ADVERTISEMENT

ಫೇಸ್‌ಬುಕ್‌ನಲ್ಲಿ ಸುಳ್ಳು ಮಾಹಿತಿ: ಮಹಿಳೆಯ ಕೊಂದ ಯುವಕ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಜಬಲ್‌ಪುರ (ಪಿಟಿಐ): ಫೇಸ್‌ಬುಕ್‌ನ ಮೂಲಕ ಆರಂಭವಾದ ಗೆಳೆತನ  ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಜಬಲ್‌ಪುರದಲ್ಲಿ  ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶ ಮುಜಫ್ಫರ್‌ನಗರದ ವಿನೀತ್‌ ಸಿಂಗ್‌ (22) ಎಂಬಾತನಿಗೆ ಸುಳ್ಳು ವಿವರ ನೀಡಿ ಆತನ ಜತೆ ಸ್ನೇಹ ಬೆಳೆಸಿದ್ದ ಜ್ಯೋತಿ ಕೋರಿ (44) ಎಂಬುವವರನ್ನು ವಿನೀತ್‌ ಪಿಸ್ತೂಲ್‌­ನಿಂದ ಗುಂಡಿಟ್ಟು ಕೊಲೆ ಮಾಡಿ, ತಾನೂ ಗುಂಡು ಹಾರಿಸಿ­ಕೊಂಡು ಆತ್ಮಹತ್ಯೆ ಮಾಡಿಕೊಂಡಿ­ದ್ದಾನೆ.

ಕಳೆದ ಎರಡೂವರೆ ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಜ್ಯೋತಿ ತನ್ನ ಭಾವಚಿತ್ರ, ವೈಯಕ್ತಿಕ ವಿವರಗಳನ್ನು ಮರೆ ಮಾಚಿ ವಿನೀತ್‌ ಜತೆ ಸ್ನೇಹ ಬೆಳೆಸಿದ್ದರು.  ಮೊದಲ ಸಲದ ಭೇಟಿಗಾಗಿ ಏಪ್ರಿಲ್‌ 18ರಂದು ಜಬಲ್‌ಪುರಕ್ಕೆ ಬಂದಾಗ  ಜ್ಯೋತಿಗೆ ವಿವಾಹವಾಗಿ ಮೂವರು ಮಕ್ಕಳಿ­ರುವುದು ವಿನೀತ್‌ ಸಿಂಗ್‌ಗೆ ತಿಳಿದು ಬಂದಿದೆ. ನಂತರ ಇಬ್ಬರೂ ನರ್ಮದಾ ನದಿಯ ತೀರದ ಭೇಧ್‌ಘಾಟ್‌ ಪ್ರದೇಶಕ್ಕೆ  ತೆರಳಿದ್ದಾರೆ. ಮೋಸ ಹೋದ ವಿನೀತ್‌ ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಜಬಲ್‌ಪುರ ಐಜಿಪಿ ಉಪೇಂದ್ರ ಜೈನ್‌ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ವಿನೀತ್‌ ಸಿಂಗ್‌ನ ಪಿಸ್ತೂಲ್‌ ಹಿಡಿದುಕೊಂಡಿರುವ ಚಿತ್ರ­ಗಳನ್ನು ಮೃತ ಜ್ಯೋತಿ ಲೈಕ್‌ ಮಾಡಿದ್ದರು ಎಂದು  ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.