ADVERTISEMENT

ಪಿಎಂಒ ಮಾಜಿ ಅಧಿಕಾರಿಗಳ ಮೇಲೆ ಕಣ್ಣು

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನ­ಮೋಹನ್ ಸಿಂಗ್ ಅವರ ಜತೆ ಪ್ರಧಾನಿ ಕಚೇರಿಯ ಅಂದಿನ ಹಿರಿಯ ಅಧಿಕಾರಿಗಳನ್ನೂ ಪ್ರಶ್ನಿಸುವಂತೆ ವಿಚಾರಣಾ ನ್ಯಾಯಾಲಯ ಸಿಬಿಐಗೆ ಸೂಚಿಸಿದೆ.

ಒಡಿಶಾದ ತಲಬಿರಾ–2 ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಾಲ್ಕೊ ಕಂಪೆನಿಗೆ ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಪರಿಸಮಾಪ್ತಿ ವರದಿಯನ್ನು ತಿರಸ್ಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ, ಪ್ರಧಾನಿ ಆಪ್ತ ಕಾರ್ಯ­ದರ್ಶಿಯಾಗಿದ್ದ ಬಿ.ವಿ.ಆರ್‌. ಸುಬ್ರಮಣ್ಯ, ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯ­ದರ್ಶಿಯಾಗಿದ್ದ ಟಿ.ಕೆ.ಎ. ನಾಯರ್‌ ಅವರನ್ನೂ  ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಹೇಳಿದೆ.

ಪ್ರಕರಣದ ಮುಂದಿನ ವಿಚಾರಣೆ­ಯನ್ನು ಜನವರಿ 27ರಂದು ನಿಗದಿ ಮಾಡಿದ ನ್ಯಾಯಾಧೀಶರು, ಪ್ರಕರಣಕ್ಕೆ ಸಂಬಂ­ಧಿ­ಸಿದ ಪ್ರಗತಿ ವರದಿಯನ್ನು ಅಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸಿಬಿಐ ತನಿಖಾಧಿಕಾರಿಗಳಿಗೆ ಸೂಚಿಸಿದರು.

ನ್ಯಾಯಾಲಯ ನೀಡಿದ ಕಾರಣ: ಪ್ರಧಾನಿ ಮನಮೋಹನ್‌ ಸಿಂಗ್‌,   ಕಲ್ಲಿದ್ದಲು ಖಾತೆ ರಾಜ್ಯ ಸಚಿವ ದಾಸರಿ ನಾರಾಯಣ ರಾವ್‌, ಕಾರ್ಯದರ್ಶಿ ಪಿ.ಸಿ. ಪಾರೇಖ್‌ ಹಾಗೂ ಇತರರನ್ನು  ಭೇಟಿ ಮಾಡಿ ಪ್ರಭಾವ ಬೀರಿದ್ದ  ಕುಮಾರ ಮಂಗಲಂ ಬಿರ್ಲಾ ತಲಬಿರಾ–2 ಕಲ್ಲಿದ್ದ­ಲು ನಿಕ್ಷೇಪವನ್ನು ತಮ್ಮ ಹಿಂಡಾಲ್ಕೊ ಕಂಪೆನಿಗೆ ನೀಡುವಂತೆ ಕೋರಿ ಎರಡು  ಪತ್ರಗಳನ್ನೂ ಬರೆದಿದ್ದರು.

ತನಿಖೆ ವೇಳೆ ಸಿಬಿಐ ಅಧಿಕಾರಿಗಳು ವಶಪಡಿಸಿ­ಕೊಂಡ ಈ ಪತ್ರಗಳಿಂದ ಕುಮಾರ­ಮಂಗಲಂ ಇಡೀ ವ್ಯವಸ್ಥೆಯನ್ನು ಹೇಗೆ ತಮಗೆ ಅನು­ಕೂಲವಾಗುವ ಹಾಗೆ ಬದಲಿಸಿದ್ದರು ಎನ್ನುವುದು ಕಂಡು ಬರು­ತ್ತದೆ ಎಂದು ನ್ಯಾಯಾಲಯ ಹೆಳಿದೆ. 

ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಿರ್ಲಾ ಅವರ ಹಿಂಡಾಲ್ಕೊ ಕಂಪೆನಿಗೆ ಕಲ್ಲಿದ್ದಲು ನಿಕ್ಷೇಪ ನೀಡಲಾ­ಗಿದೆ. ಇದಕ್ಕಾಗಿ ಸರ್ಕಾರದ ಇಡೀ ಆಡಳಿತ ಯಂತ್ರವನ್ನು ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳಲಾ­ಗಿದೆ. ಇದಕ್ಕೆ ಎಲ್ಲಿಯೂ, ಯಾರಿಂದಲೂ ಆಕ್ಷೇಪ ವ್ಯಕ್ತವಾಗದಿರುವುದು ಅಚ್ಚರಿ ಮೂಡಿ­ಸಿದೆ ಎಂದು ನ್ಯಾಯಾಧೀಶರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.