ADVERTISEMENT

ಪುಸ್ತಕ ಬರೆದು ಸತ್ಯ ಹೊರಹಾಕುವೆ

ನಟವರ್‌ ಸಿಂಗ್‌ ಹೇಳಿಕೆಗೆ ಸೋನಿಯಾ ತೀಕ್ಷ್ಣ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 19:30 IST
Last Updated 31 ಜುಲೈ 2014, 19:30 IST

ನವದೆಹಲಿ (ಪಿಟಿಐ): ಸೋನಿಯಾ ಗಾಂಧಿ ಅವರು 2004ರಲ್ಲಿ ಪ್ರಧಾನಿ ಆಗು­ವು­ದನ್ನು ರಾಹುಲ್‌ ಗಾಂಧಿ ತಡೆ­­­ದಿದ್ದರು ಎಂಬ ಮಾಜಿ ಸಚಿವ ನಟವರ್‌ ಸಿಂಗ್‌ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿ­ಸಿ­­ರುವ ಸೋನಿಯಾ, ‘ಸತ್ಯ’­ವನ್ನು ಹೊಗೆಡಹುವ ಪುಸ್ತಕ­ವನ್ನು ಸ್ವತಃ ಬರೆಯುವುದಾಗಿ ಹೇಳಿದ್ದಾರೆ.

‘ನಾನು ನನ್ನದೇ ಸ್ವಂತ ಪುಸ್ತಕವನ್ನು ಬರೆಯುತ್ತೇನೆ. ಬಳಿಕ ನಿಮಗೆ ಎಲ್ಲವೂ ತಿಳಿಯಲಿದೆ. ನಾನು ಬರೆಯು­ವು­ದೊಂದೇ ಸತ್ಯ ಹೊರಗೆ ಬರಲು ಇರುವ ಮಾರ್ಗ. ಈ ಸಂಗತಿಯನ್ನು ನಾನು ಗಂಭೀರ­ವಾಗಿ ತೆಗೆದು­ಕೊಂಡಿ­ದ್ದೇನೆ ಮತ್ತು ಬರೆಯಲಿದ್ದೇನೆ’ ಎಂದು ಸೋನಿಯಾ ಗಾಂಧಿ ಸಂಸತ್‌ ಭವನ­ದಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಪತಿ ರಾಜೀವ್‌ ಗಾಂಧಿ ಮತ್ತು ಅತ್ತೆ ಇಂದಿರಾಗಾಂಧಿ ಅವರ ಹತ್ಯೆಯಂತಹ ಕೆಟ್ಟ ಸನ್ನಿವೇಶ­ಗಳನ್ನು ನೋಡಿರುವ ತಮಗೆ ಈ ಘಟನೆ­ಯಿಂದ ನೋವಾ­ಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಮಾರುಕಟ್ಟೆ ತಂತ್ರ: ಮನಮೋಹನ್‌ ಸಿಂಗ್‌ ವ್ಯಂಗ್ಯ
ನವದೆಹಲಿ (ಪಿಟಿಐ):
ನಟವರ್‌ ಸಿಂಗ್‌ ಅವರ ಹೇಳಿಕೆಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಅನುಸರಿಸುತ್ತಿರುವ ತಂತ್ರ ಎಂದು ಟೀಕಿಸಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, ಕಡತಗಳು ಅನುಮೋದನೆಗಾಗಿ ಪ್ರಧಾನಿ ಕಚೇರಿಯಿಂದ ಕಾಂಗ್ರೆಸ್‌ ಅಧ್ಯಕ್ಷರಿಗೆ ರವಾನೆಯಾಗುತ್ತಿದ್ದವು ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

ತಮ್ಮ ಹಿಂದಿನ ಮಾಧ್ಯಮ ಸಲಹೆಗಾರ ಸಂಜಯ್‌ ಬಾರು ಅವರನ್ನೂ ಟೀಕಿಸಿರುವ ಮನಮೋಹನ್‌ ಸಿಂಗ್‌, ಇದೇ ರೀತಿಯ ಆರೋಪಗಳನ್ನು ಮಾಡುವ ಮೂಲಕ ತಮ್ಮ ಪುಸ್ತಕಗಳನ್ನು ಮಾರಾಟ ಮಾಡಲು ಅವರು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.

‘ಏಕಪಕ್ಷೀಯವಾಗಿ ಸೇನೆ ಕಳುಹಿಸಿದ್ದ ರಾಜೀವ್‌’
ನವದೆಹಲಿ:
ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರು ಸಂಪುಟವನ್ನು ಸಂಪರ್ಕಿಸದೆಯೇ ಶ್ರೀಲಂಕಾಕ್ಕೆ ಸೇನಾ ಪಡೆಯನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದರು ಎಂದು ಮಾಜಿ ಸಚಿವ ನಟವರ್‌ ಸಿಂಗ್‌ ಹೇಳಿದ್ದಾರೆ.

ಪತ್ರಕರ್ತ ಕರಣ್‌ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ನಟವರ್‌ ಸಿಂಗ್‌ ಈ ಮಾಹಿತಿ ಬಹಿರಂಗ­ಪಡಿಸಿದ್ದಾರೆ. ‘ಆಹಾರಕ್ಕಾಗಿ ತೈಲ’ ಹಗರಣದ ವೋಕರ್‌ ವರದಿಯ ಆಧಾರದಲ್ಲಿ  ಆರ್‌.ಎಸ್‌. ಪಾಠಕ್‌ ನಡೆಸಿದ ತನಿಖೆಯಲ್ಲಿ ತಮ್ಮನ್ನು ಸಿಲುಕಿಸಲಾಯಿತು. ತೈಲ ಒಪ್ಪಂದದಲ್ಲಿ ಕಾಂಗ್ರೆಸ್‌ಗೆ ಸಂಪರ್ಕವಿರುವ ಸಾಕ್ಷ್ಯಗಳಿದ್ದವು. ಆದರೆ ಆ ದಾಖಲೆಗಳನ್ನು ಮುಚ್ಚಿಡಲಾಯಿತು. ಸೋನಿಯಾ ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ಅವರು ಪಾಠಕ್‌ ಆಯೋಗಕ್ಕೆ ತಮ್ಮ ಮೇಲೆ ದೋಷಾರೋಪ ಹೊರಿಸುವಂತೆ ಒತ್ತಡ ಹೇರಲಾಗಿತ್ತು ಎಂದು ನಟವರ್‌ ಸಿಂಗ್‌ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.