ADVERTISEMENT

ಪುಲ್ವಾಮ ಎನ್‌ಕೌಂಟರ್‌ನಲ್ಲಿ ಉಗ್ರ ಬರ್ಹಾನ್‌ ವಾನಿ ಉತ್ತರಾಧಿಕಾರಿ ಸಬ್ಜರ್‌ ಭಟ್‌ ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:51 IST
Last Updated 27 ಮೇ 2017, 9:51 IST
ಪುಲ್ವಾಮ ಎನ್‌ಕೌಂಟರ್‌ನಲ್ಲಿ ಉಗ್ರ ಬರ್ಹಾನ್‌ ವಾನಿ ಉತ್ತರಾಧಿಕಾರಿ ಸಬ್ಜರ್‌ ಭಟ್‌ ಸಾವು
ಪುಲ್ವಾಮ ಎನ್‌ಕೌಂಟರ್‌ನಲ್ಲಿ ಉಗ್ರ ಬರ್ಹಾನ್‌ ವಾನಿ ಉತ್ತರಾಧಿಕಾರಿ ಸಬ್ಜರ್‌ ಭಟ್‌ ಸಾವು   

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್‌ ವಲಯದಲ್ಲಿ ಭದ್ರತಾಪಡೆ ನಡೆಸುತ್ತಿರುವ ಎನ್‌ಕೌಂಟರ್‌ನಲ್ಲಿ ಉಗ್ರ ಬರ್ಹಾನ್‌ ವಾನಿ ಉತ್ತರಾಧಿಕಾರಿಯಾಗಿ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡ‌ರ್‌ ಆಗಿದ್ದ ಸಬ್ಜರ್‌ ಅಹ್ಮದ್ ಭಟ್‌ ಸೇರಿ ಇಬ್ಬರು ಉಗ್ರರು ಶನಿವಾರ ಬಲಿಯಾಗಿದ್ದಾರೆ.

ಭದ್ರತಾ ಪಡೆ ಶನಿವಾರ ಎರಡು ಕಡೆ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಒಟ್ಟು ಎಂಟು ಉಗ್ರರನ್ನು ಹೊಡೆದುರುಳಿಸಿದೆ.

ಟ್ರಾಲ್‌ ವಲಯದ ಸೊಇಮೊ ಗ್ರಾಮದಲ್ಲಿ ರಾಷ್ಟ್ರೀಯ ರೈಫಲ್‌ ಪಡೆಯ ಮೇಲೆ ಶುಕ್ರವಾರ ರಾತ್ರಿ ಉಗ್ರರು ಗುಂಡಿನ ದಾಳಿ ನಡೆಸಿದ ಬಳಿಕ ಉಗ್ರರು ಅಡಗಿದ್ದ ಮನೆಯನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದೆ. ಶನಿವಾರ ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್‌ನಲ್ಲಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಸಬ್ಜರ್‌ ಹಾಗೂ ಮತ್ತೊಬ್ಬ ಉಗ್ರ ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ.

ADVERTISEMENT

ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆಯ ಉತ್ತರ ವಲಯ ಕಮಾಂಡರ್‌ ಹೇಳಿದ್ದಾರೆ.

ಎನ್‌ಕೌಂಟರ್‌ನಲ್ಲಿ ಸಬ್ಜರ್‌ ಬಲಿಯಾಗಿದ್ದಾನೆ ಎಂದು ತಿಳಿಸಿರುವ ರಾಜ್ಯ ಪೊಲೀಸ್‌ ಮುಖ್ಯಸ್ಥರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

2016ರ ಜುಲೈ 8ರಂದು ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಪುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಬರ್ಹಾನ್‌ ವಾನಿ ಸಾವಿನ ಬಳಿಕ, ಈಗ ಸಬ್ಜರ್‌ ಬಲಿಯಾಗಿದ್ದಾನೆ.

ನಾಲ್ವರು ಬಲಿ  
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ರಾಂಪುರ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಕಡೆಯಿಂದ ಭಾರತ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಆರು ಉಗ್ರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದೆ.

ಶನಿವಾರ ಬೆಳ್ಳಂಬೆಳಿಗ್ಗೆಯೇ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಶಸ್ತ್ರಸಜ್ಜಿತ ಗುಂಪಿನ ಉಗ್ರರ ಅನುಮಾನಾಸ್ಪದ ಚಲನವಲನವನ್ನು ಸೇನೆ ಶುಕ್ರವಾರ ತಾತ್ರಿ ಗಮನಿಸಿದೆ.

ಉಗ್ರರು ಸೇನಾ ಸಿಬ್ಬಂದಿಯತ್ತ ಗುಂಡು ಹಾರಿಸಿದ್ದು, ಪ್ರತಿಯಾಗಿ ಸೇನೆ ಗುಂಡಿನ ದಾಳಿ ನಡೆಸಿ ನಾಲ್ವರು ಯೋಧರನ್ನು ಹೊಡೆದುರುಳಿಸಿದೆ ಎಂದು ಸೇನೆ ಮೂಲಗಳು ತಿಳಿಸಿವೆ.

ಉಗ್ರರ ಗುಂಪಿನಲ್ಲಿ ಆರರಿಂದ ಏಳು ಮಂದಿ ಉಗ್ರರು ಇದ್ದ ಬಗ್ಗೆ ಶಂಕೆ ಇದ್ದು, ನಾಲ್ವರನ್ನು ಹೊಡೆದುರುಳಿಸಲಾಗಿದೆ. ಇನ್ನುಳಿದ ಮೂವರು ಅಡಗಿ ಕುಳಿತಿರಬಹುದು ಅಥವಾ ಪಾಕಿಸ್ತಾನಕ್ಕೆ ಹಿಂದಿರುಗಿರಬಹುದು. ಸೇನೆ ಉಗ್ರರಿಗಾಗಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.