ADVERTISEMENT

ಪತ್ನಿ ವಿವಾದದಲ್ಲಿ ಮೋದಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕಾನೂನು ಕುಣಿಕೆ­ಯಲ್ಲಿ ಸಿಲುಕಿಸಲು ಯತ್ನಿಸಿರುವ ಕಾಂಗ್ರೆಸ್‌, ಈ ಹಿಂದಿನ ಚುನಾವಣೆಗಳ ವೇಳೆ ತಮ್ಮ ವೈವಾಹಿಕ ಮಾಹಿತಿ ಮರೆಮಾಚಿ ಪ್ರಮಾಣಪತ್ರಗಳನ್ನು ಸಲ್ಲಿ­ಸಿದ್ದ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಅಲ್ಲದೆ, 2009ರಲ್ಲಿ ಮೋದಿ ಅವರ ಆದೇಶದ ಮೇರೆಗೆ ಯುವತಿಯೊಬ್ಬರ ಚಲನವಲನದ ಮೇಲೆ ಬೇಹುಗಾರಿಕೆ ನಡೆಸಿದ್ದ ಪ್ರಕರಣದ ವಿಚಾರಣೆಗಾಗಿ ಶೀಘ್ರವೇ ನ್ಯಾಯಮೂರ್ತಿಯವರನ್ನು ನೇಮಿಸಲಾ­ಗುವುದು ಎಂದೂ ಕಾನೂನು ಸಚಿವ ಕಪಿಲ್‌ ಸಿಬಲ್‌ ಸುದ್ದಿಗಾರರಿಗೆ ತಿಳಿಸಿದರು.

ಮೋದಿ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ   ಆಯೋಗದ ಕಚೇರಿಗೆ ತಮ್ಮ ನೇತೃ­ತ್ವ­ದಲ್ಲಿ ಅವರು ನಿಯೋಗ ತೆಗೆದುಕೊಂಡು ಹೋಗಿದ್ದರು.

‘ಮೋದಿ ಅವರ ಆದೇಶದ ಮೇರೆಗೆ ನಡೆದಿದೆ ಎನ್ನಲಾದ ಯುವತಿಯ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸರ್ಕಾರ ಕೈಬಿಟ್ಟಿಲ್ಲ. ಇದರ ವಿಚಾರಣೆಗೆ ನ್ಯಾಯಮೂರ್ತಿಯಾಗಿ ಯಾರನ್ನು ನೇಮಿಸಬೇಕು ಎಂಬುದೂ ಈಗಾಗಲೇ ನಿಗದಿಯಾಗಿದೆ. ಹೆಸರನ್ನು ಯಾವಾಗ ಪ್ರಕಟಿಸಬೇಕೆಂಬುದನ್ನು ನಿರ್ಧ­ರಿಸಲಾಗುವುದು’ ಎಂದರು.

ಮೋದಿ ಅವರ ವೈವಾಹಿಕ ವಿಷಯ ಮುಂದಿ­ಟ್ಟುಕೊಂಡು ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಟೀಕೆ ಮಾಡಿದ ದಿನದಂದೇ ಕಾಂಗ್ರೆಸ್‌ ನಿಯೋಗವು ಈ ಕುರಿತು ಆಯೋಗಕ್ಕೆ ದೂರು ನೀಡಿದೆ.

ರಾಹುಲ್‌ ವ್ಯಂಗ್ಯ:‘ಮಹಿಳೆಯರಿಗೆ ಸುರಕ್ಷತೆಯ ಅಭಯ ನೀಡುವ ಮಾತುಗಳನ್ನು ಬಿಜೆಪಿ ಆಡುತ್ತಿದೆ. ಆದರೆ, ಆ ಪಕ್ಷದ ಪ್ರಧಾನಿ ಅಭ್ಯರ್ಥಿಯಾದವರು ನಾಮ­ಪತ್ರ ಪ್ರಮಾಣಪತ್ರದಲ್ಲಿ ಪತ್ನಿಯ ಹೆಸರು ನಮೂದಿಸಲು ಇಷ್ಟೊಂದು ಚುನಾವಣೆ­ಗಳ ತನಕ ಕಾಯಬೇಕಾಯಿತು’ ಎಂದು ರಾಹುಲ್‌ ಗಾಂಧಿ ಜಮ್ಮು ಕಾಶ್ಮೀರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ವ್ಯಂಗ್ಯವಾಡಿದರು.
ತಾವು ವಿವಾಹಿತ ಎಂದು ಮೋದಿ ಇದೇ ಮೊದಲ ಬಾರಿಗೆ ಬಹಿರಂಗ­ಪಡಿಸಿದ್ದಾರೆ. ದೆಹಲಿಯಲ್ಲಿ ಅವರು ಮಹಿಳೆಯರನ್ನು ಘನತೆಯಿಂದ ಕಾಣುವ ಬಗ್ಗೆ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಪ್ರಮಾಣ­ಪತ್ರದಲ್ಲಿ ಪತ್ನಿಯ ಹೆಸರನ್ನೇ ನಮೂದಿಸುವುದಿಲ್ಲ ಎಂದು ರಾಹುಲ್‌ ಚುಚ್ಚಿದರು.

ವಡೋದರಾ ಲೋಕಸಭಾ ಕ್ಷೇತ್ರ­ದಿಂದ ಸಲ್ಲಿಸಿದ ನಾಮಪತ್ರದ ಜತೆಗಿನ ಪ್ರಮಾಣಪತ್ರದಲ್ಲಿ ಮೋದಿ ಅವರು ‘ನಾನು ವಿವಾಹಿತ’ ಎಂದು ಘೋಷಿಸಿದ್ದಾರೆ. ಮೋದಿ ಅವರು ತಾವು ವಿವಾಹಿತ ಎಂದು ಬಹಿರಂಗಪಡಿಸಿ­ರುವುದು ಇದೇ ಮೊದಲ ಸಲ. ಈ ಹಿಂದಿನ ಚುನಾವಣೆಗಳಲ್ಲೆಲ್ಲಾ ಅವರು ಪ್ರಮಾಣಪತ್ರದ ವೈವಾಹಿಕ ಸ್ಥಿತಿಯ ಕಾಲಂನಲ್ಲಿ ಏನನ್ನೂ ಬರೆಯದೆ ಹಾಗೆಯೇ ಬಿಟ್ಟಿದ್ದರು.

ಸುಳ್ಳು ಹೇಳಿಲ್ಲ– ಬಿಜೆಪಿ: ವೈವಾಹಿಕ ಸ್ಥಿತಿ ಮಾಹಿತಿ ವಿವಾದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ‘ಅವರೇನೂ ಈ ವಿಷಯದಲ್ಲಿ ಸುಳ್ಳು ಹೇಳಿಲ್ಲ. ಅಲ್ಲದೆ, ಇದರಿಂದ ಯಾರಿಗೇ ಆಗಲಿ ಅನ್ಯಾಯವಾಗಿಲ್ಲ’ ಎಂದಿದೆ. ಅಲ್ಲದೆ, ತಮ್ಮ ಪಕ್ಷದ ನಾಯಕರ ಖಾಸಗಿ ವಿಷಯಗಳನ್ನು ಬೀದಿಗೆಳೆಯು­ತ್ತಿರುವ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿರುವ ಬಿಜೆಪಿ,  ಗಾಂಧಿ ಕುಟುಂಬದ ಹಲವು ವಿಷಯಗಳೂ ತನಗೆ ತಿಳಿದಿದೆ ಎಂದು ಹೇಳಿದೆ.

ರಾಹುಲ್‌ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರೆ ನಿರ್ಮಲಾ ಸೀತಾ­ರಾ­ಮನ್‌, ‘ಚುನಾವಣಾ ಪ್ರಮಾಣಪತ್ರ­­ದಲ್ಲಿ ಮೋದಿ ಸರಿಯಾದ ಮಾಹಿತಿ ನೀಡಿದ್ದು, ರಾಹುಲ್‌ ಅದನ್ನು ಎಚ್ಚರಿಕೆ­ಯಿಂದ ಓದಿನೋಡಲಿ’ ಎಂದರು.

ಪತಿ ಒಳಿತಿಗೆ ಪತ್ನಿ ಧ್ಯಾನ
ಮೆಹ್ಸಾನಾ (ಪಿಟಿಐ):ರಾಜ­ಕೀಯ ವಿರೋ­ಧಿ­ಗಳು, ಮೋದಿ ಅವರನ್ನು ರಾಜ­ಕೀ­ಯ­ವಾಗಿ ಹಣಿ­ಯಲು ಅವರ ಪತ್ನಿಯ ಹೆಸರು ಬಳಸಿ­ಕೊಳ್ಳುತ್ತಿ­ದ್ದರೂ, ಹಲವು ದಶಕಗಳ ಹಿಂದೆಯೇ ಗಂಡ­ನಿಂದ ಪ್ರತ್ಯೇ­ಕ­­­ವಾ­ಗಿ­ರುವ ಜಶೋದಾಬೆನ್‌ ಮಾತ್ರ ತಮ್ಮ ಪತಿ ಪ್ರಧಾನಿ­ಯಾಗಬೇಕೆಂದು ಉಪವಾಸ, ಪ್ರಾರ್ಥನೆ­ಗಳನ್ನು ಮಾಡುತ್ತಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.