ADVERTISEMENT

ಬಡ್ತಿ ಮೀಸಲು ಮಸೂದೆ: ಸಕಾರಾತ್ಮಕವಾಗಿ ಸ್ಪಂದಿಸಿದ ರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 20:02 IST
Last Updated 29 ಡಿಸೆಂಬರ್ 2017, 20:02 IST
ಬಡ್ತಿ ಮೀಸಲು ಮಸೂದೆ: ಸಕಾರಾತ್ಮಕವಾಗಿ ಸ್ಪಂದಿಸಿದ ರಾಷ್ಟ್ರಪತಿ
ಬಡ್ತಿ ಮೀಸಲು ಮಸೂದೆ: ಸಕಾರಾತ್ಮಕವಾಗಿ ಸ್ಪಂದಿಸಿದ ರಾಷ್ಟ್ರಪತಿ   

ಬೆಂಗಳೂರು: ಹಿಂಬಡ್ತಿ ಭೀತಿಯಲ್ಲಿರುವ ಪರಿಶಿಷ್ಟ ಜಾತಿ ನೌಕರರ ಹಿತಕಾಯಲು ರಾಜ್ಯ ಸರ್ಕಾರ ತಂದಿರುವ ಮಸೂದೆಗೆ ಅಂಕಿತ ಹಾಕುವ ಕುರಿತು ರಾಷ್ಟ್ರಪತಿ ರಾಮನಾಥ ಕೋವಿಂದ್ ಸಕಾರಾತ್ಮಕವಾಗಿ ಸ್ಪಂದಿಸಿದರು.

ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿರುವ ಕೋವಿಂದ್ ಅವರನ್ನು ರಾಜಭವನದಲ್ಲಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಮಾತುಕತೆ ನಡೆಸಿದರು.

ಬಡ್ತಿಯಲ್ಲಿ ಮೀಸಲಾತಿ ನೀಡುವ ಕುರಿತು ಒಂದೂವರೆ ದಶಕಗಳ ಹಿಂದೆ ತಂದಿರುವ ಕಾಯ್ದೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಅನೇಕರು ಈಗ ಬಡ್ತಿ ಪಡೆದು ವಿವಿಧ ಹುದ್ದೆಯಲ್ಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನುಸಾರ ಅವರಿಗೆಲ್ಲ ಹಿಂಬಡ್ತಿ ನೀಡಿದರೆ ನೌಕರರ ಮೇಲೆ ಮಾನಸಿಕ, ಸಾಮಾಜಿಕವಾಗಿ ದುಷ್ಪರಿಣಾಮ ಉಂಟಾಗಲಿದೆ. ಇದನ್ನು ತಪ್ಪಿಸಲು ಸರ್ಕಾರ ತಂದಿರುವ ಮಸೂದೆಗೆ ಉಭಯ ಸದನಗಳು ಅನುಮೋದನೆ ನೀಡಿವೆ ಎಂದು ರಾಷ್ಟ್ರಪತಿಗಳಿಗೆ ವಿವರಿಸಿದ ಸಿದ್ದರಾಮಯ್ಯ, ಮಾನವೀಯತೆ ಆಧಾರದ ಮೇಲೆ ಅಂಕಿತ ಹಾಕುವಂತೆ ಕೋರಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ರಾಷ್ಟ್ರಪತಿ, ಮನವಿ ಪರಿಗಣಿಸುವ ಭರವಸೆ ನೀಡಿದರು.

ಬಜೆಟ್‌ನ ಶೇ 18ರಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಡಲು ರಾಜ್ಯ ಸರ್ಕಾರ ತಂದಿರುವ ಕಾಯ್ದೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ, ಕಾಯ್ದೆಯ ಪ್ರತಿಯೊಂದನ್ನು ಕಳುಹಿಸುವಂತೆ ಮುಖ್ಯಮಂತ್ರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.