ADVERTISEMENT

ಪಂಕಜಾ ಮುಂಡೆ ವಿರುದ್ಧ ಅರ್ಜಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2015, 19:31 IST
Last Updated 1 ಜುಲೈ 2015, 19:31 IST

ಮುಂಬೈ (ಪಿಟಿಐ): ಸ್ಥಳೀಯ ಕಂಪೆನಿಯೊಂದು ಪೂರೈಸಿರುವ ಕಲಬೆರಕೆಯುಕ್ತ ಮಕ್ಕಳ ಆಹಾರ ನಿಷೇಧಿಸಲು ಅದೇಶ ನೀಡುವಂತೆ ಮಹಾರಾಷ್ಟ್ರದ ಸಚಿವೆ ಪಂಕಜಾ  ಮುಂಡೆ ಹಾಗೂ ರಾಜ್ಯದ ಸಂಬಂಧಿತ ಇಲಾಖೆಗೆ ಅದೇಶ ನೀಡುವಂತೆ ಕೋರಿ ಇಲ್ಲಿನ ಅಹ್ಮದ್‌ನಗರ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಮೊಕದ್ದಮೆಯೊಂದು ದಾಖಲಾಗಿದೆ.

ಪುಣೆ ಮೂಲದ ಹೋರಾಟಗಾರ ಹೇಮಂತ್‌  ಪಾಟೀಲ್‌ ಅವರು ಸಲ್ಲಿರುವ ಮನವಿಯಲ್ಲಿ ಪಂಕಜಾ ಮುಂಡೆ ಮತ್ತು ಸೂರ್ಯಕಾಂತ ಮಹಿಳಾ ಚಿಕ್ಕಿ  ಸೆಂಟರ್‌ ಅನ್ನು ಪ್ರತಿವಾದಿಗಳನ್ನಾಗಿಸಿದೆ.

ಬುಡಕಟ್ಟು ಸಮುದಾಯದ ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಿದ್ದ ‘ಚಿಕ್ಕಿ’ಯಲ್ಲಿ ಮಣ್ಣು ಮತ್ತಿತರ ಕಲಬೆರಕೆ ಅಂಶಗಳು ಪತ್ತೆಯಾಗಿದ್ದವು. ಬುಡಕಟ್ಟು ಮಕ್ಕಳಿಗಾಗಿ ಈ ಆಹಾರವನ್ನು ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಇದಾದ ಬೆನ್ನಲ್ಲೇ 11 ಲಕ್ಷ ಪೊಟ್ಟಣಗಳನ್ನು ಮಾರಾಟ ಮಾಡಲಾಯಿತು. ಪೈಕಿ 7 ಲಕ್ಷ ಪಟ್ಟಣಗಳು ಇನ್ನೂ ಮಾರುಕಟ್ಟೆಯಲ್ಲಿವೆ ಎನ್ನಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
*
ಮಾತುಗಳ ಹಗರಣದ ಆರೋಪ
ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಪಂಕಜಾ ಮುಂಡೆ ಅವರು ತಮ್ಮ ವಿರುದ್ಧದ ₹ 206 ಕೋಟಿಗಳ ಹಗರಣದ ಆರೋಪವನ್ನು ‘ಮಾತುಗಳ ಹಗರಣ’ ಎಂದು ಬಣ್ಣಿಸಿದ್ದಾರೆ.

ಮಕ್ಕಳಿಗಾಗಿ ಪಠ್ಯ ಮತ್ತು ಪಠ್ಯೇತರ ಸಾಮಗ್ರಿಗಳ ಖರೀದಿಗೆ ಗುತ್ತಿಗೆ ನೀಡುವಲ್ಲಿ ₹ 206ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ  ಬುಧವಾರ ಇಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಹಿಂದಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅದೇ ಸಾಮಗ್ರಿಗಳನ್ನು ₹ 408 ಕೋಟಿ ಮೊತ್ತಕ್ಕೆ ಖರೀದಿ ಮಾಡಿತ್ತು. ಅದನ್ನು ‘ಖರೀದಿ’ ಎನ್ನುವ ನೀವು, ನಾವು ದಾಸ್ತಾನು ಮಾಡಿದ್ದನ್ನು ‘ಹಗರಣ’ ಎನ್ನುತ್ತಿದ್ದೀರಿ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಮಾತುಗಳ ಹಗರಣ.ಹಾಗೂ ರಾಜಕೀಯ ಪ್ರೇರಿತವಾದುದು’ ಎಂದು ಅವರು ವ್ಯಾಖ್ಯಾನಿಸಿದರು. ’ಸರ್ಕಾರದ ನೆರವಿನಿಂದ ಪ್ರತಿ ಮಗುವೂ ಅಪೌಷ್ಟಿಕತೆಯಿಂದ ಪಾರಾಗಬೇಕು‌ಎಂಬುದು ನನ್ನಾಸೆ.  ನನ್ನ ಮೇಲಿನ ಎಲ್ಲಾ ಆರೋಪಗಳನ್ನೂ ನಾನು ಅಲ್ಲಗಳೆಯುತ್ತೇನೆ. ಆದರೆ ಬಿಜೆಪಿಯ ಪ್ರತಿ ಸಚಿವರ ಬೆನ್ನಿಗೂ ಯಾವುದಾದರೊಂದು ಹಗರಣ ಅಂಟಿಕೊಳ್ಳಬೇಕು ಎಂಬುದು ವಿರೋಧಪಕ್ಷಗಳ ಇಚ್ಛೆ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT