ADVERTISEMENT

ಪಡಿತರ, ಎಲ್‌ಪಿಜಿಗಷ್ಟೇ ಆಧಾರ್‌

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:54 IST
Last Updated 7 ಅಕ್ಟೋಬರ್ 2015, 19:54 IST

ನವದೆಹಲಿ (ಪಿಟಿಐ): ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಆಗಸ್ಟ್‌ 11ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಮಾರ್ಪಡಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದ್ದು, ಪಡಿತರ ಹಾಗೂ ಅಡುಗೆ ಅನಿಲ ವಿತರಣೆಗಷ್ಟೇ ಆಧಾರ್‌ ಕಾರ್ಡ್‌ ಬಳಸಬೇಕು ಎಂದು ಹೇಳಿದೆ.

ನ್ಯಾಯಮೂರ್ತಿ ಜೆ. ಚಲ್ಮೇಶ್ವರ್‌ ಅವರನ್ನೊಳಗೊಂಡ ನ್ಯಾಯಪೀಠ, ಈ ಆದೇಶ ನೀಡಿದ್ದು,  ಇದರಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಸಾಂವಿಧಾನಿಕ ಪೀಠದ ಮುಂದಿದ್ದು, ಮಧ್ಯಂತರ ಆದೇಶ ಮಾರ್ಪಡಿಸಲು ಸಾಧ್ಯವಿಲ್ಲ. ಈ ಆದೇಶದಲ್ಲಿ ಏನಾದರೂ ಮಾರ್ಪಡು ಮಾಡುವುದಿದ್ದರೆ ಸ್ಪಷ್ಟನೆ ನೀಡುವುದಿದ್ದರೆ ಅಥವಾ ಸಡಿಲಿಕೆ ಮಾಡುವುದಿದ್ದರೆ ಸಾಂವಿಧಾನಕ ಪೀಠವೇ ತೀರ್ಪು ನೀಡಬೇಕು ಎಂದು ಕೋರ್ಟ್‌ ಹೇಳಿದೆ.

ಆಧಾರ್‌ ಕಾರ್ಡ್‌ ಪಡೆಯುವುದು ಐಚ್ಛಿಕ ಎಂದು ಹೇಳಿದ್ದ ಸುಪ್ರೀಂಕೋರ್ಟ್‌ ಪಡಿತರ ಮತ್ತು  ಎಲ್‌ಪಿಜಿ ವಿತರಣೆಗಷ್ಟೇ ಸರ್ಕಾರ ಅದನ್ನು ಬಳಸಬೇಕು ಎಂದು ಹೇಳಿತ್ತು. ಈ ಆದೇಶ ಮಾರ್ಪಡಿಸುವಂತೆ ಕೇಂದ್ರ ಸರ್ಕಾರ, ಆರ್‌ಬಿಐ, ಸೆಬಿ, ಟ್ರಾಯ್‌ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ಹಾಗೂ ಜಾರ್ಖಂಡ್‌ ಮತ್ತು ಗುಜರಾತ್‌ ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಆಧಾರ್‌ ಕಾರ್ಡ್‌ಗಾಗಿ ಜೈವಿಕ ಮಾಹಿತಿ ಸಂಗ್ರಹಿಸುವುದರಿಂದ ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗುತ್ತದೆಯೇ ಎಂಬ ಪ್ರಶ್ನೆ ಎತ್ತಿ ಹಲವು ಅರ್ಜಿಗಳನ್ನು ಈ ಹಿಂದೆ ಸಲ್ಲಿಸಲಾಗಿತ್ತು. ಆ ಅರ್ಜಿಗಳ ವಿಚಾರಣೆ ವಿಸ್ತೃತ ಸಾಂವಿಧಾನಿಕ ಪೀಠದ ಮುಂದಿದೆ. ಆಧಾರ್‌ನಿಂದ ಖಾಸಗಿತನದ ಹಕ್ಕು ಉಲ್ಲಂಘನೆಯಾಗುತ್ತೆಯೇ? ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿದೆಯೇ? ಹಾಗಿದ್ದಲ್ಲಿ ಅದರ ಸ್ವರೂಪ ಏನಿರಬೇಕು ಎಂಬ ಪ್ರಶ್ನೆಗಳು ಸಾಂವಿಧಾನಿಕ ಪೀಠ ಮುಂದಿದೆ.

90 ಕೋಟಿ ನಾಗರಿಕರಿಗೆ ಈಗಾಗಲೇ ಆಧಾರ್‌ ನೀಡಲಾಗಿದೆ. ಅದರ ಮೂಲಕ ಸಮಾಜದ ದುರ್ಬಲ ವರ್ಗವನ್ನು ತಲುಪಲು ಯತ್ನಿಸಲಾಗುತ್ತಿದೆ.  ಧನ ಜನ ಯೋಜನೆಯಂತಹ ಅಭಿವೃದ್ಧಿ ಯೋಜನೆಗಳಿಗೆ ಇದನ್ನು ಬಳಸಲಾಗುತ್ತದೆ ಎಂದು ಅಟಾರ್ನಿ ಜನರಲ್‌ ಮುಕಲ್‌ ರೋಹಟಗಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.