ADVERTISEMENT

ನೀತಿ ಆಯೋಗ ಸಭೆಗೆ 14 ಸಿ.ಎಂಗಳ ಗೈರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2015, 19:30 IST
Last Updated 15 ಜುಲೈ 2015, 19:30 IST

ನವದೆಹಲಿ: ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿರುವ ಭೂ ಸ್ವಾಧೀನ ಮಸೂದೆ ಕುರಿತು ಚರ್ಚಿಸಲು ಬುಧವಾರ ಕರೆದಿದ್ದ ನೀತಿ ಆಯೋಗದ ಸಭೆಗೆ ಕರ್ನಾಟಕ ಸೇರಿ 14 ರಾಜ್ಯಗಳ ಮುಖ್ಯಮಂತ್ರಿಗಳು ಗೈರು ಹಾಜರಾದರು.

ಇದರಿಂದಾಗಿ ಮಸೂದೆ ಕುರಿತು ತಲೆದೋರಿರುವ ಬಿಕ್ಕಟ್ಟು ತೀವ್ರ ಸ್ವರೂಪ ಪಡೆಯಿತು. ಆದರೆ, ‘ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಮತ್ತು ರೈತರ ಸಮೃದ್ಧಿ ಹಿತದೃಷ್ಟಿಯಿಂದ ರೂಪಿಸಲಾಗಿರುವ ಭೂಸ್ವಾಧೀನ ಮಸೂದೆಗೆ ಅಡ್ಡಿಪಡಿಸದೆ, ಪೂರ್ಣ ಸಹಕಾರ ನೀಡಬೇಕು’ ಎಂದು ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಮನವಿ ಮಾಡಿದರು.

ರೈತರಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ, ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಇಲ್ಲ. ಯುಪಿಎ ಸರ್ಕಾರದ ಭೂಸ್ವಾಧೀನ ಕಾಯ್ದೆಗೆ ಕೆಲವು ಮುಖ್ಯಮಂತ್ರಿಗಳು ಆಕ್ಷೇಪಿಸಿದ್ದರು ಎಂದು ಮೋದಿ ಅವರು ತಿಳಿಸಿದರು.

ನೀತಿ ಆಯೋಗದ ಆಡಳಿತ ಮಂಡಳಿಯ ಎರಡನೇ ಸಭೆಯಲ್ಲಿ ಕಾಂಗ್ರೆಸ್‌ ಆಡಳಿತವಿರುವ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿಲ್ಲ. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಭೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು.
 

ADVERTISEMENT

ಗೈರು ಹಾಜರಾದ ಸಿ.ಎಂಗಳು
ಸಿದ್ದರಾಮಯ್ಯ (ಕರ್ನಾಟಕ)
ಉಮ್ಮನ್‌ ಚಾಂಡಿ (ಕೇರಳ)
ವೀರಭದ್ರ ಸಿಂಗ್‌ (ಹಿಮಾಚಲ)
ಹರೀಶ್‌ ರಾವತ್‌ (ಉತ್ತರಾಖಂಡ)
ತರುಣ್‌ ಗೊಗೊಯ್‌ (ಅಸ್ಸಾಂ)
ನಬಂ ಟುಕಿ (ಅರುಣಾಚಲ)
ಲಾಲ್ತನ್‌ಹಾವ್ಲಾ (ಮಿಜೋರಾಂ)
ಓಕ್‌ರಾಂ ಇಬೋಬಿ ಸಿಂಗ್‌ (ಮಣಿಪುರ)
ಮುಕುಲ್‌ ಸಂಗ್ಮಾ (ಮೇಘಾಲಯ)
(ಮೇಲಿನ ಎಲ್ಲರೂ ಕಾಂಗ್ರೆಸ್‌)

ಮಮತಾ ಬ್ಯಾನರ್ಜಿ (ಪ.ಬಂಗಾಳ)
ನವೀನ್‌ ಪಟ್ನಾಯಕ್‌ (ಒಡಿಶಾ)
ಅಖಿಲೇಶ್‌ ಯಾದವ್‌ (ಉ.ಪ್ರದೇಶ)
ಚಂದ್ರಬಾಬು ನಾಯ್ಡು (ಆಂಧ್ರ)
ಜಯಲಲಿತಾ (ತಮಿಳುನಾಡು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.