ADVERTISEMENT

ಬಾಬಾ ಬುಡನ್‌ಗಿರಿಯಲ್ಲಿ ಧಾರ್ಮಿಕ ಆಚರಣೆ: 6 ವಾರದೊಳಗೆ ನಿರ್ಧರಿಸಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:53 IST
Last Updated 27 ಮಾರ್ಚ್ 2017, 19:53 IST
ಬಾಬಾ ಬುಡನ್‌ಗಿರಿ –ಪ್ರಜಾವಾಣಿ ಚಿತ್ರ
ಬಾಬಾ ಬುಡನ್‌ಗಿರಿ –ಪ್ರಜಾವಾಣಿ ಚಿತ್ರ   

ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿನ ವಿವಾದಾತ್ಮಕ ಗುರು ದತ್ತಾತ್ರೇಯ ಬಾಬಾ ಬುಡನ್‌ಗಿರಿ ಸ್ವಾಮಿ ದರ್ಗಾದಲ್ಲಿ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬಾಬಾ ಬುಡನ್‌ಗಿರಿ ದರ್ಗಾದ ‘ಸಜ್ಜಾದ ನಶೀನ್’ ಆಗಿರುವ (ಸೂಫಿ ಸಂತರ ಉತ್ತರಾಧಿಕಾರಿ) ಸಯ್ಯದ್‌ ಗೌಸ್‌ ಮೊಹಿಯುದ್ದೀನ್‌ ಷಾ ಖಾದ್ರಿ ಅವರ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಹಾಗೂ ನವೀನ್‌ ಸಿನ್ಹಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಆರು ವಾರಗಳ ಗಡುವು ವಿಧಿಸಿತು.

ಕ್ಷೇತ್ರದಲ್ಲಿ ಧಾರ್ಮಿಕ ಆಚರಣೆ ಹೇಗಿರಬೇಕು ಎಂಬುದರ ಕುರಿತು ಸರ್ಕಾರವೇ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿ 2015ರ ಸೆಪ್ಟೆಂಬರ್‌ 3ರಂದು ಕೋರ್ಟ್‌ ನೀಡಿರುವ ಆದೇಶ ಪಾಲಿಸುವಂತೆಯೂ ತಿಳಿಸಲಾಯಿತು.

ADVERTISEMENT

‘ಈ ಹಿಂದೆ ಕೋರ್ಟ್‌ ನೀಡಿರುವ ಆದೇಶ ಧಿಕ್ಕರಿಸಿರುವ ಸರ್ಕಾರ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಹಾಗೂ ಪ್ರತಿ ವರ್ಷ ನಡೆಯುವ ಉರೂಸ್‌ನಲ್ಲಿ ಭಾಗವಹಿಸುವುದನ್ನು ತಡೆಯಲು ಯತ್ನಿಸುತ್ತಿದೆ’ ಎಂದು ದೂರಿ ‘ಸಜ್ಜಾದ ನಶೀನ್’ ಅರ್ಜಿ ಸಲ್ಲಿಸಿದ್ದರು.

ವಿವಾದಿತ ಸ್ಥಳದಲ್ಲಿ ಉಭಯ ಧರ್ಮಗಳ ಪ್ರತಿನಿಧಿಗಳಿಗೆ ಯಾವ ಯಾವ ಆಚರಣೆಗೆ ಅವಕಾಶ ನೀಡಬೇಕು ಎಂಬುದನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿ ಆಧರಿಸಿ ನಿರ್ಧರಿಸುವಂತೆ 2010ರಲ್ಲಿ ನಿರ್ದೇಶಿಸಿದ್ದ ಸುಪ್ರೀಂಕೋರ್ಟ್, ತನ್ನ ನಿರ್ಧಾರ ಪ್ರಕಟಿಸುವ ಮೊದಲು ಉಭಯ ಧರ್ಮಗಳ ಪ್ರತಿನಿಧಿಗಳ ಅಭಿಪ್ರಾಯ ಮತ್ತು ಆಕ್ಷೇಪ ಆಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತ್ತು.

ಪ್ರಕರಣ ಇತ್ಯರ್ಥ ಆಗುವವರೆಗೂ 1989ರ ಫೆಬ್ರುವರಿ 25ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹೊರಡಿಸಿರುವ ಆಜ್ಞೆಯ ಯಥಾಸ್ಥಿತಿ ಕಾಪಾಡಬೇಕು. ಇಂತಹ ಸೂಕ್ಷ್ಮ ವಿಚಾರಗಳ ಕುರಿತು ರಾಜ್ಯ ಸಚಿವ ಸಂಪುಟವೇ ನಿರ್ಧಾರ ಪ್ರಕಟಿಸಬೇಕು ಎಂದು ತಾಕೀತು ಮಾಡಲಾಗಿತ್ತು.

***

17 ವರ್ಷಗಳಿಂದ ಹೋರಾಟ

ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ ಹಿಂದೂ ಮುಸ್ಲಿಮರಿಗೆ ಶ್ರದ್ಧಾಭಕ್ತಿಯ ಕೇಂದ್ರ. ಇದರ ಕೇಂದ್ರದ ಮೇಲೆ ಹಕ್ಕು ಸಾಧಿಸಲು ಎರಡೂ ಧರ್ಮದವರು ನ್ಯಾಯಾಲಯದಲ್ಲಿ ತಮ್ಮತಮ್ಮ ದಾಖಲೆಗಳನ್ನು ಮುಂದಿಟ್ಟುಕೊಂಡು ಸುಮಾರು 17 ವರ್ಷಗಳಿಂದ ಹೋರಾಟ ನಡೆಸುತ್ತಿವೆ.

**

ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದನ್ನು ನೋಡುತ್ತೇವೆ.  ಕ್ರಮ ತೆಗೆದುಕೊಳ್ಳದಿದ್ದರೆ ಜಿಲ್ಲಾಡಳಿತದ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ.
-ಸಯ್ಯದ್‌ ಗೌಸ್‌ ಮೊಹಿಯುದ್ದೀನ್‌ ಷಾ ಖಾದ್ರಿ, ಸೂಫಿಸಂತರ ಉತ್ತರಾಧಿಕಾರಿ

ರಾಜ್ಯ ಸರ್ಕಾರ ಈ ಹಿಂದೆಯೇ ತೀರ್ಮಾನ ತೆಗೆದುಕೊಳ್ಳಬೇಕಿತ್ತು.  ಈಗಲಾದರೂ ದಾಖಲೆಗಳನ್ನು ಆಧರಿಸಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿ
-ಸಿ.ಟಿ.ರವಿ,  ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.