ADVERTISEMENT

ಬಿಜೆಪಿ ಉಸ್ತುವಾರಿ ಕಾರ್ಯದರ್ಶಿ ಅದಲು ಬದಲು

ರಾಜ್ಯಕ್ಕೆ ಮುರಳೀಧರ ರಾವ್‌ ನೇಮಕ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2014, 5:30 IST
Last Updated 22 ಅಕ್ಟೋಬರ್ 2014, 5:30 IST

ನವದೆಹಲಿ: ಮಹಾರಾಷ್ಟ್ರ ಹರಿಯಾಣ ವಿಧಾನ­ಸಭೆ ಚುನಾವಣೆಯ ಗೆಲುವಿನ ಬೆನ್ನಲ್ಲೇ ಮುಂದಿನ ವರ್ಷ ನಡೆಯ-ಲಿರುವ ಅನೇಕ ರಾಜ್ಯಗಳ ಚುನಾವಣೆ-ಯನ್ನು ಸಮರ್ಥ­ವಾಗಿ ಎದುರಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಅನೇಕ ರಾಜ್ಯಗಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ­ಗಳನ್ನು ಅದಲು ಬದಲು ಮಾಡಿದ್ದಾರೆ.

ಪಕ್ಷದ ಹಿರಿಯ ನಾಯಕ ಮಹಾ­ರಾಷ್ಟ್ರ ಗೆಲುವಿನ ರೂವಾರಿ ಓಂ ಮಾಥುರ್‌ ಅವರಿಗೆ ಉತ್ತರ ಪ್ರದೇಶದ ಜವಾಬ್ದಾರಿ ವಹಿಸಲಾಗಿದೆ. ಆ ರಾಜ್ಯ­ದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವ ಮಾಥುರ್‌ಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಗೆಲುವಿನ ಸವಾಲು ನೀಡಲಾಗಿದೆ. 2017ಕ್ಕೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಏಪ್ರಿಲ್‌– ಮೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಅತಿ ದೊಡ್ಡ ರಾಜ್ಯದ 71 ಸ್ಥಾನಗಳನ್ನು ಬಾಚಿಕೊಂಡಿದೆ. ಆ ಸಮಯದಲ್ಲಿ ರಾಜ್ಯದ ಉಸ್ತುವಾರಿ­ಯನ್ನು ಷಾ ಅವರೇ ಹೊತ್ತಿದ್ದರು.

ಮಾಥುರ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮೋದಿ ಅವರು ಗುಜರಾತ್‌ ಮುಖ್ಯ­ಮಂತ್ರಿ ಆಗಿದ್ದಾಗ ಮಾಥುರ್‌ ಆ ರಾಜ್ಯದ ಉಸ್ತುವಾರಿ ನಿರ್ವಹಿಸಿದ್ದರು. ಅಮಿತ್‌ ಷಾ ಕಳೆದ ಆಗಸ್ಟ್‌ನಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದು, ದಕ್ಷ ಹಾಗೂ ಪ್ರಾಮಾಣಿಕವಾಗಿ ದುಡಿಯುವ ಮುಖಂಡರಿಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ.
ಕರ್ನಾಟಕದ ಉಸ್ತುವಾರಿಯನ್ನು ಆಂಧ್ರದ ಮುರಳೀಧರ ರಾವ್‌ ಅವರಿಗೆ ನೀಡಲಾಗಿದೆ. ಇದುವರೆಗೆ ಅವರು ಮಹಾ--ರಾಷ್ಟ್ರದ ಮೇಲುಸ್ತುವಾರಿ ನಿಭಾಯಿಸಿದ್ದಾರೆ.

ಮಹಾರಾಷ್ಟ್ರ ಮತ್ತು ರಾಜಸ್ತಾನದ ಹೊಣೆಗಾರಿಕೆಯನ್ನು ಹಿರಿಯ ನಾಯಕ ಜೆ.ಪಿ ನಡ್ಡಾ ಅವರಿಗೆ ನೀಡಲಾಗಿದೆ. ನಡ್ಡಾ ಷಾ ಅವರಿಗೆ ಆತ್ಮೀಯ­ರಾಗಿ-ದ್ದಾರೆ. ಬಿಹಾರ ಉಸ್ತುವಾರಿ­ಯನ್ನು ರಾಜ--ಸ್ತಾನದ ಬಿಜೆಪಿ ನಾಯಕ ಭೂಪಿಂ-ದರ್‌ ಯಾದವ್‌ ಅವರಿಗೆ ಕೊಡ-ಲಾಗಿದೆ. ಈಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದ ಬಿಜೆಪಿಗೆ ಮುಂದಿನ ವರ್ಷದ ವಿಧಾನಸಭೆ ಚುನಾ-ವಣೆ ಅಗ್ನಿ ಪರೀಕ್ಷೆಯಾಗಿದೆ. ಆ ರಾಜ್ಯ-ದಲ್ಲಿ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಬಿಜೆಪಿ ವಿರುದ್ಧ ಒಗ್ಗೂಡಿವೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಜಮ್ಮು– ಕಾಶ್ಮೀರ ಹಾಗೂ ಜಾರ್ಖಂಡ್‌ಗೆ ಕ್ರಮವಾಗಿ ಅವಿನಾಶ್‌ ರಾಯ್‌ ಖನ್ನಾ ಹಾಗೂ ತ್ರಿವೇಂದ್ರ ಸಿಂಗ್‌ ರಾವತ್‌ ಅವರನ್ನು ನೇಮಿಸಲಾಗಿದೆ. ಬಿಜೆಪಿ ಕಣಿವೆ ರಾಜ್ಯದ ಚುನಾವಣೆ ಮೇಲೂ ಕಣ್ಣಿಟ್ಟಿದ್ದು, ಪಂಜಾಬಿನವರಾದ ಖನ್ನಾ ಹಿಂದೆಯೂ ಆ ರಾಜ್ಯದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಪ್ರಭಾತ್‌ ಝಾ ಅವರಿಗೆ ದೆಹಲಿ ಉಸ್ತುವಾರಿ ಕೊಡಲಾಗಿದೆ. ದೆಹಲಿ ವಿಧಾ-ನಸಭೆಗೂ ಚುನಾವಣೆ ನಡೆ-ಯುವ ಸಾಧ್ಯತೆ ಇದೆ. ಕಳೆದ ಫೆಬ್ರುವರಿ-ಯಿಂದ ದೆಹಲಿ ವಿಧಾನಸಭೆ ಅಮಾನತ್ತಿ-ನಲ್ಲಿದೆ. ಮಾಧ್ಯಮ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮ ಅವರಿಗೆ ಹಿಮಾಚಲ ಪ್ರದೇಶದ ಹೊಣೆಗಾರಿಕೆ ಹೊರಿಸಲಾಗಿದೆ. ಪೂನಂ ಮಹಾಜನ್‌ ದಮನ್‌ ಅಂಡ್‌ ದಿಯು ಮತ್ತು ನಗರ್‌ ಹವೇಲಿ ಉಸ್ತುವಾರಿ ಹೊತ್ತಿದ್ದಾರೆ.

ಇವರಿಬ್ಬರೂ ಪಕ್ಷದ ಹೊಸ ಕಾರ್ಯದರ್ಶಿಗಳಾಗಿದ್ದು, ಇದೇ ಮೊದಲ ಬಾರಿಗೆ ದೊಡ್ಡ ಹೊಣೆಗಾರಿಕೆ ಒಪ್ಪಿಸಲಾಗಿದೆ.
ರಾಜೀವ್‌ ಪ್ರತಾಪ್‌ ರೂಡಿ ಆಂಧ್ರ ಮತ್ತು ತಮಿಳುನಾಡಿನ ಮೇಲ್ವಿಚಾರಣೆ ನಿರ್ವಹಿಸಲಿದ್ದಾರೆ. ಬಿಜೆಪಿ ಅಧ್ಯಕ್ಷರು ಎರಡು ರಾಜ್ಯಗಳ ಉಸ್ತುವಾರಿ ನೀಡಿರುವುದರಿಂದ ರೂಡಿ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರುವ ಬಗ್ಗೆ ಅನುಮಾನ ತಲೆದೋರಿದೆ. ಸಂಪುಟ ಪುನರ್ರಚನೆ ದೀಪಾವಳಿ ಬಳಿಕ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಸಿದ್ಧಾರ್ಥನಾಥ್‌ ಸಿಂಗ್‌ ಅವರಿಗೆ ಪಶ್ಚಿಮ ಬಂಗಾಳ ಉಸ್ತುವಾರಿಯನ್ನೇ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.