ADVERTISEMENT

ಬಾಲಕಿಯರ ಮೇಲೆ ಅತ್ಯಾಚಾರ

ಬದಾಯೂಂ: ಮರುಕಳಿಸಿದ ದುರ್ಘಟನೆ

ಸಂಜಯ ಪಾಂಡೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ಲಖನೌ: ಉತ್ತರಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ಮೂವರು ದಲಿತ ಬಾಲಕಿಯರ ಮೇಲೆ ಏಳು ಜನರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಈಚೆಗೆ ನಡೆದಿದೆ.

ಇದೇ ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಗುಂಪೊಂದು ಇಬ್ಬರು ದಲಿತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಮರಕ್ಕೆ ನೇಣು ಹಾಕಿ, ಹತ್ಯೆ ಮಾಡಿತ್ತು.

ಎರಡು ತಿಂಗಳ ಹಿಂದೆ ನಡೆದ ಈ ಘಟನೆ ಮರೆಯುವ ಮುನ್ನವೇ ಬದಾಯೂಂ ಜಿಲ್ಲೆಯಲ್ಲಿ ಮತ್ತೆ ದಲಿತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ದುರ್ಘಟನೆ ಭಾನುವಾರ ನಡೆದಿದ್ದು, ಮಂಗಳವಾರ ಬಾಲಕಿಯರ ತಂದೆ–ತಾಯಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿದೆ ಬಂದಿದೆ.

ಆದರೆ, ಪೊಲೀಸರು ಈ ಘಟನೆಯನ್ನು ಸಾಮೂಹಿಕ ಅತ್ಯಾಚಾರ ಘಟನೆ ಎಂದು ದಾಖಲಿಸದೇ, ಥಳಿತ ಮತ್ತು ಲೈಂಗಿಕ ಕಿರುಕುಳ ಪ್ರಕರಣ ಎಂದು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆ ವಿವರ: ಜುಲೈ 6ರಂದು ಮೂವರು ದಲಿತ ಬಾಲಕಿಯರು ಹಸುಗಳಿಗಾಗಿ ಹುಲ್ಲು ಸಂಗ್ರಹಿಸಲು ಗ್ರಾಮದ ಹೊರಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅದೇ ಗ್ರಾಮದ ಮೂವರು ಯುವಕರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ, ತಮ್ಮ ಇತರ ನಾಲ್ವರು ಮಿತ್ರರನ್ನು ಕರೆಸಿಕೊಂಡಿದ್ದಾರೆ.  ಬಾಲಕಿಯೊಬ್ಬಳ ಸಹೋದರ ರಕ್ಷಣೆಗಾಗಿ ಸ್ಥಳಕ್ಕೆ ಧಾವಿಸಿದಾಗ, ಆತನನ್ನು ಯುವಕರ ಗುಂಪು ಚೆನ್ನಾಗಿ ಥಳಿಸಿದೆ. ನಂತರ ಆ ಗುಂಪು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎನ್ನಲಾಗಿದೆ.

ಹೊಸದಾಗಿ ಶವಪರೀಕ್ಷೆ ನಡೆಸಲು ನಿರ್ಧಾರ
ನವದೆಹಲಿ (ಪಿಟಿಐ):
ಉತ್ತರ ಪ್ರದೇಶದ ಬದಾಯೂಂನಲ್ಲಿ ಅತ್ಯಾಚಾರಕ್ಕೆ ಒಳಗಾಗಿ, ಕೊಲೆಯಾದ ಇಬ್ಬರು ಬಾಲಕಿಯರ ಶವಪರೀಕ್ಷೆ-ಯನ್ನು ಹೊಸದಾಗಿ ನಡೆಸಲು ಸಿಬಿಐ ನಿರ್ಧರಿಸಿದೆ.

ಈ ಮುಂಚೆ ಸರಿಯಾದ ವಿಧಾನದಲ್ಲಿ ಶವಪರೀಕ್ಷೆ ನಡೆದಿಲ್ಲ ಎಂಬುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶವಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಶವಪರೀಕ್ಷೆಯನ್ನು ರಾತ್ರಿ ವೇಳೆ ನಡೆಸಲಾಗಿದೆ. ಆದರೆ, ಕತ್ತಲಾದ ನಂತರ ಶವಪರೀಕ್ಷೆ ನಡೆಸಲು ನಿಯಮಾವಳಿಯಲ್ಲಿ ಅವಕಾಶ ಇಲ್ಲ. ತುರ್ತು ಸಂದರ್ಭಗಳಲ್ಲಿ ಮಾತ್ರ ನಡೆಸಬಹುದು.
ಸೂಕ್ತ ಅನುಭವ ಇಲ್ಲದ ಮಹಿಳಾ ವೈದ್ಯರು ಶವಪರೀಕ್ಷೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT