ADVERTISEMENT

ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹ

ಮಹಾದಾಯಿ ನದಿಯಿಂದ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 5 ಮೇ 2016, 19:58 IST
Last Updated 5 ಮೇ 2016, 19:58 IST
ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಕಾಂಗ್ರೆಸ್‌ ನಾಯಕ ಖರ್ಗೆ
ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಕಾಂಗ್ರೆಸ್‌ ನಾಯಕ ಖರ್ಗೆ   

ನವದೆಹಲಿ: ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳು ತೀವ್ರ ಬರಗಾಲಕ್ಕೆ ಸಿಕ್ಕಿದ್ದು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮಹಾದಾಯಿ ನದಿಯಿಂದ 7.56 ಟಿಎಂಸಿ ಅಡಿ ನೀರು ಕೊಡಿಸಲು ಪ್ರಧಾನಿ ನರೇಂದ್ರ ಮೋದಿ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಲೋಕಸಭೆಯಲ್ಲಿ ಆಗ್ರಹಿಸಿದರು.

ಶೂನ್ಯ ವೇಳೆಯಲ್ಲಿ ಮಹಾದಾಯಿ ವಿವಾದ ಪ್ರಸ್ತಾಪಿಸಿದ ಖರ್ಗೆ, ಮಲಪ್ರಭಾ ಪಾತ್ರದಲ್ಲಿರುವ ಜಿಲ್ಲೆಗಳ ರೈತರು 7.56 ಟಿಎಂಸಿ ಅಡಿ ನೀರು ಕೊಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರ ಮಾಡದಿದ್ದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದು ಎಂದು ಎಚ್ಚರಿಸಿದರು.

ಲೋಕಸಭೆ ಸದಸ್ಯರಾದ ಆರ್.ಧ್ರುವನಾರಾಯಣ, ಮುದ್ದಹನುಮೇಗೌಡ, ಬಿ.ಎನ್‌.ಚಂದ್ರಪ್ಪ ಹಾಗೂ ಬಿ.ವಿ.ನಾಯಕ ಅವರು ಖರ್ಗೆ ಅವರನ್ನು ಬೆಂಬಲಿಸಿದರು. ಮಹಾದಾಯಿ ನೀರಿನ ವಿವಾದ ಪರಿಹರಿಸಲು 2010ರಲ್ಲಿ ನ್ಯಾ. ಜೆ.ಎಂ ಪಾಂಚಾಲ ಅವರ ನೇತೃತ್ವದಲ್ಲಿ ನ್ಯಾಯಮಂಡಳಿ ರಚಿಸಿದ್ದು, ಕರ್ನಾಟಕದ ಪಾಲಿನ ನೀರಿನ ಬಗ್ಗೆ ವಿಚಾರಣೆ ಆರಂಭವಾಗಿದೆ ಎಂದರು.

ಮಹಾದಾಯಿ ಉಪ ನದಿಗಳಾದ ಕಳಸಾ, ಬಂಡೂರಿ ನಾಲೆಗಳಿಂದ 7.56ಟಿಎಂಸಿ ಅಡಿ ನೀರನ್ನು ಮಲಪ್ರಭಾ ಜಲಾಶಯಕ್ಕೆ ತಿರುಗಿಸಲು ಕೇಂದ್ರ ಜಲ ಆಯೋಗ 2002ರ ಏಪ್ರಿಲ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. ಅದೇ ವರ್ಷ ಮಹಾದಾಯಿ ತಿರುವು ಯೋಜನೆಗೆ ಗೋವಾ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತಾತ್ವಿಕ ಒಪ್ಪಿಗೆ ಹಿಂದಕ್ಕೆ ಪಡೆಯಲಾಯಿತು ಎಂದು ಹೇಳಿದರು.

ಕೇಂದ್ರ ಜಲ ಆಯೋಗದ ಅಂದಾಜು ಮಾಡಿರುವಂತೆ ಮಹಾದಾಯಿ ನದಿಯಲ್ಲಿ ಲಭ್ಯವಿರುವ ಒಟ್ಟು ನೀರಿನ ಪ್ರಮಾಣ 220 ಟಿಎಂಸಿ ಅಡಿ. ಇದರಲ್ಲಿ ಕರ್ನಾಟಕದ ಪಾಲು ಸುಮಾರು 45 ಟಿಎಂಸಿ ಅಡಿ. ಗೋವಾದ ಪಾಲು 175 ಟಿಎಂಸಿ ಅಡಿ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ತನ್ನ ಪಾಲಿನಲ್ಲಿ ಕೇವಲ 7.56ಟಿಎಂಸಿ ಅಡಿ ನೀರನ್ನು ತುರ್ತಾಗಿ ಬಳಸಲು ಉದ್ದೇಶಿಸಿದೆ. ಹುಬ್ಬಳ್ಳಿ–ಧಾರವಾಡವೂ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದರಿಂದ ತುರ್ತಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸರ್ವ ಪಕ್ಷ ನಿಯೋಗವನ್ನು ಪ್ರಧಾನಿ ಬಳಿಗೆ ಕರೆತಂದಿದ್ದರೂ ಪ್ರಯೋಜನ ಆಗಿಲ್ಲ. ಕೂಡಲೇ ಕೇಂದ್ರ ಮಧ್ಯ ಪ್ರವೇಶಿಸದಿದ್ದರೆ ಮುಂಬೈ– ಕರ್ನಾಟಕ ಭಾಗದ ಮೂರು ಜಿಲ್ಲೆಗಳ ಪರಿಸ್ಥಿತಿ ಅಶಾಂತಿಗೆ ಕಾರಣವಾಗಬಹುದು ಎಂದು ಖರ್ಗೆ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.