ADVERTISEMENT

ಬಂಗಲೆ ತೆರವು: ಗಡುವು ಪಾಲಿಸದ ಮಾಜಿ ಸಚಿವರು

​ಪ್ರಜಾವಾಣಿ ವಾರ್ತೆ
Published 26 ಜೂನ್ 2014, 19:30 IST
Last Updated 26 ಜೂನ್ 2014, 19:30 IST

ನವದೆಹಲಿ (ಪಿಟಿಐ): ಮಾಜಿ ಸಚಿವ­ರಲ್ಲಿ ಹಲವರು ತಮ್ಮ ಅಧಿಕೃತ ನಿವಾಸ ತೆರವುಗೊಳಿಸಲು ಜೂನ್‌ 26ರ ವರೆಗೆ ನೀಡಿದ್ದ ಗಡುವು ಪಾಲಿಸಲು ವಿಫಲರಾ­ಗಿದ್ದಾರೆ. ಆದ್ದರಿಂದ ನಗರಾಭಿವೃದ್ಧಿ ಸಚಿವಾಲ­ಯವು ಇವರಿಗೆಲ್ಲ ಮತ್ತೆ ನೋಟಿಸ್‌ ಕಳಿಸಲು ಮುಂದಾಗಿದೆ.

ಹೊಸ ಸಚಿವರಲ್ಲಿ 9 ಮಂದಿ ಈ ಹಿಂದೆ  ಸಂಸದರಾಗಿದ್ದಾಗ ವಾಸ ಮಾಡು­­ತ್ತಿದ್ದ ಬಂಗಲೆಯಲ್ಲಿಯೇ ತಮ್ಮ ವಾಸ್ತವ್ಯ
ಮುಂದುವರಿಸಲಿದ್ದಾರೆ.  ಗೃಹ ಸಚಿವ ರಾಜನಾಥ್‌ ಸಿಂಗ್‌, ಹಣ­ಕಾಸು ಸಚಿವ ಅರುಣ್‌ ಜೇಟ್ಲಿ, ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ರೈಲ್ವೆ ಸಚಿವ ಸದಾ-­ನಂದ ಗೌಡ ಸೇರಿದಂತೆ 29 ಮಂದಿಗೆ ನೂತನ ಬಂಗಲೆಗಳನ್ನು ಮಂಜೂರು ಮಾಡಲಾಗಿದೆ.

ಆದರೆ, ಮಾಜಿ ಸಚಿವರು ಬಂಗಲೆ ತೆರವು­ಗೊಳಿಸದೇ ಇರುವ ಕಾರಣ ಇವರಿಗೆ ತಮ್ಮ ಹೊಸ ನಿವಾಸಕ್ಕೆ ತೆರಳಲು ಸಾಧ್ಯವಾಗಿಲ್ಲ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಗ್ರಾಹಕರ ವ್ಯವ­ಹಾರ  ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌, ಮಹಿಳೆ ಮತ್ತು ಮಕ್ಕಳ ಅಭಿ­ವೃದ್ಧಿ ಸಚಿವೆ ಮೇನಕಾ ಗಾಂಧಿ, ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ಸೇರಿದಂತೆ 9 ಸಚಿವರು ಈಗಿರುವ ಬಂಗಲೆ­ಯಲ್ಲಿಯೇ ವಾಸ್ತವ್ಯ ಮುಂದುವರಿಸುವರು. ಬಂಗಲೆ ಲಭ್ಯ ಇಲ್ಲದ ಕಾರಣ ಸಚಿವರು ಈಗ ಅಶೋಕಾ ಹೋಟೆಲ್‌ ಅಥವಾ ಅವರವರ ರಾಜ್ಯಗಳ ಭವನಗಳಲ್ಲಿ ವಾಸ ಮಾಡುತ್ತಿದ್ದಾರೆ.

ಮಾಜಿ ಸಚಿವರಾದ ಪಿ. ಚಿದಂಬರಂ, ಹರೀಶ್‌ ರಾವತ್‌ ಮತ್ತು ಬಿ.ಕೆ. ಹಂಡೀಕ್‌ ತಮ್ಮ ಸರ್ಕಾರಿ ಬಂಗಲೆಗಳನ್ನು ಈಗಾಗಲೇ ತೆರವುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.