ADVERTISEMENT

ಬಡ್ತಿ ಮೀಸಲಾತಿ ರದ್ದತಿ: ‘ಸುಪ್ರೀಂ’ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2017, 19:30 IST
Last Updated 18 ಆಗಸ್ಟ್ 2017, 19:30 IST

ನವದೆಹಲಿ: ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ಕಾಯ್ದೆ ರದ್ದುಪಡಿಸಿ ಆದೇಶಿಸಿದ್ದ ಸುಪ್ರೀಂ ಕೋರ್ಟ್‌, ಮೂರು ತಿಂಗಳೊಳಗೆ ಹೊಸ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸುವಂತೆ ಕಳೆದ ಫೆಬ್ರುವರಿ 9ರಂದು ಸೂಚಿಸಿದ್ದರೂ ರಾಜ್ಯ ಸರ್ಕಾರ ಪಾಲಿಸಿಲ್ಲ ಎಂದು ದೂರಿ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.

ಆದೇಶ ಹೊರಬಿದ್ದು ಆರು ತಿಂಗಳುಗಳು ಕಳೆದಿವೆ. ಮೂರು ತಿಂಗಳ ಕಾಲಮಿತಿ ನಿಗದಿಪಡಿಸಿದ್ದರೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಆದೇಶ ಪಾಲನೆಯ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿ ಎಂ.ನಾಗರಾಜ್‌, ಬಿ.ಕೆ. ಪವಿತ್ರಾ, ಶಿವಸ್ವಾಮಿ ಹಾಗೂ ರವೀಶಕುಮಾರ್‌ ಹಾಗೂ 100ಕ್ಕೂ ಅಧಿಕ ಸರ್ಕಾರಿ ನೌಕರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳಲ್ಲಿ ತಿಳಿಸಲಾಗಿದೆ.

ಹಿರಿಯ ವಕೀಲರಾದ ಕಿರಣ್‌ ಸೂರಿ ಹಾಗೂ ರಾಜೀವ್‌ ಧವನ್‌ ಅವರ ಮೂಲಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದ್ದು, ಮುಂದಿನ ವಾರ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.‌

ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ 2002ರ ಕಾಯ್ದೆಯನ್ನು ರದ್ದುಪಡಿಸಿರುವುದರಿಂದ ಪರಿಶಿಷ್ಟ ಜಾತಿಯ ನೌಕರರ ಹುದ್ದೆಯ ಮೇಲೆ ಆಗಲಿರುವ ಪರಿಣಾಮವನ್ನು ತಪ್ಪಿಸಲೆಂದೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದು, ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಿದೆ.

ಸಮರ್ಥನೆ: ‘ಪರಿಶಿಷ್ಟ ಜಾತಿ ಮತ್ತು ವರ್ಗಗಳ ನೌಕರರ ಬಡ್ತಿಯಲ್ಲಿ ಮೀಸಲಾತಿ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಿದ ಕ್ರಮವನ್ನು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳುತ್ತೇವೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT