ADVERTISEMENT

ಬಾಂಬ್‌ ಇಟ್ಟಿದ್ದು ಬೆಂಗಳೂರಲ್ಲಿ?

ಗುವಾಹಟಿಗೆ ಹೊರಟಿದ್ದ ರೈಲಿನಲ್ಲಿ ಅವಳಿ ಸ್ಫೋಟ: ತನಿಖೆ ತೀವ್ರ

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:30 IST
Last Updated 2 ಮೇ 2014, 19:30 IST

ಚೆನ್ನೈ (ಪಿಟಿಐ): ಬೆಂಗಳೂರು– ಗುವಾ­ಹಟಿ ರೈಲಿನಲ್ಲಿ ಗುರುವಾರ ಸಂಭವಿಸಿದ ಅವಳಿ ಸ್ಫೋಟದ ತನಿಖೆ ಆರಂಭಿಸಿರುವ ತಮಿಳುನಾಡು ತನಿಖಾ ದಳವು, ‘ಈ ಸ್ಫೋಟಕಗಳನ್ನು ಬೆಂಗಳೂರಿನಲ್ಲಿಯೇ ಇರಿಸಿರಬಹುದು’ ಎಂಬ ಶಂಕೆ ವ್ಯಕ್ತ­ಪಡಿಸಿದೆ. 

ತಮಿಳು­ನಾ­ಡಿನ ಸಿಬಿ–ಸಿಐಡಿ (ಗಂಭೀರ ಅಪರಾಧ­ಗಳ ತನಿಖೆ ನಡೆಸುವ ವಿಭಾಗ) ಬೆಂಗಳೂರಿಗೆ ತನ್ನ ತಂಡ ಕಳಿಸಿದೆ. ಸ್ಫೋಟದ ಸಂಚುಕೋರರು ಕರ್ನಾಟಕದ ಭೂಗತ ಜಾಲದ ನೆರವು ಪಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದೆ.

‘ಇದುವರೆಗೆ ಕಲೆಹಾಕಲಾಗಿರುವ ಮಾಹಿತಿಗಳನ್ನು ನೋಡಿದರೆ ‘ಟೈಮರ್‌’ ಸಾಧನ ಅಳವಡಿಸಲಾಗಿದ್ದ ಈ ಬಾಂಬ್‌­ಗಳನ್ನು ಬೆಂಗಳೂರಿನಲ್ಲೇ ಇಟ್ಟಿರುವ ಅನುಮಾನ ಮೂಡುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ­ಯೊಬ್ಬರು ತಿಳಿಸಿದರು.

ಸಿಬಿ– ಸಿಐಡಿ ಪೊಲೀಸರು ಕರ್ನಾಟ­ಕದ ಪೊಲೀಸರೊಂದಿಗೆ ಮಾಹಿತಿ ವಿನಿ­ಮಯ ಮಾಡಿಕೊಳ್ಳುವ ಜತೆಗೆ, ಚೆನ್ನೈ ಕೇಂದ್ರ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ.

‘ಆರೋಪಿ ರೈಲಿನಲ್ಲಿ ಪ್ರಯಾ­ಣಿಕ­ನಂತೆಯೇ ಬಂದಿದ್ದನೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸಿಸಿಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿ­ಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ, ಲೆಫ್ಟಿ­ನೆಂಟ್‌ ಕರ್ನಲ್‌ ಬಾಲಕೃಷ್ಣ ನೇತೃತ್ವದ ಆರು ಜನರ ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಆರು ಸದಸ್ಯರ ತಂಡವು ಇಲ್ಲಿಗೆ ಗುರುವಾರ ರಾತ್ರಿ ಬಂದಿತು. ಸ್ಫೋಟದ ತನಿಖೆ ನಡೆಸುತ್ತಿ­ರುವ ರಾಜ್ಯ ಪೊಲೀಸರಿಗೆ ನೆರವು ನೀಡಲಿರುವ ಎನ್‌ಎಸ್‌ಜಿ ತಂಡವು, ತಮಿಳುನಾಡಿನ ಉನ್ನತ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ಆರಂಭಿಸಿದೆ  ಎಂದು ಮೂಲಗಳು ತಿಳಿಸಿವೆ.

ರೈಲು ಸ್ಫೋಟದ ಗುರಿ ಸೀಮಾಂಧ್ರ?: ರೈಲು ಸ್ಫೋಟದ ನಿಜವಾದ ಗುರಿ ಆಂಧ್ರ ಪ್ರದೇಶ ಆಗಿತ್ತೇ?– ಕೆಲವು ಅಂಶಗಳ ಹಿನ್ನೆ­ಲೆಯಲ್ಲಿ ಕೇಂದ್ರ ಗೃಹ ಸಚಿವಾಲ­ಯ­ದಲ್ಲಿ ಈ ಊಹೆ ಸುಳಿದಾಡುತ್ತಿದೆ.

‘ಸೀಮಾಂಧ್ರ ಹೊರತುಪಡಿಸಿ ದಕ್ಷಿಣ ಭಾರತದ ಬೇರೆಲ್ಲಾ ಕಡೆ ಲೋಕಸಭಾ ಚುನಾವಣೆ ಮುಗಿದಿದೆ. ಈಗ ಸ್ಫೋಟಕ್ಕೆ ಗುರಿಯಾಗಿರುವ ರೈಲು ಇನ್ನೂ ಚುನಾ­ವಣೆ ನಡೆಯಬೇಕಿರುವ ಸೀಮಾಂಧ್ರದ ಪ್ರದೇಶವನ್ನು ಹಾದು ಗುವಾಹಟಿಗೆ ತೆರಳುವುದಿತ್ತು. ಆದರೆ ಸ್ಫೋಟಕ್ಕೆ ಇದೇ ಕಾರಣ ಎಂದು ಖಚಿತವಾಗಿ ಹೇಳ­ಲಾಗದು. ಆದರೆ ಈ ಸಾಧ್ಯತೆಯೂ ಇದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಚೆನ್ನೈ ನಿಲ್ದಾಣಕ್ಕೆ ರೈಲು ಕನಿಷ್ಠ 1 ಗಂಟೆಯಷ್ಟು ತಡವಾಗಿ ಬಂದಿದೆ. ಬಾಂಬ್‌ ಸ್ಫೋಟದಲ್ಲಿ ಟೈಮರ್‌ ಬಳಕೆ­ಯಾಗಿದ್ದೇ ಆದರೆ ಹಾಗೂ ರೈಲು ಸರಿ­ಯಾದ ಸಮಯಕ್ಕೆ ಚೆನ್ನೈ ನಿಲ್ದಾಣ ಬಿಟ್ಟಿದಿದ್ದರೆ ಬಾಂಬ್‌ಗಳು ದಕ್ಷಿಣ ಆಂಧ್ರ­ಪ್ರದೇಶದ ವ್ಯಾಪ್ತಿಯಲ್ಲಿ ಸ್ಫೋಟಗೊಳ್ಳು­ತ್ತಿ­ದ್ದವು ಎಂದು ಹೇಳಲಾಗಿದೆ.

ಈ ಎಕ್ಸ್‌ಪ್ರೆಸ್‌ ರೈಲು ಆಂಧ್ರಪ್ರದೇ­ಶದ ಒಂಗೋಲ್‌, ವಿಜಯವಾಡ, ರಾಜ­ಮಂಡ್ರಿ, ವಿಶಾಖಪಟ್ಟಣ, ವಿಜಯನಗರ, ಶ್ರೀಕಾಕುಳಂ, ಪಾಲಸಗಳಲ್ಲಿ ನಿಲುಗಡೆ ಇದ್ದು, ಈ ಎಲ್ಲ ಪ್ರದೇಶಗಳೂ ಮುಂದಿನ ಬುಧವಾರ ಚುನಾವಣೆ ನಡೆಯಬೇಕಿ­ರುವ ಸೀಮಾಂಧ್ರ ವ್ಯಾಪ್ತಿಯಲ್ಲೇ ಬರುತ್ತವೆ.

ಸ್ಥಳಕ್ಕೆ ಎನ್‌ಐಎ ತಂಡ: ಕೇಂದ್ರ ಸರ್ಕಾರವು ಸ್ಫೋಟದ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕುವ ಸಲುವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಮಾಹಿತಿ ಸಂಗ್ರಹ ತಂಡವನ್ನು ಸ್ಥಳಕ್ಕೆ ಕಳುಹಿಸಿದೆ.

‘ತನಿಖೆ ನಡೆಸಲು ರಾಜ್ಯ ಸರ್ಕಾರದ ಪೊಲೀಸರೇ ಸಮರ್ಥಿರಿದ್ದಾರೆ’ ಎಂದು ತಮಿಳು­ನಾಡು ಸರ್ಕಾರ ಹೇಳಿತ್ತು.  ‘ಆದರೂ, ನಾವು ಮಾಹಿತಿ ಸಂಗ್ರಹ ತಂಡವನ್ನು ಕಳುಹಿಸಿದ್ದೇವೆ’ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಶಿಮ್ಲಾದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಿಸಿಟಿವಿ ದೃಶ್ಯ ಬಿಡುಗಡೆ
ಚೆನ್ನೈ (ಪಿಟಿಐ): ಬೆಂಗಳೂರು– ಗುವಾ­ಹಟಿ ರೈಲಿನಲ್ಲಿ ಸಂಭವಿಸಿದ ಅವಳಿ ಸ್ಫೋಟಕ್ಕೆ ಸಂಬಂಧಿಸಿದಂತೆ ‘ಸಿಸಿಟಿವಿ’­ಯಲ್ಲಿ ದಾಖಲಾಗಿರುವ ಶಂಕಿತ ಆರೋ­ಪಿಯ ಚಲನವಲನದ ದೃಶ್ಯಗಳನ್ನು ತಮಿ­ಳುನಾಡಿನ ಸಿಬಿ– ಸಿಐಡಿ ಪೊಲೀಸರು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಸ್ಫೋಟದಲ್ಲಿ ಸಾಮ್ಯತೆ
‘ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 2010ರ ಏ.17ರಂದು ಮತ್ತು ಮಲ್ಲೇಶ್ವ­ರದ ಬಿಜೆಪಿ ಕಚೇರಿ ಸಮೀಪ 2013ರ ಏ.17­ರಂದು ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣಗಳಿಗೂ ಚೆನ್ನೈ ರೈಲು ನಿಲ್ದಾಣದಲ್ಲಿನ ಸ್ಫೋಟಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ಮೂರು ಕಡೆಯೂ ಲಘು ಸಾಮರ್ಥ್ಯದ ಸ್ಫೋಟಕ ವಸ್ತುಗಳನ್ನು ಬಳಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ತಮಿಳುನಾಡಿನ ತನಿಖಾ ತಂಡದ ಸಿಬ್ಬಂದಿ ನಗರದ ವಿಧಿ­ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌­ಎಲ್‌) ತಜ್ಞ­ರನ್ನು ಭೇಟಿಯಾಗಿ ನಗರದಲ್ಲಿ ಈ ಹಿಂದೆ ಸಂಭವಿಸಿದ್ದ ಬಾಂಬ್‌ ಸ್ಫೋಟಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕರಾವಳಿಯಿಂದ ಸ್ಫೋಟಕ: ರೈಲು ಸ್ಫೋಟಕ್ಕೆ ರಾಜ್ಯದ ಕರಾವಳಿ ಪ್ರದೇಶದಿಂದ ಸ್ಫೋಟಕ ವಸ್ತುಗಳು ಪೂರೈಕೆಯಾಗಿವೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಐಎಂ ಉಗ್ರ ಯಾಸೀನ್‌ ಭಟ್ಕಳನ ಮೂಲಕ ಭಯೋತ್ಪಾದನಾ ಸಂಘಟನೆ­ಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರರು ಸ್ಫೋಟಕ ವಸ್ತುಗಳನ್ನು ಪೂರೈಸಿರುವ ಸಾಧ್ಯತೆ ಇದೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಯ ಸಹಸ್ಥಾಪಕ ಯಾಸಿನ್ ಭಟ್ಕಳನನ್ನು ಬಂಧಿಸಿ ಭಾರಿ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆ ವಸ್ತುಗಳಿಗೂ ಮತ್ತು ರೈಲು ನಿಲ್ದಾಣದಲ್ಲಿನ ಸ್ಫೋಟದ ಸ್ಥಳದಲ್ಲಿ ಪತ್ತೆಯಾಗಿರುವ ಸ್ಫೋಟಕಗಳಿಗೂ ಹೋಲಿಕೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.