ADVERTISEMENT

ನೀರಾವರಿಗೆ ₹ 50 ಸಾವಿರ ಕೋಟಿ

ಹುಬ್ಬಳ್ಳಿ ಕೃಷಿ ಮಾರುಕಟ್ಟೆಗೆ ಶೀಘ್ರವೇ ಕೇಂದ್ರ ಕೃಷಿ ಸಚಿವ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ನವದೆಹಲಿ (ಪಿಟಿಐ): ಕೃಷಿ ಉತ್ಪನ್ನಗಳ ಅಭಿವೃದ್ಧಿಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ  ₹ 50 ಸಾವಿರ ಕೋಟಿ ವೆಚ್ಚ ಮಾಡಲಿದೆ.

ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಯೋಜನೆಗೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬಜೆಟ್‌ನಲ್ಲಿ ₹ 50 ಸಾವಿರ ಕೋಟಿ ಮೀಸಲಿಡಲಾಗುತ್ತದೆ. ಹೆಚ್ಚುವರಿ ವೆಚ್ಚವನ್ನು ರಾಜ್ಯಗಳು ಭರಿಸಲಿವೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು. ಪ್ರಸಕ್ತ ಸಾಲಿನಲ್ಲಿ ₹ 5,300 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಮೊತ್ತವನ್ನು ಬಳಸಿಕೊಂಡು ಹೆಚ್ಚುವರಿಯಾಗಿ 6 ಲಕ್ಷ ಹೆಕ್ಟೇರ್‌್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. 5 ಲಕ್ಷ ಹೆಕ್ಟೇರ್‌ ಪ್ರದೇಶವು ಹನಿ ನೀರಾವರಿಯ ಪ್ರಯೋಜನ ಪಡೆಯಲಿದೆ. ಅಲ್ಲದೇ 1,300 ಜಲಸಂವರ್ಧನೆ ಯೋಜನೆಗಳು ಈ ವರ್ಷ ಪೂರ್ಣಗೊಳ್ಳಲಿವೆ ಎಂದರು.

ಕ್ಷೇತ್ರ ಮಟ್ಟದಲ್ಲಿ ನೀರಾವರಿ ಹೂಡಿಕೆ ಹೆಚ್ಚಿಸುವುದು, ಇನ್ನಷ್ಟು ಉಳುಮೆ ಭೂಮಿಗೆ ನೀರಾವರಿ ಸೌಲಭ್ಯ ವಿಸ್ತರಿಸುವುದು, ಕೃಷಿಯಲ್ಲಿ ನೀರು ಉಳಿಸುವ ತಂತ್ರಜ್ಞಾನಗಳ ಬಳಕೆ ಇತ್ಯಾದಿ ಕೃಷಿ ಸಿಂಚಾಯಿ ಯೋಜನೆ ಅಡಿ ಬರಲಿವೆ. 

ಆನ್‌ಲೈನ್‌ ಮಾರುಕಟ್ಟೆಗೆ ₹ 200 ಕೋಟಿ: ದೇಶದ 585 ಸಗಟು ಮಾರುಕಟ್ಟೆಗಳನ್ನು ಒಗ್ಗೂಡಿಸಿ ಅಂತರ್ಜಾಲದಲ್ಲಿ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ₹ 200 ಕೋಟಿ ರೂಪಾಯಿ ಮೀಸಲಿಟ್ಟಿದೆ.

ಕೃಷಿ ಇಲಾಖೆ ಈ ಆನ್‌ಲೈನ್‌ ವೇದಿಕೆಯನ್ನು ಸೃಷ್ಟಿಸಲಿದ್ದು, ಆಯ್ದ ನಿಯಂತ್ರಿತ ಮಾರುಕಟ್ಟೆಗಳನ್ನು ಈ ಮಾರುಕಟ್ಟೆ ಅಡಿ ತರಲಾಗುವುದು. ಇನ್ನು ಮುಂದೆ ಇಡೀ ರಾಜ್ಯಕ್ಕೆ ಒಂದೇ ಪರವಾನಗಿ ಇರುತ್ತದೆ. ಒಂದೇ ಕೇಂದ್ರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಕೃಷಿ ಉತ್ಪನ್ನಗಳನ್ನು ಇ–ಹರಾಜು ಮಾಡಲಾಗುತ್ತದೆ. ಇಡೀ ರಾಜ್ಯದ ಮಾರುಕಟ್ಟೆಯಲ್ಲಿ ಏಕರೂಪತೆ ಬರುತ್ತದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ  ತಿಳಿಸಿದರು.

ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ‘ಆನ್‌ ಲೈನ್‌’ ವ್ಯವಸ್ಥೆ ಮಾಡಿರುವ ಮುಂಚೂಣಿ ರಾಜ್ಯವಾಗಿದ್ದು. ಈ ವ್ಯವಸ್ಥೆ ಅಧ್ಯಯನ ಮಾಡಲು ತಾವು ಹಿರಿಯ ಅಧಿಕಾರಿಗಳ ತಂಡದ ಜತೆ ಇದೇ ಒಂಬತ್ತರಿಂದ ಎರಡು ದಿನ ಹುಬ್ಬಳ್ಳಿಯ ಕೃಷಿ ಮಾರುಕಟ್ಟೆಗೆ ಭೇಟಿ ನೀಡುವುದಾಗಿ ಕೃಷಿ ಸಚಿವ  ರಾಧಾ ಮೋಹನ್‌ ಸಿಂಗ್‌ ತಿಳಿಸಿದರು.

ಹುಬ್ಬಳ್ಳಿ ಮಾರುಕಟ್ಟೆಯ ಆನ್‌ಲೈನ್‌ ವ್ಯವಸ್ಥೆ ಉತ್ತಮವಾಗಿದೆ ಎಂದು ಕೇಳಿದ್ದೇನೆ.  ಅದರಿಂದಾಗಿ ಅಲ್ಲಿನ ವ್ಯವಸ್ಥೆ ನೋಡಲು ಹೋಗುತ್ತಿದ್ದೇನೆ ಎಂದೂ ಸಚಿವರು  ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.