಾಟಕದ ವಾದವನ್ನು ಮನ್ನಿಸುವ ವಿರಳ ಸಾಧ್ಯತೆಯೂ ಇದೆ.

ತಮಿಳುನಾಡು: ಕಾವೇರಿ ಮುಖಜ ಭೂಮಿಯಲ್ಲಿ ಮಳೆ ಕೊರತೆ
ಚೆನ್ನೈ:
ಕಾವೇರಿ ನೀರಿಗಾಗಿ ಕರ್ನಾಟಕದ ಜತೆ ತಮಿಳುನಾಡು ಸಂಘರ್ಷಕ್ಕೆ ಇಳಿದಿರುವುದರ ನಡುವೆಯೇ ಅಲ್ಲಿ ಈ ಬಾರಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿದೆ.

ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಜೂನ್‌ 1ರಿಂದ ಈವರೆಗೆ ತಮಿಳುನಾಡಿನಲ್ಲಿ ವಾಡಿಕೆಗಿಂತ ಶೇ 16ರಷ್ಟು ಮಳೆ ಕೊರತೆಯಾಗಿದೆ. ಕಾವೇರಿ ನದಿ ಮುಖಜ ಭೂಮಿ ಪ್ರದೇಶದ ಜಿಲ್ಲೆಗಳಾದ ತಂಜಾವೂರು, ತಿರುವರೂರು, ತಿರುಚ್ಚಿ, ನಾಗಪಟ್ಟಿಣಂ ಮತ್ತು ಸೇಲಂಗಳಲ್ಲಿ ವಾಡಿಕೆಗಿಂತ ಶೇ 15ರಷ್ಟು ಮಳೆ ಕೊರತೆಯಾಗಿದೆ. ಮೂರು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಸಾಂಬಾ ಬೆಳೆ ಬೆಳೆಯುವ ತಿರುವರೂರಿನಲ್ಲಿ ಶೇ 31ರಷ್ಟು ಕಡಿಮೆ ಮಳೆ ಬಿದ್ದಿದೆ.

ಕಾವೇರಿ ಗಲಾಟೆಗೆ ವೆಂಕಯ್ಯ ಕಳವಳ (ಹೈದರಾಬಾದ್– ಪಿಟಿಐ ವರದಿ): ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈಚೆಗೆ ನಡೆದ ಹಿಂಸಾಚಾರ ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಅಲ್ಲ ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದರು.

‘ಸ್ವಾತಂತ್ರ್ಯ ದೊರೆತು 69 ವರ್ಷಗಳು ಕಳೆದ ನಂತರ ಜಗಳ ಆರಂಭಿಸಿದರೆ, ಬಸ್ಸುಗಳಿಗೆ ಬೆಂಕಿ ಇಟ್ಟರೆ ಪ್ರಜಾತಂತ್ರಕ್ಕೆ ಒಳಿತಾಗದು’ ಎಂದು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ಹೇಳಿದರು. ‘ಆಡಳಿತ ಹಾಗೂ ಅಭಿವೃದ್ಧಿಯ ಕಾರಣಗಳಿಂದ ನಮ್ಮಲ್ಲಿ ಬೇರೆ ಬೇರೆ ರಾಜ್ಯಗಳನ್ನು ಸೃಷ್ಟಿಸಿರಬಹುದು. ಆದರೆ, ನಾವು ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಕರ್ನಾಟಕ, ತಮಿಳುನಾಡು ಒಟ್ಟಾಗಿ ಸೇರಿ ಕೆಲಸ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.