ADVERTISEMENT

ನೋಟಿಸ್‌ ‘ಹಾಸ್ಯಾಸ್ಪದ’ ಎಂದ ಯಾದವ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 13:08 IST
Last Updated 18 ಏಪ್ರಿಲ್ 2015, 13:08 IST

ನವದೆಹಲಿ (ಪಿಟಿಐ): ಆಮ್‌ ಆದ್ಮಿ ಪಕ್ಷವು ತಮಗೆ ನೀಡಿರುವ ಷೋಕಾಸ್‌ ನೋಟಿಸ್‌ ಅನ್ನು ‘ಹಾಸ್ಯಾಸ್ಪದ’ ಎಂದು ಪಕ್ಷದ ಬಂಡಾಯ ಮುಖಂಡ ಯೋಗೇಂದ್ರ ಯಾದವ್ ಅವರು ಟೀಕಿಸಿದ್ದಾರೆ.

ಈ ಸಂಬಂಧ ಪಕ್ಷದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾದವ್ ಟೀಕೆಗಳ ಸುರಿಮಳೆಗೈದಿದ್ದಾರೆ. ಷೋಕಾಸ್‌ ನೋಟಿಸ್‌ ತಮಗೆ ತಲುಪುವ ಮುನ್ನವೇ ಮಾಧ್ಯಮಗಳಿಗೆ ಹೇಗೆ ದೊರೆಯಿತು ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಶಿಸ್ತು ಸಮಿತಿ ಸದಸ್ಯರೇ ಇದನ್ನು ‘ಸೋರಿಕೆ’ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ಶಿಸ್ತು ಸಮಿತಿಯ ಅಧ್ಯಕ್ಷ ದಿನೇಶ್ ವಘೇಲಾ ಅವರ ಅನುಪಸ್ಥಿತಿಯಲ್ಲಿ ಶಿಸ್ತು ಸಮಿತಿ ಈ ಕ್ರಮಕ್ಕೆ ಹೇಗೆ ಮುಂದಾಯಿತು ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

‘ಶಿಸ್ತು ಸಮಿತಿಯ ಮುಖ್ಯಸ್ಥರಾದ ವಘೇಲಾ ಅವರೊಂದಿಗೆ ನಾನು ಕಳೆದ ಸಂಜೆಯಷ್ಟೇ ಮಾತಾಡಿದ್ದೆ. ಅವರು ತಾನು ದೆಹಲಿಯಲ್ಲಿ ಇಲ್ಲ ಎಂದು ಹೇಳಿದ್ದರು. ಸುದ್ದಿವಾಹಿನಿಗಳನ್ನು ಹೊರತು ಪಡಿಸಿ ನಮಗೆ ಷೋಕಾಸ್‌ ನೋಟಿಸ್ ನೀಡುವ ಸಾಧ್ಯತೆಗಳ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿದ್ದರು. ಈ ಸಂಬಂಧ ತಮ್ಮ ಮುಂದೆ ಯಾವುದೇ ವಿಷಯಗಳೂ ಬಂದಿಲ್ಲ ಎಂದಿದ್ದರು’ ಎಂದು ಯಾದವ್ ಅವರು ಹೇಳಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.