ADVERTISEMENT

ಪರಿಕ್ಕರ್‌ ಉತ್ತರಾಧಿಕಾರಿ ಪರ್ಸೇಕ್ಕರ್‌?

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2014, 9:44 IST
Last Updated 7 ನವೆಂಬರ್ 2014, 9:44 IST

ಪಣಜಿ (ಪಿಟಿಐ): ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟಕ್ಕೆ ರಕ್ಷಣಾ ಖಾತೆ ಸಚಿವರಾಗಿ ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಇನ್ನೊಂದೆಡೆ ಗೋವಾದ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ಆರೋಗ್ಯ ಸಚಿವ ಲಕ್ಷ್ಮೀಕಾಂತ ಪರ್ಸೇಕ್ಕರ್‌ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

‘ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸಭೆ ಶನಿವಾರ ಬೆಳಿಗ್ಗೆ ದೆಹಲಿಯಲ್ಲಿ ನಡೆಯಲಿದ್ದು, ಗೋವಾದ ಹೊಸ ಮುಖ್ಯಮಂತ್ರಿ­ ಹೆಸರನ್ನು ಅಂತಿಮಗೊಳಿಸಲಿದೆ. ಈ ಸಭೆಯ ಬಳಿಕ ನಾನು ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಪರಿಕ್ಕರ್‌ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಶುಕ್ರವಾರ ಇಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖವಾಗಿ  ಆರೋಗ್ಯ ಸಚಿವ ಲಕ್ಷ್ಮೀಕಾಂತ ಪರ್ಸೇಕ್ಕರ್‌, ವಿಧಾನಸಭೆ ಅಧ್ಯಕ್ಷ ರಾಜೇಂದ್ರ ಅರ್ಲೇಕ್ಕರ್‌, ಉಪ ಮುಖ್ಯಮಂತ್ರಿ ಫ್ರಾನ್ಸಿಸ್‌ ಡಿಸೋಜಾ ಅವರು ಹೆಸರುಗಳು ಕೇಳಿಬಂದವು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ಹಿರಿಯ ಮುಖಂಡ ರಾಜೀವ್‌ ಪ್ರತಾಪ್‌ ರುದೆ, ಸಂಘಟನಾ ಕಾರ್ಯದರ್ಶಿ ಬಿ. ಸತೀಶ್‌  ಅವರ ನೇತೃತ್ವದ ಮೇಲ್ವಿಚಾರಣಾ ಸಮಿತಿ ಈ ಹೆಸರುಗಳನ್ನು ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡಿದೆ. ಸಂಸದೀಯ ಮಂಡಳಿ ಇವರಲ್ಲಿ ಒಬ್ಬರನ್ನು ಶನಿವಾರ ಆಯ್ಕೆ ಮಾಡಲಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಪರ್ಸೇಕ್ಕರ್‌ ಅವರು ಇತರ ಸ್ಪರ್ಧಿಗಳಿಗಿಂತ ಮುಂದಿದ್ದಾರೆ. ಬಹುತೇಕ ಅವರೇ ಈ ಸ್ಥಾನ ಅಲಂಕರಿಸಬಹುದು ಎಂದು ಮೂಲಗಳು ಹೇಳಿವೆ.

ಬಿಜೆಪಿ ಹೈಕಮಾಂಡ್‌ ನಿರ್ಧಾರವನ್ನು ಗೌರವಿಸುವುದಾಗಿ ಪರ್ಸೇಕ್ಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT