ADVERTISEMENT

ನ್ಯಾಯಬೆಲೆ ಅಂಗಡಿ ಮುಂದೆ ಸಬ್ಸಿಡಿ ಫಲಕ ಕಡ್ಡಾಯ: ಕೇಂದ್ರ

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ನ್ಯಾಯಬೆಲೆ ಅಂಗಡಿ ಮುಂದೆ ಸಬ್ಸಿಡಿ ಫಲಕ ಕಡ್ಡಾಯ: ಕೇಂದ್ರ
ನ್ಯಾಯಬೆಲೆ ಅಂಗಡಿ ಮುಂದೆ ಸಬ್ಸಿಡಿ ಫಲಕ ಕಡ್ಡಾಯ: ಕೇಂದ್ರ   

ನವದೆಹಲಿ: ಸಬ್ಸಿಡಿಯಲ್ಲಿ ದೊರೆಯುವ ಆಹಾರ ಧಾನ್ಯಗಳ  ಸಮಗ್ರ ಮಾಹಿತಿ ಒಳಗೊಂಡ ಫಲಕಗಳನ್ನು   ಪಡಿತರ ಅಂಗಡಿಗಳ ಮುಂದೆ ಕಡ್ಡಾಯವಾಗಿ ನೇತು ಹಾಕುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ.

‘ಆಹಾರ ಸಾಮಗ್ರಿಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿಯ ಸಮಗ್ರ ವಿವರಗಳ ಫಲಕಗಳನ್ನು ಪಡಿತರ ಅಂಗಡಿಗಳ ಮುಂದೆ ಪ್ರದರ್ಶಿಸಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಆಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

‘ನ್ಯಾಯಬೆಲೆ ಅಂಗಡಿಗಳ ಮಾಲೀಕರು ನಿಗದಿತ ದರಕ್ಕಿಂತ ದುಬಾರಿ ದರದಲ್ಲಿ ಪಡಿತರ ಮಾರಾಟ ಮಾಡುವ ಪ್ರವೃತ್ತಿಗೆ ಇದರಿಂದ ಕಡಿವಾಣ ಬೀಳಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಎರಡು ರೂಪಾಯಿಗಳಿಗೆ 1 ಕೆ.ಜಿ  ಗೋಧಿ ಮತ್ತು ಮೂರು ರೂಪಾಯಿಗಳಿಗೆ 1 ಕೆ.ಜಿ   ಅಕ್ಕಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌) ಮೂಲಕ ಮಾರಾಟ ಮಾಡಲಾಗುತ್ತಿದೆ.

‘ಪ್ರತಿ ಕೆ.ಜಿ. ಗೋಧಿಯ ₹22 ಮತ್ತು ಅಕ್ಕಿಯ ₹29.64 ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತದೆ. ಆದರೆ, ಬಹುತೇಕ ರಾಜ್ಯಗಳು ಅಂತಹ ಕೊಡುಗೆ ತಮ್ಮದು  ಎನ್ನುವಂತೆ ಪ್ರಚಾರ  ಮಾಡುತ್ತಿವೆ’ ಎಂದು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಮತ್ತು  ಇನ್ನೆರಡು ರಾಜ್ಯಗಳು ಮಾತ್ರ ಇನ್ನುಳಿದ ಸಬ್ಸಿಡಿ ಹಣವನ್ನು ತಾವು ಭರಿಸಿ  ಜನರಿಗೆ ಉಚಿತವಾಗಿ ಅಕ್ಕಿ ವಿತರಿಸುತ್ತಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.