ADVERTISEMENT

ಪಕ್ಷಗಳೊಂದಿಗೆ ಮಾತುಕತೆಗೆ ಜಂಗ್ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 10:45 IST
Last Updated 29 ಅಕ್ಟೋಬರ್ 2014, 10:45 IST
ಪಕ್ಷಗಳೊಂದಿಗೆ ಮಾತುಕತೆಗೆ ಜಂಗ್ ನಿರ್ಧಾರ
ಪಕ್ಷಗಳೊಂದಿಗೆ ಮಾತುಕತೆಗೆ ಜಂಗ್ ನಿರ್ಧಾರ   

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆ ಸಾಧ್ಯತೆಗಳ ಬಗ್ಗೆ ಚರ್ಚಿಸಲು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ರಾಜ್ಯಪಾಲ ಲೆಫ್ಟಿನೆಂಟ್ ಗವರ್ನರ್‌ ನಜೀಬ್‌ ಜಂಗ್ ಅವರು ನಿರ್ಧರಿಸಿದ್ದಾರೆ.

ಸರ್ಕಾರ ರಚನೆ ನಿಟ್ಟಿನಲ್ಲಿ ಐದು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡ ಒಂದು ದಿನ ಬಳಿಕ ಈ ಬೆಳವಣಿಗೆ ನಡೆದಿದೆ.

ಮಂಗಳವಾರ ರಾತ್ರಿಯಷ್ಟೇ ವಿದೇಶದಿಂದ ವಾಪಸ್ಸಾದ ಜಂಗ್ ಅವರು ಬುಧವಾರ ಬೆಳಿಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು.

ADVERTISEMENT

ದೆಹಲಿಯಲ್ಲಿ ರಾಜಕೀಯ ಅಸ್ಥಿರತೆಯನ್ನು ಕೊನೆಗಾಣಿಸಲು ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಲು ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.

ಸರ್ಕಾರ ರಚನೆ ಸಂಬಂಧ ಅಭಿಪ್ರಾಯ ತಿಳಿದುಕೊಳ್ಳಲು ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ‘ಶೀಘ್ರವೇ’ ಆಹ್ವಾನಿಸಿ, ಬಳಿಕ ಎಎಪಿ ಹಾಗೂ ಕಾಂಗ್ರೆಸ್ ಪಕ್ಷಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ರಾಜಭವನದ ಮೂಲಗಳು ಹೇಳಿವೆ.

ಸರ್ವಪಕ್ಷ ಸಭೆಗೆ ಕೇಜ್ರಿವಾಲ್‌ ಒತ್ತಾಯ: ದೆಹಲಿ ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿರುವ ಆಮ್ ಆದ್ಮಿ ಪಕ್ಷವು (ಎಎಪಿ), ಅಂತಿಮ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಸಂಜೆಯ ಒಳಗಾಗಿ ಸರ್ವ ಪಕ್ಷ ಸಭೆ ಕರೆಯುವಂತೆ ಜಂಗ್ ಅವರನ್ನು ಬುಧವಾರ ಆಗ್ರಹಿಸಿದೆ.

‘ಅಂತಿಮ ನಿರ್ಣಯ ಕೈಗೊಳ್ಳುವ ಸಂಬಂಧ ಲೆಫ್ಟಿನೆಂಟ್‌ ಗವರ್ನರ್‌ ಅವರು ಇಂದೇ ಸರ್ವಪಕ್ಷ ಸಭೆ ಕರೆಯಬೇಕು. ಸಂಜೆಯೊಳಗೆ ನಿರ್ಧಾರ ಕೈಗೊಂಡು ಅದನ್ನು ನಾಳೆ ನ್ಯಾಯಾಲಯಕ್ಕೆ ತಿಳಿಸಬೇಕು’ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.