ADVERTISEMENT

ಪ್ಲ್ಯಾಸ್ಟಿಕ್‌ ನಿಷೇಧ: ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ಚಾಟಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2014, 19:30 IST
Last Updated 18 ನವೆಂಬರ್ 2014, 19:30 IST

ನವದೆಹಲಿ: ಪರಿಸರ ಮತ್ತು ಪ್ರಾಣಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿರುವ ಪ್ಲ್ಯಾಸ್ಟಿಕ್‌ ಬಳಕೆ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳದ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಚಾಟಿ ಬೀಸಿತು.

ಪ್ಲ್ಯಾಸ್ಟಿಕ್‌ ಬಳಕೆ ನಿಷೇಧಿಸಲು ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ತನ್ನ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಪರಿಸರ ಮತ್ತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಕೋರ್ಟ್‌ ಸೂಚಿಸಿತು. ಮುಖ್ಯ ನ್ಯಾಯಮೂರ್ತಿ ಎಚ್‌. ಎಲ್‌.ದತ್ತು, ನ್ಯಾ. ಮದನ್‌ ಬಿ. ಲೋಕೂರ್‌ ಮತ್ತು ನ್ಯಾ. ಎ.ಕೆ. ಸಿಕ್ರಿ ಅವರಿದ್ದ ತ್ರಿಸದಸ್ಯ ಸುಪ್ರೀಂ ಪೀಠವು, ಪ್ಲ್ಯಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ಕಾಯ್ದೆ– 2011ರ ಜಾರಿ ಮೇಲ್ವಿಚಾರಣೆಗೆ ರಚಿಸಲಾಗಿರುವ ಸಮಿತಿ ಎರಡು ವರ್ಷಗಳಿಂದ ಏಕೆ ಸಭೆ ಸೇರಿಲ್ಲ ಎಂದು ಕರ್ನಾಟಕದ ಪರ ಹಾಜರಾದ ವಕೀಲ ವಿ.ಎನ್‌.ರಘುಪತಿ ಅವರನ್ನು ಪ್ರಶ್ನಿಸಿತು.

ರಾಜ್ಯ ಸರ್ಕಾರ ಮಾರ್ಚ್‌ ತಿಂಗಳಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಪ್ಲ್ಯಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ಮೇಲ್ವಿಚಾರಣೆಗೆ ರಚಿಸಲಾಗಿರುವ ಸಮಿತಿಯು 2012ರ ಜುಲೈ 8ರಿಂದ ಸಭೆ ಸೇರಿಲ್ಲ. ಕೇವಲ ಸಮಿತಿ ರಚಿಸುವು­ದರಿಂದ ಪ್ರಯೋಜನ  ಇಲ್ಲ. ಅದು ಕಾಯ್ದೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ಕಟುವಾಗಿ ಹೇಳಿತು.

ಪ್ರಾಣಿ ಹಾಗೂ ಪರಿಸರ ಸಂರಕ್ಷಣೆ­ಗಾಗಿರುವ ಸ್ವಯಂ ಸೇವಾ ಸಂಸ್ಥೆ ‘ಕರುಣಾ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸು­ತ್ತಿರುವ ನ್ಯಾಯಪೀಠವು. ಪ್ಲ್ಯಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ಕಾಯ್ದೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಕುರಿತು ಪರಿಶೀಲಿಸಿತು. ಅರ್ಜಿದಾರ ಸಂಸ್ಥೆ ಪರವಾಗಿ ಹಾಜರಾದ ಹಿರಿಯ ವಕೀಲ ಶ್ಯಾಂ ದೀವಾನ್‌ ಕರ್ನಾಟಕದಲ್ಲಿ ಪ್ಲ್ಯಾಸ್ಟಿಕ್‌ ನಿರ್ವಹಣೆ ಸ್ಥಿತಿ ಶೋಚನೀ­ಯವಾಗಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಪ್ಲ್ಯಾಸ್ಟಿಕ್‌ ಬಳಕೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಹಸುಗಳು ಪ್ಲ್ಯಾಸ್ಟಿಕ್‌ ಚೀಲಗಳನ್ನು ತಿಂದು ತೊಂದರೆ­ಗೊಳಗಾಗುತ್ತಿವೆ ಎಂದರು. ತಮ್ಮ ವಾದವನ್ನು ಸಮರ್ಥಿಸುವ ಛಾಯಾಚಿತ್ರಗಳನ್ನು ಶ್ಯಾಂ ದಿವಾನ್‌ ನ್ಯಾಯಾಲಯದಲ್ಲಿ ಪ್ರದರ್ಶಿಸಿದರು.

ಈ ಛಾಯಾ­ಚಿತ್ರಗಳನ್ನು ದೊಮ್ಮ­ಲೂರು, ದೊಡ್ಡೇನ ಎಕ್ಕುಂಡಿ ಹಾಗೂ ಕಾಮರಾಜ್‌ ರಸ್ತೆಗಳಲ್ಲಿ ತೆಗೆಯಲಾಗಿದೆ.
ರಾಜ್ಯದ ಶೋಚನೀಯ ಸ್ಥಿತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಎಷ್ಟು ಸಲ ಬೆಂಗಳೂರಿನ ಈ ಪ್ರದೇಶಗಳಿಗೆ ಭೇಟಿ ನೀಡಿದ್ದೀರಿ? ಕೊನೆಯ ಸಲ ಭೇಟಿ ಕೊಟ್ಟಿದ್ದು ಯಾವಾಗ  ಎಂದು ಕರ್ನಾಟಕದ ವಕೀಲರನ್ನು ಕೇಳಿತು. ಪ್ಲ್ಯಾಸ್ಟಿಕ್‌ ನಿಷೇಧಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿತು.

ಪ್ರಮಾಣ ಪತ್ರದಲ್ಲಿ ಸರಿಯಾದ ಮಾಹಿತಿ ಕೊಡದಿದ್ದರೆ ತನ್ನ ಮುಂದೆ ಹಾಜರಾಗುವಂತೆ ಮುಖ್ಯ ಕಾರ್ಯ­ದರ್ಶಿಗಳಿಗೆ ಸೂಚಿಸುವುದಾಗಿ ನ್ಯಾಯಾ­ಲಯ ಎಚ್ಚರಿಸಿತು. ರಾಜಸ್ತಾನದಲ್ಲಿ ಪ್ಲ್ಯಾಸ್ಟಿಕ್‌ ನಿಷೇಧಿಸಲು ಕೈಗೊಂಡಿರುವ ಕ್ರಮಗಳನ್ನು ಖುದ್ದು ಪರಿಶೀಲಿಸಲು ನ್ಯಾಯಾಲಯವು ಸುಪ್ರೀಂ ಕೋರ್ಟ್‌ ವಕೀಲರ ನೇತೃತ್ವದಲ್ಲಿ ಸಮಿತಿ ರಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT