ADVERTISEMENT

ಪ. ಬಂಗಾಳ ಸಚಿವ ಮಿತ್ರಾ ಬಂಧನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST

ಕೋಲ್ಕತ್ತ (ಪಿಟಿಐ): ಬಹುಕೋಟಿ ವಂಚನೆಯ ಶಾರದಾ ಚಿಟ್‌ ಫಂಡ್ ಹಗರಣ­ದಲ್ಲಿ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮದನ್ ಮಿತ್ರಾ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ. ಇದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿದೆ.

ಪಿತೂರಿ, ವಂಚನೆ ಮತ್ತು ಹಣ ದುರ್ಬಳಕೆ ಆರೋಪಗಳನ್ನು ಮಿತ್ರಾ ಅವರ ಮೇಲೆ ಹೊರಿಸಲಾಗಿದೆ. ಶಾರದಾ ಸಮೂಹದಿಂದ ಅನುಚಿತ ಆರ್ಥಿಕ ಪ್ರಯೋಜನ ಪಡೆದ ಆರೋಪಗಳ ಮೇಲೆ ಮದನ್ ಮಿತ್ರಾ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಇಲ್ಲಿನ ಸಿಬಿಐ ಕಚೇರಿ­ಯಲ್ಲಿ ನಡೆದ 5 ತಾಸಿನ ವಿಚಾ­ರಣೆ ನಂತರ ಅವರನ್ನು ಬಂಧಿಸ­ಲಾ­ಯಿತು.

ಶಾರದಾ ಸಮೂಹ ಮತ್ತು ಸಮೂಹದ ಮುಖ್ಯಸ್ಥ ಸುದೀಪ್ತೊ ಸೆನ್ ಅವರ ಕಾನೂನು ಸಲಹೆಗಾರ ನರೇಶ್ ಬಲೋಡಿಯಾ ಅವರನ್ನೂ ಈ ಹಗರ­ಣದ ಸಂಬಂಧ ಸಿಬಿಐ ಶುಕ್ರ­ವಾರ ಬಂಧಿಸಿದೆ. ಪಿತೂರಿ, ವಂಚನೆ, ಹಣವನ್ನು ವರ್ಗಾಯಿಸಿದ ಆರೋಪ­ದಲ್ಲಿ ನರೇಶ್ ಅವರನ್ನು ಬಂಧಿಸಲಾಗಿದೆ.

ಹಗರಣ ಕುರಿತು ಸುದೀಪ್ತೊ ಸೆನ್ ಸಿಬಿಐಗೆ ನೀಡಿದ್ದ ವಿವ­ರಣೆ ಪತ್ರವನ್ನು ನರೇಶ್ ಬಲೋಡಿಯಾ ಬರೆದಿದ್ದರು ಎಂದು ಸಿಬಿಐ ಅಧಿ­ಕಾರಿ­­ಗಳು ಹೇಳಿದ್ದಾರೆ. ಶಾರದಾ ಹಗರಣ­ದಲ್ಲಿ ಈಗಾಗಲೇ ತೃಣಮೂಲ ಕಾಂಗ್ರೆಸ್‌ ಸಂಸದ­ರಾದ ಕುನಾಲ್ ಘೋಷ್, ಸೃಂಜಯ ಬೋಸ್ ಅವರನ್ನು ಸಿಬಿಐ ಬಂಧಿಸಿದೆ.

ಧೈರ್ಯವಿದ್ದರೆ ಬಂಧಿಸಿ
ಮದನ್ ಮಿತ್ರಾ ಬಂಧನವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದು, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿ­ದ್ದಾರೆ. ‘ಇದು ಕಾನೂನು ಬಾಹಿರ ಮತ್ತು ಅಸಾಂವಿಧಾನಿಕ ಕ್ರಮವಾ­ಗಿದ್ದು, ಪ್ರಜಾ­ಸತ್ತಾತ್ಮಕ ಸಂಸ್ಥೆ­ಗ­ಳನ್ನು ನಾಶ ಮಾಡುವ ನಡೆ. ಇದೊಂದು ರಾಜಕೀಯ ಷಡ್ಯಂತ್ರ ಹಾಗೂ ಕೀಳು­ಮಟ್ಟದ ಸಂಚು. ನಮ್ಮ ಸರ್ಕಾರ ಇದನ್ನು ಖಂಡಿಸು­ತ್ತದೆ. ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ’ ಎಂದು ಕೇಂದ್ರಕ್ಕೆ ಸವಾಲು ಎಸೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.