ADVERTISEMENT

ಪಟಾಕಿ ಮಳಿಗೆಯಲ್ಲಿ ಬೆಂಕಿ: ಏಳು ಸಾವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

ಜೈಪುರ (ಪಿಟಿಐ): ರಾಜಸ್ತಾನದ ಬಾರ್ಮೇರ್ ಜಿಲ್ಲೆಯ ಪಟಾಕಿ ಮಾರಾಟ ಮಳಿಗೆಯೊಂದರಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಅಂಗಡಿ ಮಾಲೀಕ ಮತ್ತು ಆತನ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ಬಲೋತರ ಪಟ್ಟಣದ ಶಾಸ್ತ್ರಿ ಚೌಕ ಮಾರುಕಟ್ಟೆಯಲ್ಲಿರುವ ಈ ಮಳಿಗೆ ಮುಂದೆ ಬುಧವಾರ ತಡರಾತ್ರಿ ಕೆಲವು ಮಕ್ಕಳು ಪಟಾಕಿ ಹೊಡೆಯುತ್ತಿದ್ದಾಗ ಈ ಘಟನೆ ಸಂಬಂಧಿಸಿದೆ. ಪಟಾಕಿಗೆ ಬೆಂಕಿ ತಗುಲದಂತೆ ತಡೆಯಲು ಮಳಿಕೆಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡಿದ್ದರು. ಆದರೆ ರಾತ್ರಿ 1.20ರ ಸುಮಾರಿಗೆ ಬೆಂಕಿ ಕಿಡಿಯೊಂದು ಒಳಗೆ ಬಂದು ಅವಘಡಕ್ಕೆ ಕಾರಣವಾಯಿತು. ಬಾಗಿಲು ಹಾಕಿಕೊಂಡಿದ್ದರಿಂದ ಮಳಿಗೆ ಒಳಗಿದ್ದ ಏಳು ಮಂದಿ ಸಿಲುಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿ ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆದರು.

ಸೈನಿಕರ ನಡುವೆ ಸಿಹಿ ಹಂಚಿಕೆ ಇಲ್ಲ
ಅಮೃತಸರ (ಐಎಎನ್‌ಎಸ್‌): ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಗಡಿಯಲ್ಲಿನ ಪಾಕಿಸ್ತಾನ ಸೈನಿಕರೊಂದಿಗೆ ಸಿಹಿ ತಿನಿಸು ವಿನಿಮಯ ಮಾಡಿಕೊಳ್ಳುತ್ತಿದ್ದ ಅಟ್ಟಾರಿಯಲ್ಲಿನ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ದೀಪಾವಳಿ ಹಬ್ಬದಂದು ಸಿಹಿ ವಿನಿಮಯ ಮಾಡುವ ಗೋಜಿಗೆ ಹೋಗಲಿಲ್ಲ.

ಈದ್‌ ಹಬ್ಬದ ಸಂದರ್ಭದಲ್ಲಿಯೂ ಸೈನಿಕರು ಪರಸ್ಪರ ಸಿಹಿ ಹಂಚಿ ಶುಭಾಶಯ ಕೋರುವ ವಾಡಿಕೆಯನ್ನು ಪಾಲಿಸಿರಲಿಲ್ಲ.
ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ಧಾರ್ಮಿಕ ಹಬ್ಬದ ಸಂದರ್ಭದಲ್ಲಿ ಗಡಿಯಲ್ಲಿನ ಭಾರತ ಮತ್ತು ಪಾಕ್‌ ಸೈನಿಕರು ಸಿಹಿ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ ಪಾಕ್‌ ಸತತ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರಿಂದ ಈ ಸಂಪ್ರದಾಯ ಪಾಲನೆಯಾಗಿಲ್ಲ.

ಆಕಾಶವಾಣಿಯಲ್ಲಿ ಮೋದಿ ಕಾರ್ಯಕ್ರಮ
ನವದೆಹಲಿ (ಪಿಟಿಐ)
: ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿ ಮಾತುಕತೆ ‘ಮನ್‌ ಕಿ ಬಾತ್‌’ನ ಎರಡನೇ ಕಾರ್ಯಕ್ರಮ  ನವೆಂಬರ್‌ 2ರಂದು ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಉತ್ತಮ ಆಡಳಿತಕ್ಕೆ ಸಂಬಂಧಿಸಿದಂತೆ ಸಲಹೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕೆಲವು ವ್ಯಕ್ತಿಗಳನ್ನು ಮೋದಿ ಅವರು ಆಹ್ವಾನಿಸಿದ್ದಾರೆ.

‘ನ.2ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿರುವ ‘ಮನ್‌ ಕಿ ಬಾತ್‌’ನ ಎರಡನೇ ಕಂತಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಶಾರದಾ ಹಗರಣ: ಆರೋಪಪಟ್ಟಿ ಸಲ್ಲಿಕೆ
ಕೋಲ್ಕತ್ತ (ಪಿಟಿಐ
): ಬಹುಕೋಟಿ ಶಾರದಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಿಂಗಳಿನಿಂದ ತನಿಖೆ ನಡೆಸುತ್ತಿರುವ ಸಿಬಿಐ ಮೊದಲ ಆರೋಪಪಟ್ಟಿಯನ್ನು ಇಲ್ಲಿನ ಸಿಟಿ ಸೆಷನ್ಸ್‌ ಕೋರ್ಟ್‌ಗೆ ಗುರುವಾರ ಸಲ್ಲಿಸಿತು.

25 ಪುಟಗಳ ಆರೋಪಪಟ್ಟಿಯಲ್ಲಿ ಶಾರದಾ ಸಮೂಹದ ಮುಖ್ಯಸ್ಥ ಸುದೀಪ್ತ ಸೆನ್‌, ಸಹವರ್ತಿ ದೇಬ್ಜಾನಿ ಮುಖರ್ಜಿ ಮತ್ತು ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡ ಕುನಾಲ್ ಘೋಷ್‌ ಅವರ ಮೇಲೆ ಸಿಬಿಐ ಆರೋಪ ಹೊರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.