ADVERTISEMENT

ಪರ್ಯೂಷಣ ಪರ್ವ: ಜೈನರ ವಿರುದ್ಧ ಕೆಂಡಕಾರಿದ ಎಂಎನ್‌ಎಸ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 20:28 IST
Last Updated 29 ಆಗಸ್ಟ್ 2016, 20:28 IST
ಪರ್ಯೂಷಣ ಪರ್ವ: ಜೈನರ ವಿರುದ್ಧ ಕೆಂಡಕಾರಿದ ಎಂಎನ್‌ಎಸ್‌
ಪರ್ಯೂಷಣ ಪರ್ವ: ಜೈನರ ವಿರುದ್ಧ ಕೆಂಡಕಾರಿದ ಎಂಎನ್‌ಎಸ್‌   

ಮುಂಬೈ: ಜೈನ ಸಮುದಾಯದವರು ಆಚರಿಸುವ ಪರ್ಯೂಷಣ ಪರ್ವದ ಸಂದರ್ಭದಲ್ಲಿ ಮುಂಬೈ ಮತ್ತು ಅದರ ಹೊರವಲಯದಲ್ಲಿ ಮಾಂಸ ಮಾರಾಟವನ್ನು ಎರಡು ದಿನ ನಿಷೇಧಿಸುವ ಕ್ರಮದ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ಕಿಡಿ ಕಾರಿದೆ.

ಪರ್ಯೂಷಣ ಪರ್ವದ ಸಂದರ್ಭದಲ್ಲಿ ಜೈನ ಸಮುದಾಯದವರು ಉಪವಾಸ ಆಚರಿಸುತ್ತಾರೆ. ಆಗಸ್ಟ್‌ 29 ಹಾಗೂ ಸೆಪ್ಟೆಂಬರ್‌ 5ರಂದು ಮಾಂಸದ ಅಂಗಡಿಗಳು, ಕಸಾಯಿಖಾನೆಗಳನ್ನು ಮುಚ್ಚಬೇಕು ಎಂದು ರಾಜ್ಯ ಸರ್ಕಾರ, ನಗರ ಸ್ಥಳೀಯ ಸಂಸ್ಥೆಗಳು ಆದೇಶಿಸಿವೆ.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಎಂಎನ್‌ಎಸ್‌ ಮುಖಂಡ ರಾಜ್ ಠಾಕ್ರೆ, ಜೈನ ಸಮುದಾಯದವರ ವಿರುದ್ಧ ವಾಗ್ದಾಳಿ ನಡೆಸಿದರು.
‘ಈ ವಿಚಾರವನ್ನು ನಾನು ಹೇಳುತ್ತಲೇ ಬಂದಿದ್ದೇನೆ. ಮೊದಲು ಅವರು (ಬಿಲ್ಡರ್‌ಗಳು) ಕಟ್ಟಡ ನಿರ್ಮಿಸುತ್ತಾರೆ. ನಂತರ ಅಲ್ಲಿ ಜೈನ ಮಂದಿರ ಕಟ್ಟುತ್ತಾರೆ. ಬೇರೆ ಸಮುದಾಯದವರಿಗೆ ಮನೆ ಕೊಡುವುದಿಲ್ಲ ಎನ್ನುತ್ತಾರೆ, ಬೇರೆಯವರನ್ನು ಅಲ್ಲಿಂದ ಓಡಿಸುತ್ತಾರೆ. ಮಹಾರಾಷ್ಟ್ರದವರ ಸಂಖ್ಯೆ ಕಡಿಮೆ ಮಾಡಿ, ವಿಧಾನಸೌಧ ಪ್ರವೇಶಿಸಿ, ತಮಗೆ ಬೇಕಾದಂತಹ ಕಾನೂನು ರೂಪಿಸುವುದು ಅವರ ಗುರಿ’ ಎಂದು ಠಾಕ್ರೆ ದೂರಿದರು.

ಮಾಂಸದ ಅಂಗಡಿ ಮುಚ್ಚುವ ಆದೇಶ ವಿರೋಧಿಸಿ ಎಂಎನ್‌ಎಸ್‌ ಸದಸ್ಯರು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು. ‘ಅವರು ಉಪವಾಸ ಆಚರಿಸುತ್ತಾರೆ ಎಂಬ ಕಾರಣಕ್ಕೆ ನಾವೇಕೆ ನಮ್ಮ ಆಹಾರ ತ್ಯಜಿಸಬೇಕು’ ಎಂದು ಎಂಎನ್‌ಎಸ್‌ ಕಾರ್ಪೊರೇಟರ್‌ ಸಂದೀಪ್ ದೇಶಪಾಂಡೆ ಪ್ರತಿಭಟನೆ ವೇಳೆ ಪ್ರಶ್ನಿಸಿದರು.

‘ಮಾಂಸ ಮಾರಾಟ ನಿಷೇಧ ಒಂದು ಪದ್ಧತಿಯಾಗಿ ಬಂದಿದೆ. ಅದನ್ನು ಮುಂದುವರಿಸಲಾಗಿದೆ’ ಎಂದು ಹಣಕಾಸು ಮತ್ತು ಯೋಜನಾ ಸಚಿವ ಸುಧೀರ್ ಮುಂಗಂಟಿವಾರ್ ಸ್ಪಷ್ಟನೆ ನೀಡಿದರು.

ಈ ನಡುವೆ, ಪ್ರಾಣಿ ವಧೆ ಹಾಗೂ ಮಾಂಸ ಮಾರಾಟದ ಮೇಲೆ ಈಗಿರುವ ಎರಡು ದಿನಗಳ ನಿಷೇಧವನ್ನು ನಾಲ್ಕು ದಿನಗಳಿಗೆ ಹೆಚ್ಚಿಸಬೇಕು ಎಂದು ಬಿಜೆಪಿ ಶಾಸಕ ರಾಜ್ ಪುರೋಹಿತ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.