ADVERTISEMENT

ನೇಪಾಳ: ಸ್ವದೇಶಕ್ಕೆ ಮರಳಿದ 2 ಸಾವಿರ ಭಾರತೀಯರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 5:45 IST
Last Updated 27 ಏಪ್ರಿಲ್ 2015, 5:45 IST

ಕಠ್ಮಂಡು (ಐಎಎನ್‌ಎಸ್‌): ನೇಪಾಳದಲ್ಲಿ ಭೂಕಂಪದಿಂದ ತೊಂದರೆಗೆ ಸಿಲುಕಿದ್ದ   2 ಸಾವಿರ ಭಾರತೀಯರನ್ನು ಇದುವರೆಗೆ ವಾಯುಪಡೆ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ.

‘ಆಪರೇಷನ್‌ ಮೈತ್ರಿ’ ಹೆಸರಿನಡಿ ಭಾರತೀಯ ವಾಯುಪಡೆ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ  ಶನಿವಾರದಿಂದ ಸೋಮವಾರ ಬೆಳಿಗ್ಗೆ ವರೆಗೆ ಒಟ್ಟು 1,935 ಮಂದಿ ಕಠ್ಮಂಡುವಿನಿಂದ ನವದೆಹಲಿಗೆ ಬಂದಿಳಿದಿದ್ದಾರೆ. 14 ಪ್ರಯಾಣಿಕ ವಿಮಾನಗಳು, 7 ವಿಶೇಷ ವಿಮಾನಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಸಿತನ್ಸು ಖರ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನೇಪಾಳದ ಫೋಕ್ರಾದಿಂದ ಬಸ್‌ ಮೂಲಕವೂ ಭಾರತೀಯರನ್ನು ನವದೆಹಲಿಗೆ ಕಳುಹಿಸಲಾಗುತ್ತಿದೆ. ನೇಪಾಳದಲ್ಲಿನ ಭಾರತೀಯ ರಾಯಭಾರಿ ಕಚೇರಿ ಇದಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆಯ ವಕ್ತಾರ ವಿಕಾಸ್‌ ಸ್ವರೂಪ್‌ ತಿಳಿಸಿದ್ದಾರೆ.

ಕಠ್ಮಂಡು ವಿಮಾನ ನಿಲ್ದಾಣದ ಸಮೀಪದಲ್ಲೇ ಭಾರತೀಯ ವಾಯುಪಡೆ ಪ್ರಾಥಮಿಕ ವೈದ್ಯಕೀಯ ನೆರವಿನ ಕೇಂದ್ರ ತೆರೆದಿದೆ. ಅರೆವೈದ್ಯಕೀಯ ಪಡೆ ಸಿಬ್ಬಂದಿ ಮತ್ತು 25ಕ್ಕೂ ಹೆಚ್ಚು ವೈದ್ಯರು ಇಲ್ಲಿ ಸಮರೋಪಾದಿಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸ್ವರೂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.