ADVERTISEMENT

ಪತ್ನಿ ದಪ್ಪಗಾಗಿದ್ದಕ್ಕೆ ವಿಚ್ಛೇದನ ಸಾಧ್ಯವಿಲ್ಲ

ಬಾಂಬೆ ಹೈಕೋರ್ಟ್‌ ಅಭಿಪ್ರಾಯ  

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ಮುಂಬೈ (ಪಿಟಿಐ):  ಮದುವೆ ನಂತರ ಮಹಿಳೆ ದಪ್ಪಗಾಗಿದ್ದಾಳೆ ಎಂಬ ಕಾರಣ ಆಧರಿಸಿ ವಿಚ್ಛೇದನಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.  ಪತ್ನಿ ದಪ್ಪಗಾದ ಕಾರಣ ತಾನು ದಾಂಪತ್ಯ  ಸುಖ ಅನುಭವಿಸಲು ಸಾಧ್ಯವಾಗುತ್ತಿಲ್ಲ  ಎಂದು ವ್ಯಕ್ತಿಯೊಬ್ಬ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸ್ತನದ ಗಾತ್ರಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆ ಹೊಂದಿದ್ದ ಪತ್ನಿ ಮದುವೆಗೆ ಮೊದಲು ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಳು. ಆ ಕಾರಣದಿಂದ ಆಕೆ ದಿನೇದಿನೇ ದಪ್ಪಗಾಗುತ್ತ ಹೋದಳು. ಇದರಿಂದಾಗಿ ತನಗೆ ದಾಂಪತ್ಯ ಸುಖ ಅನುಭವಿಸಲು ಸಾಧ್ಯ­ವಾಗಲಿಲ್ಲ. ಅಲ್ಲದೇ, ಶಸ್ತ್ರಚಿಕಿತ್ಸೆಯ ವಿಷಯವನ್ನು ಆಕೆ ಮುಚ್ಚಿಟ್ಟಿದ್ದಳು ಎಂದು ಪತಿ ಅರ್ಜಿಯಲ್ಲಿ ದೂರಿದ್ದ.

ಸೊಲ್ಲಾಪುರದ ವಧು–ವರರ ಕೇಂದ್ರದ ಮೂಲಕ ಆಕೆಯನ್ನು ತಾನು ಭೇಟಿಯಾಗಿದ್ದು, ಅಲ್ಲಿ ಆಕೆ ನೀಡಿದ ಮಾಹಿತಿಯಲ್ಲಿ ಶಸ್ತ್ರಚಿಕಿತ್ಸೆ ವಿವರ ಇರಲಿಲ್ಲ. ಬೊಜ್ಜಿಗೆ ಚಿಕಿತ್ಸೆ ಪಡೆಯುವಂತೆ ಹೇಳಿದರೂ ಆಕೆ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ.  ಮನೆಕೆಲಸ ಮಾಡುತ್ತಿರಲಿಲ್ಲ. ಪತ್ನಿಯಾಗಿ ಯಾವ ಕರ್ತವ್ಯವನ್ನೂ ಈಡೇರಿಸಿಲ್ಲ ಎಂದೂ ಪತಿ ಆರೋಪಿಸಿದ್ದ.

ಪುಣೆಯ ಕೌಟುಂಬಿಕ ನ್ಯಾಯಾಲಯ ವಿಚ್ಛೇದನದ ಅರ್ಜಿಯನ್ನು ತಿರಸ್ಕರಿಸಿದ ನಂತರ, ಆತ ಬಾಂಬೆ ಹೈಕೋರ್ಟ್‌ ಮೆಟ್ಟಿಲು ಏರಿದ್ದ. ವಧು–ವರರ ಕೇಂದ್ರದ ಅರ್ಜಿ ನಮೂನೆಯಲ್ಲಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಅಂಕಣ ಇಲ್ಲದ ಕಾರಣ  ಆ ವಿಚಾರ ಅಲ್ಲಿ ನಮೂದಿಸಿರಲಿಲ್ಲ. ಆದರೆ, ಮದುವೆ ಸಮಾರಂಭಕ್ಕೂ ಮುನ್ನ ಈ ವಿಚಾರ ತಿಳಿಸಲಾಗಿತ್ತು ಎಂದು ಪತ್ನಿ ಕೋರ್ಟ್‌ಗೆ ತಿಳಿಸಿದಳು.

ತಮ್ಮ ದಾಂಪತ್ಯ ಮುರಿದುಬಿದ್ದಿದ್ದು ಹಿಂದಿನಂತೆ ಜತೆಯಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದೂ ಪತಿ ಕೋರ್ಟ್‌ಗೆ ತಿಳಿಸಿದ್ದ. ದಾಂಪತ್ಯ ಮುರಿದುಬಿದ್ದಿದೆ ಎಂದು ಪತಿ ಹೇಳಿದರೂ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಪತ್ನಿ ವಿರುದ್ಧ ಮಾಡಿರುವ ಆರೋಪಗಳಿಗೆ ಬಲವಾದ ಸಮರ್ಥನೆ ನೀಡಲು ಆತನಿಗೆ ಸಾಧ್ಯವಾಗಿಲ್ಲ. ಹೆಂಡತಿ ಜಗಳಗಂಟಿ. ಮನೆಗೆಲಸ ಮಾಡುತ್ತಿಲ್ಲ. ಆಕೆ ದಪ್ಪಗಾಗಿದ್ದಾಳೆ ಎಂಬ ಕಾರಣಕ್ಕೆ ವಿಚ್ಛೇದನ  ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.