ADVERTISEMENT

ಬಿಜೆಪಿ ತೆಕ್ಕೆಗೆ ಜಾರ್ಖಂಡ್

ಜಮ್ಮು– ಕಾಶ್ಮೀರದಲ್ಲಿ ಪಿಡಿಪಿ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2014, 20:27 IST
Last Updated 23 ಡಿಸೆಂಬರ್ 2014, 20:27 IST

ಶ್ರೀನಗರ/ರಾಂಚಿ (ಪಿಟಿಐ): ಜಮ್ಮು–ಕಾಶ್ಮೀರದಲ್ಲಿ ಈ ಬಾರಿಯ ವಿಧಾನ­ಸಭೆ  ಚುನಾವಣೆಯಲ್ಲಿ ದಾಖಲೆ ಮತ­ದಾನ­ವಾಗಿದ್ದರೂ ಯಾವ ಪಕ್ಷವೂ ಸ್ವಂತ ಬಲದ ಮೇಲೆ ಸರ್ಕಾರ ರಚಿ­ಸುವ ಸ್ಥಿತಿಯಲ್ಲಿ ಇಲ್ಲ.  ‘ಮಿಷನ್‌ ೪೪’ ಪಣ ತೊಟ್ಟಿದ್ದ ಬಿಜೆಪಿಯು ಕಣಿವೆ ರಾಜ್ಯ­ದಲ್ಲಿ ತನ್ನ ಪ್ರಾಬಲ್ಯ ಮೆರೆ­ಯಲು ವಿಫಲವಾಗಿದೆ.

ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ಮಹಾ­ರಾಷ್ಟ್ರ ಹಾಗೂ ಹರಿಯಾಣ ವಿಧಾನ­ಸಭೆ ಚುನಾವಣೆ ನಂತರ ಜಾರ್ಖಂಡ್‌­ನಲ್ಲಿಯೂ ಗೆಲುವಿನ ಓಟ ಮುಂದು­ವರಿಸಿದೆ.  ಇಲ್ಲಿ ತನ್ನ ಮಿತ್ರ ಪಕ್ಷ ಎಜೆಎಸ್‌ಯು ಜತೆಗೂಡಿ ಸರ್ಕಾರ ರಚಿ­ಸು­ವುದಕ್ಕೆ ಪಕ್ಷ ಸಿದ್ಧತೆ ನಡೆಸುತ್ತಿದೆ.  ಪ್ರತ್ಯೇಕ ರಾಜ್ಯ ರಚನೆಯಾಗಿ ೧೪ ವರ್ಷ­ಗಳಲ್ಲಿ ಇದೇ ಮೊದಲ ಬಾರಿ ಜಾರ್ಖಂಡ್‌­ನಲ್ಲಿ ಸ್ಥಿರ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ.

ಕೈಗೂಡದ ಲೆಕ್ಕಾಚಾರ: ಕಣಿವೆ ರಾಜ್ಯದ ಮಟ್ಟಿಗೆ ಬಿಜೆಪಿ ಲೆಕ್ಕಾಚಾರ ಕೈಗೂಡಿಲ್ಲ. ಒಟ್ಟು ೮೭ ಸದಸ್ಯ ಬಲದ ವಿಧಾನಸಭೆ­ಯಲ್ಲಿ 

೪೪ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಪ್ರಧಾನಿ ಮೋದಿ ಸಂಕಲ್ಪ ಈಡೇರಲಿಲ್ಲ. ಮುಸ್ಲಿಂ ಪ್ರಾಬ­ಲ್ಯದ ಕಾಶ್ಮೀರ ಕಣಿವೆ ಹಾಗೂ ಬೌದ್ಧ ಜನಾಂಗದವರೇ ಹೆಚ್ಚಿರುವ ಲಡಾಖ್‌­ನಲ್ಲಿ ಪಕ್ಷ ಶೂನ್ಯ ಸಂಪಾದನೆ ಮಾಡಿದೆ.  

ಬಿಜೆಪಿ ಗೆದ್ದಿರುವ ಎಲ್ಲ 25 ಕ್ಷೇತ್ರ­ಗಳು ಹಿಂದೂಗಳ ಪ್ರಾಬಲ್ಯ ಇರುವ ಜಮ್ಮು ಪ್ರಾಂತ್ಯದಲ್ಲಿ ಇವೆ. 

ಸ್ಥಾನಬಲ ಏರಿಕೆ: ಆದರೆ ಪಕ್ಷವು ಈ ಬಾರಿ ತನ್ನ ಸ್ಥಾನಬಲವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿ­ಕೊಂಡಿದೆ. ೨೦೦೮ರ ಚುನಾವಣೆಯಲ್ಲಿ ಬಿಜೆಪಿ ೧೧ ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.  ಪಿಡಿಪಿ ಬಲಾಬಲ ೨೧ರಿಂದ ೨೮ಕ್ಕೆ ಏರಿದೆ.

ಎನ್‌ಸಿ ಮೂರನೇ ಸ್ಥಾನಕ್ಕೆ: ಆಡಳಿತ­ಪಕ್ಷ  ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಹೀನಾಯ ಸೋಲು ಅನುಭವಿಸಿದ್ದು ಕೇವಲ ೧5 ಸ್ಥಾನಗಳಲ್ಲಿ ಗೆದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ. ಮುಖ್ಯ­ಮಂತ್ರಿ ಹಾಗೂ ಎನ್‌ಸಿ ಅಧ್ಯಕ್ಷ ಒಮರ್‌ ಅಬ್ದುಲ್ಲಾ ಅವರು ಸೋನಾ­ವರ್‌ ಕ್ಷೇತ್ರ­ವನ್ನು ಕಳೆದುಕೊಂಡಿದ್ದಾರೆ. ಆದರೆ ಬೀರ್ವಾ ಕ್ಷೇತ್ರದಲ್ಲಿ ಕೇವಲ ಸಾವಿರ ಮತಗಳಿಂದ ಗೆಲುವಿನ ದಡ ಸೇರಿದ್ದಾರೆ.

ಇನ್ನು ಎನ್‌ಸಿ ಮಿತ್ರ ಪಕ್ಷ ಕಾಂಗ್ರೆಸ್‌ ಕೇವಲ ೧೨ ಕ್ಷೇತ್ರಗಳಲ್ಲಿ ಗೆದ್ದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ಪಕ್ಷವು ೧೭ ಸ್ಥಾನಗಳಲ್ಲಿ ಗೆದ್ದಿತ್ತು. ಮಾಜಿ ಪ್ರತ್ಯೇಕತಾವಾದಿ ಸಾಜಿದ್‌ ಲೋನ್‌ ಅವರ ಜಮ್ಮು ಕಾಶ್ಮೀರ ಪೀಪಲ್‌ ಕಾನ್ಫರೆನ್ಸ್‌ ಎರಡು ಸ್ಥಾನಗಳನ್ನು ಪಡೆದು­­ಕೊಂಡಿದೆ. ಜೆಕೆಪಿಡಿಎಫ್‌ (ಜಾತ್ಯತೀತ) ಮತ್ತು ಸಿಪಿಎಂ ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿವೆ. ಮೂರು ಸ್ಥಾನಗಳು ಪಕ್ಷೇತರರ ಪಾಲಾಗಿವೆ.

ಬಿಜೆಪಿ ಮುಂದೆ ಮೂರು ಆಯ್ಕೆ: ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆತ ಬೆನ್ನಲ್ಲಿಯೇ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಪಕ್ಷಕ್ಕೆ ಎಲ್ಲ ಮೂರು ಆಯ್ಕೆಗಳು ಮುಕ್ತವಾಗಿವೆ ಎಂದಿದ್ದಾರೆ.

ಮೊದಲ ಆಯ್ಕೆ ಪ್ರಕಾರ, ಸ್ವತಃ ಸರ್ಕಾರ ರಚಿಸುವುದು, ಎರಡನೆ­ಯದು– ಬೇರೆ ಪಕ್ಷದ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದು ಮೂರನೆ­ಯದು– ಸರ್ಕಾರದಲ್ಲಿ ಭಾಗಿಯಾಗು­ವುದು– ಈ ಮೂರು ಆಯ್ಕೆಗಳು ನಮ್ಮ ಮುಂದೆ ಇವೆ ಎಂದು ಷಾ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ಸಂಸದೀಯ ಮಂಡಳಿಯು ಬುಧವಾರ ಸಭೆ ಸೇರಿ ಮುಂದಿನ ನಡೆಯನ್ನು ನಿರ್ಧರಿಸಲಿದೆ.
ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ­ಹೊಮ್ಮಿರುವ  ಪಿಡಿಪಿಯ ಮುಖ್ಯಸ್ಥೆ ಮೆಹಮೂಬಾ ಮುಫ್ತಿ ಅವರು ತಮ್ಮ ಪಕ್ಷದ ಮುಂದಿನ ನಡೆಯ ಸುಳಿವನ್ನು ಇನ್ನೂ ಬಿಟ್ಟು­ಕೊಟ್ಟಿಲ್ಲ. ಯಾರ ಜತೆ ಸೇರಿಕೊಂಡಾ­ದರೂ ಸರ್ಕಾರ ರಚಿಸ­ಬೇಕು ಎನ್ನುವುದು ನಮ್ಮ ಆದ್ಯತೆಯಲ್ಲ. ಜನರ ನಿರೀಕ್ಷೆ ಹಾಗೂ ಉತ್ತಮ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಚನೆಯ ಸಾಧ್ಯತೆಯನ್ನು ಕಂಡು­ಕೊಳ್ಳು­ವುದಕ್ಕೆ ಸಮಯ ಬೇಕಾ­ಗು­ತ್ತದೆ. ಈಗಲೇ ಏನನ್ನೂ ಹೇಳುವುದು ಕಷ್ಟ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಿರ್ಗಮಿತ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಕೂಡ ತಮ್ಮ ಪಕ್ಷದ ಮುಂದಿನ ಹೆಜ್ಜೆಯನ್ನು ಬಹಿರಂಗ­ಪಡಿಸಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಎನ್‌ಸಿ­ಯನ್ನು ಕಡೆಗಣಿಸುವಂತಿಲ್ಲ ಎಂದಷ್ಟೇ ಹೇಳಿದ್ದಾರೆ.

ಮತಗಳಿಕೆಯಲ್ಲಿ ಬಿಜೆಪಿ ಮುಂದೆ: ಜಮ್ಮು­ ಕಾಶ್ಮೀರದಲ್ಲಿ ಬಿಜೆಪಿ ಎರ­ಡನೇ ಸ್ಥಾನದಲ್ಲಿ ಇದ್ದರೂ ಮತಗಳಿಕೆ­ಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊ­ಮ್ಮಿದೆ. ಒಟ್ಟು ಚಲಾವಣೆಯಾದ ಮತ­ಗಳಲ್ಲಿ ಶೇ ೨೩ರಷ್ಟು ಮತಗಳು ಪಕ್ಷದ ಪಾಲಾ­ಗಿವೆ. ಪಿಡಿಪಿ ಶೇ ೨೨.೭ ಹಾಗೂ ಎನ್‌ಸಿ ಶೇ ೨೦.೮ ಮತ್ತು ಕಾಂಗ್ರೆಸ್‌ ಶೇ ೧೮­ರಷ್ಟು ಮತಗಳನ್ನು ಪಡೆದು ಕೊಂಡಿವೆ.

ದ್ವಿಗುಣಗೊಂಡ ಸ್ಥಾನಬಲ: ಜಾರ್ಖಂ­ಡ್‌­ನಲ್ಲಿ ಬಿಜೆಪಿ ತನ್ನ ಸ್ಥಾನ­ಬಲವನ್ನು ಈ ಬಾರಿ ದ್ವಿಗುಣ­ಗೊಳಿಸಿ­ಕೊಂಡಿದೆ. ೨೦೦೯ರ ಚುನಾವಣೆ­ಯಲ್ಲಿ ೧೮ ಸ್ಥಾನ ಗೆದ್ದಿದ್ದ ಪಕ್ಷ ಈ ಬಾರಿ ೩೭ ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.  14 ವರ್ಷ­ಗಳ ಹಿಂದೆ ಈ ರಾಜ್ಯ ಅಸ್ತಿತ್ವಕ್ಕೆ ಬಂದಾಗಿನಿಂದ ಇದೇ ಮೊದಲ ಬಾರಿ ಮೈತ್ರಿಕೂಟವೊಂದು ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿ­ರುವುದು ವಿಶೇಷ.

ಜೆಎಂಎಂ ಅಧಿಕಾರ ಕಳೆದು­ಕೊಂ­ಡರೂ ಒಂದು ಸ್ಥಾನವನ್ನು ಹೆಚ್ಚು­ವ­ರಿ­ಯಾಗಿ ಗೆದ್ದಿದೆ. ಕಳೆದ ಚುನಾವಣೆ­ಯಲ್ಲಿ ಪಕ್ಷ ೧೮ ಸ್ಥಾನಗಳಲ್ಲಿ ಗೆದ್ದಿತ್ತು. ಈ ಸಲ ೧೯ ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಜೆಎಂಎಂ ಈ ಬಾರಿ ಆರ್‌ಜೆಡಿ, ಕಾಂಗ್ರೆಸ್‌ ಜತೆ ಮೈತ್ರಿ ಕಡಿದು­ಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿತ್ತು.

ಆಡಳಿತಾರೂಢ ಮೈತ್ರಿಕೂಟದ ಭಾಗ­­ವಾಗಿದ್ದ ಕಾಂಗ್ರೆಸ್‌ 6 ಸ್ಥಾನಗ­ಳಲ್ಲಿ ಮಾತ್ರ ಗೆದ್ದಿದೆ. 
ಬಾಬುಲಾಲ್‌ ಮರಾಂಡಿ ಅವರ ಜಾರ್ಖಂಡ್‌ ವಿಕಾಸ್‌ ಮೋರ್ಚಾ (ಜೆವಿಎಂ) 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಜಮ್ಮು–ಕಾಶ್ಮೀರ ಮಾತ್ರವಲ್ಲ, ಜಾರ್ಖಂಡ್‌­ನಲ್ಲಿಯೂ ಮತಗಳಿಕೆ­ಯಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಬಿಜೆಪಿ ಶೇ ೩೧.೪, ಜೆಎಂಎಂ ಶೇ ೨೦.೫, ಕಾಂಗ್ರೆಸ್‌ ಶೇ ೧೦.೩ ಹಾಗೂ ಜೆವಿಎಂ  ಶೇ ೧೦ರಷ್ಟು ಮತ ಗಳಿಸಿವೆ.

ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರು ಬರ್‌ಹೈತ್‌ ಕ್ಷೇತ್ರದಿಂದ ೨೪ ಸಾವಿರಕ್ಕೂ ಹೆಚ್ಚು ಮತಗಳ ಅಂತರ­ದಿಂದ ಗೆದ್ದಿದ್ದಾರೆ. ಆದರೆ ದುಮ್ಕಾ ಕ್ಷೇತ್ರದಲ್ಲಿ ಸೋತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.