ADVERTISEMENT

ಪರಿಸರಮುಖಿಯಾದ ಮೋದಿ ಮನದ ಮಾತು

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ನಿಂದಾಗಿ ಪರಿಸರ ಕೆಡುತ್ತಿದೆ, ವನ್ಯಜೀವಿ ಮತ್ತು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ಜನರು ಇಂತಹ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜೂನ್‌ 5ರಂದು ಜನರು ವಿಶ್ವ ಪರಿಸರ ದಿನವನ್ನು ಉತ್ಸಾಹದಿಂದ ಆಚರಿಸಬೇಕು, ಗಿಡ ನೆಡುವ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಗಿಡ ನೆಟ್ಟರಷ್ಟೇ ಸಾಲದು, ಅದು ಮರವಾಗುವ ತನಕ ಆರೈಕೆ ನೋಡಿಕೊಳ್ಳಬೇಕು ಎಂದು ಜನರನ್ನು ಅವರು ಕೇಳಿಕೊಂಡಿದ್ದಾರೆ.

ಪ್ರತಿ ತಿಂಗಳ ಬಾನುಲಿ ಭಾಷಣ ‘ಮನದ ಮಾತು’ ಮೂಲಕ ಮೋದಿ ಅವರು ಜನರಿಗೆ ಈ ಕರೆ ನೀಡಿದ್ದಾರೆ.

ADVERTISEMENT

ಈ ವರ್ಷದ ವಿಶ್ವ ಪರಿಸರ ದಿನದ ನೇತೃತ್ವ ವಹಿಸುವ ಹೆಮ್ಮೆ ಭಾರತದ್ದಾಗಿದೆ. ‘ಪ್ಲಾಸ್ಟಿಕ್‌ ಮಾಲಿನ್ಯ ತಡೆಗಟ್ಟಿ’ ಎಂಬುದು ಈ ಬಾರಿಯ ವಿಷಯವಾಗಿದೆ ಎಂದು ಅವರು ಹೇಳಿದರು.

ಭಾರತವು ಹವಾಮಾನ ನ್ಯಾಯದ ಬಗ್ಗೆ ಮಾತನಾಡುತ್ತಿದೆ; ಹವಾಮಾನ ಬದಲಾವಣೆ ತಡೆಯ ಪ್ಯಾರಿಸ್‌ ಒಪ್ಪಂದದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಮತ್ತು ಅಂತರರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಮೂಲಕ ಇಡೀ ಜಗತ್ತನ್ನು ಒಗ್ಗೂಡಿಸಲು ಯತ್ನಿಸುತ್ತಿದೆ. ಇವೆಲ್ಲವೂ ಮಹಾತ್ಮ ಗಾಂಧಿ ಅವರ ಕನಸುಗಳನ್ನು ನನಸಾಗಿಸುವುದರಲ್ಲಿ ಬೇರುಗಳನ್ನು ಹೊಂದಿವೆ ಎಂದು ಮೋದಿ ಹೇಳಿದರು.

ಜೂನ್‌ 21ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನದ ಬಗ್ಗೆಯೂ ಮೋದಿ ಅವರು ಮಾತನಾಡಿದರು. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ದೊರೆಯುವ ಪ್ರಯೋಜನಗಳು ಸಂಬಂಧಿಕರು ಮತ್ತು ಗೆಳೆಯರ ಹಾಗೆ ಸದಾ ನಮ್ಮ ಜತೆಗಿರುತ್ತವೆ ಎಂದು ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿ ಹೇಳಿದರು.

ನೆಹರೂ, ಸಾವರ್ಕರ್‌ ನೆನಪು: ‘ಇಂದು (ಮೇ 27) ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಪುಣ್ಯತಿಥಿ. ಅವರಿಗೆ ನನ್ನ ಪ್ರಣಾಮ. ಹಾಗೆಯೇ ಈ ತಿಂಗಳ ಜತೆಗೆ ವೀರ್‌ ಸಾವರ್ಕರ್‌ ಅವರ ನೆನಪೂ ತಳಕು ಹಾಕಿಕೊಂಡಿದೆ. 1857ರಲ್ಲಿ ನಡೆದ ಘಟನೆಗಳನ್ನು ‘ಸಿಪಾಯಿ ದಂಗೆ’ ಎಂದು ಹೇಳುವುದಕ್ಕೆ ಸಾವರ್ಕರ್‌ ವಿರೋಧ ವ್ಯಕ್ತಪಡಿಸಿದ್ದರು ಎಂದು ಮೋದಿ ನೆನಪಿಸಿಕೊಂಡರು.

ಸಾವರ್ಕರ್‌ ಅವರು ತಮ್ಮ ದಿಟ್ಟತನ ಮತ್ತು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಹೆಸರಾಗಿದ್ದಾರೆ. ಅಷ್ಟೇ ಅಲ್ಲ ಅವರು ಗಮನಾರ್ಹವಾದ ಕವಿ ಮತ್ತು ಸಮಾಜ ಸುಧಾರಕರೂ ಆಗಿದ್ದರು. ಒಳ್ಳೆಯತನ ಮತ್ತು ಒಗ್ಗಟ್ಟಿಗೆ ಮಹತ್ವ ನೀಡಿದ್ದರು ಎಂದು ಮೋದಿ ಹೇಳಿದರು.

‘ಹಿಂದೂ ಅಸ್ಮಿತೆಯು ಭಾರತದ ತಿರುಳಾಗುವಂತೆ ಹಿಂದುತ್ವ ಎಂಬ ಪದವನ್ನು ಸೃಷ್ಟಿಸಿದ ಕೀರ್ತಿ ಸಾವರ್ಕರ್‌ಗೆ ಸಲ್ಲಬೇಕು’ ಎಂದರು.

ಈದ್‌ ಶುಭಾಶಯ

ಮುಂದಿನ ತಿಂಗಳಲ್ಲಿ ಆಚರಿಸಲಾಗುವ ಈದ್‌ ಹಬ್ಬಕ್ಕೆ ಪ್ರಧಾನಿ ಶುಭಾಶಯ ಕೋರಿದರು. ‘ನಮ್ಮ ಸಮಾಜದ ಸಾಮರಸ್ಯವನ್ನು ಈದ್‌ ಹಬ್ಬವು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂಬ ಭರವಸೆ ನನಗಿದೆ. ಎಲ್ಲರಿಗೂ ಹಬ್ಬದ ಹೃತ್ಪೂರ್ವಕ ಶುಭಾಶಯ’ ಎಂದು ಪ್ರಧಾನಿ ಹೇಳಿದ್ದಾರೆ.

‘ಫಿಟ್‌ನೆಸ್‌ ಚಾಲೆಂಜ್‌’ ಉಲ್ಲೇಖ

ಆಟ ಆಡಿ, ಆರೋಗ್ಯಕರವಾಗಿ, ಸದೃಢರಾಗಿ ಇರಿ, ಆದರೆ ಸಾಂಪ್ರದಾಯಿಕ ಕ್ರೀಡೆಗಳನ್ನು ಮರೆಯದಿರಿ ಎಂದಿರುವ ಪ್ರಧಾನಿ, ಸರ್ವತೋಮುಖ ಅಭಿವೃದ್ಧಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಇತ್ತೀಚೆಗೆ ಭಾರಿ ಚರ್ಚೆಗೆ ಒಳಗಾದ ‘ಫಿಟ್‌ನೆಸ್‌ ಚಾಲೆಂಜ್‌’ ಬಗ್ಗೆಯೂ ಪ್ರಧಾನಿ ಮಾತನಾಡಿದರು. ‘ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಈ ಸವಾಲಿನಲ್ಲಿ ನನ್ನನ್ನೂ ಸೇರಿಸಿಕೊಂಡಿರುವುದರಿಂದ ಹೃದಯ ತುಂಬಿ ಬಂದಿದೆ. ಈ ಸವಾಲನ್ನು ನಾವು ಸ್ವೀಕರಿಸಿದ್ದೇನೆ ಕೂಡ. ಇದು ಪ್ರಯೋಜನಕಾರಿ, ಇಂತಹ ಸವಾಲು ನಮ್ಮನ್ನು ಆರೋಗ್ಯಕರವಾಗಿರಿಸುವುದರ ಜತೆಗೆ ಇತರರೂ ಆರೋಗ್ಯವಂತವಾಗಿ ಇರುವಂತೆ ಸ್ಫೂರ್ತಿ ನೀಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.