ADVERTISEMENT

ನೈಸರ್ಗಿಕ ಅನಿಲ ದರ ನಿಗದಿ: ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ನವದೆಹಲಿ: ನೈಸರ್ಗಿಕ ಅನಿಲ ದರ ಪರಿಷ್ಕರಿಸುವ ಸಂಬಂಧ ಸರ್ಕಾರ ಬಿರುಸಿನ ಸಮಾಲೋಚನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೊಂದಿಗೆ ಈ ಕುರಿತು ಚರ್ಚಿಸಿದರು.

ಇದರೊಂದಿಗೆ ಪ್ರಧಾನಿ ಅವರು ಈ ಸಂಬಂಧ ಪ್ರಧಾನ್‌ ಅವರೊಂದಿಗೆ ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಚರ್ಚೆ ನಡೆಸಿದಂತಾಗಿದೆ. ರಂಗರಾಜನ್‌ ಅವರ ವರದಿ ಪ್ರಕಾರ ನಡೆದಿದ್ದೇ ಆದರೆ, ಸರ್ಕಾರವು ನೈಸರ್ಗಿಕ ಅನಿಲದ ದರವನ್ನು ದುಪ್ಪಟ್ಟು ಹೆಚ್ಚಿಸಬೇಕಾಗುತ್ತದೆ.

ಆದರೆ ಆಗ ಸರ್ಕಾರದ ವಿರುದ್ಧ ಗ್ರಾಹಕರ ಹಿತಾಸಕ್ತಿಯನ್ನು ಕಡೆಗಣಿಸಿದ ಭಾವನೆ ಮೂಡಬಹುದು. ಮತ್ತೊಂದೆಡೆ ಈಗಿನಂತೆ ಪ್ರತಿ ಯೂನಿಟ್‌ಗೆ 4.2 ಡಾಲರ್‌ (253 ರೂಪಾಯಿ) ದರವನ್ನೇ ಮುಂದುವರಿಸಿದರೆ ಆಳ ಸಮುದ್ರದಿಂದ ಹೊಸ ಅನಿಲ ನಿಕ್ಷೇಪಗಳನ್ನು ಶೋಧಿಸಲು ಬಂಡವಾಳ ಹೂಡಲು ಯಾರೂ ಮುಂದೆ ಬಾರದೆ ಹೋಗಬಹುದು.

ಹೀಗಾಗಿ ಸರ್ಕಾರ, ಇವೆರಡರ ಜತೆಗೆ ಹೆಚ್ಚುತ್ತಿರುವ  ಹಣದುಬ್ಬರವನ್ನೂ ಗಮನದಲ್ಲಿರಿಸಿಕೊಂಡು ಮಧ್ಯಮ ಮಾರ್ಗ ಅನುಸರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದೊಮ್ಮೆ ನೈಸರ್ಗಿಕ ಅನಿಲದ ಬೆಲೆ ಹೆಚ್ಚಾದರೆ ತಕ್ಷಣವೇ ಅದು ವಿದ್ಯುತ್‌ ಶುಲ್ಕ, ಇಂಧನ ಬೆಲೆ, ಆಹಾರೋತ್ಪನ್ನಗಳ ಬೆಲೆ ಮತ್ತು ರಸಗೊಬ್ಬರ ಸಬ್ಸಿಡಿ ಇವೆಲ್ಲದರ ಮೇಲೂ ಪರಿಣಾಮ ಬೀರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.