ADVERTISEMENT

ಬಿಜೆಪಿ ದಡ ಮುಟ್ಟಿಸದ ಮೋದಿ ‘ಮೋಡಿ’

ಸುದ್ದಿ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2014, 19:31 IST
Last Updated 23 ಡಿಸೆಂಬರ್ 2014, 19:31 IST

ನವದೆಹಲಿ: ಜಮ್ಮು– ಕಾಶ್ಮೀರದ ಜನ ನಿರೀಕ್ಷೆ­ಯಂತೆ ಯಾವ ಪಕ್ಷಕ್ಕೂ ಬಹುಮತ ಕೊಡದೆ, ಮತ್ತೆ ‘ಮೈತ್ರಿ ರಾಜಕಾರಣ’ಕ್ಕೆ ಜೋತು ಬಿದ್ದಿ­ದ್ದಾರೆ. ಕಾಶ್ಮೀರದಲ್ಲಿ ಹಿರಿಯ ನಾಯಕ ಮುಫ್ತಿ ಮಹಮದ್‌ ಸಯೀದ್‌ ನೇತೃತ್ವದ ‘ಪೀಪಲ್‌ ಡೆಮಾಕ್ರಟಿಕ್‌ ಪಕ್ಷ’ (ಪಿಡಿಪಿ) ಪ್ರಾಬಲ್ಯ ಮೆರೆದಿ­ದ್ದರೂ, ಮತ್ತೊಂದು ಪಕ್ಷದ ಹಂಗಿನಲ್ಲಿ ಸರ್ಕಾರ ರಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜಮ್ಮು­ವಿನಲ್ಲಿ ಪ್ರಧಾನಿ ಮೋದಿ ‘ಮೋಡಿ’ ಮಾಡಿ­ದರೂ, ತಮ್ಮ ಪಕ್ಷ­ವನ್ನು ದಡ ಮುಟ್ಟಿಸಲು ವಿಫಲ­ವಾಗಿದ್ದಾರೆ.

ಕಣಿವೆ ರಾಜ್ಯದ ಮತದಾರರು ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಆಡಳಿತದ ವಿರುದ್ಧವಾಗಿ ತೀರ್ಪು ನೀಡಿದ್ದಾರೆ. ಆರು ವರ್ಷದ ಸ್ವಜನ ಪಕ್ಷಪಾತ, ದುರಾಡಳಿತ, ಪ್ರವಾಹ ಪರಿಸ್ಥಿತಿ ಅಸಮರ್ಪಕ ನಿರ್ವಹಣೆ­ಯಿಂದ ಹತಾಶರಾದ ಜನ, ಆಡಳಿತ ಮೈತ್ರಿ­ಕೂಟಕ್ಕೆ ಪಾಠ ಕಲಿಸಿದ್ದಾರೆ. ಆದರೆ, ಮುಖ್ಯ­ಮಂತ್ರಿ ಒಮರ್‌ ಅಬ್ದಲ್ಲಾ ಅವರನ್ನು ಸಾರಾಸಗ­ಟಾಗಿ ತಿರಸ್ಕರಿಸದೆ, ಕೊಂಚ ಅನುಕಂಪ ತೋರಿಸಿ­ದ್ದಾರೆ. ಕಾಂಗ್ರೆಸ್‌ ಪಕ್ಷ ಎರಡಂಕಿ ದಾಟಿ ಸಮಾ­ಧಾನ ಮಾಡಿಕೊಂಡಿದೆ.

ವಿಧಾನಸಭೆ ಚುನಾವಣೆ ಫಲಿತಾಂಶ­ವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಿಡಿಪಿ ಹಾಗೂ ಬಿಜೆಪಿ ಒಗ್ಗೂಡಿ ರಾಜ್ಯದಲ್ಲಿ ಸರ್ಕಾರ ರಚಿಸಬೇಕೆಂಬ ಇಂಗಿತ­ವನ್ನು ಮತದಾರರು ವ್ಯಕ್ತಪಡಿಸಿದಂತಿದೆ.  ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಪಕ್ಷಕ್ಕೆ 44 ಸದಸ್ಯರ ಬೆಂಬಲ ಅಗತ್ಯವಿದೆ. 28 ಕ್ಷೇತ್ರಗ­ಳನ್ನು ಗೆದ್ದಿರುವ ಪಿಡಿಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರ­ಹೊಮ್ಮಿದೆ. ಅಧಿಕಾರ ಹಿಡಿಯಲು ಅದಕ್ಕೆ ಇನ್ನೂ 16 ಸದಸ್ಯರ ಕೊರತೆ ಇದೆ. ಶೇಕಡಾ­ವಾರು ಮತ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿ­ರುವ ಬಿಜೆಪಿಗೆ 19 ಸದಸ್ಯರ ಬೆಂಬಲ ಬೇಕಿದೆ.

ಹೀಗಾಗಿ ಪಿಡಿಪಿ ಯಾವ ಪಕ್ಷದ ಜತೆ ಕೈ ಜೋಡಿಸಲಿದೆ? ಬಿಜೆಪಿಯನ್ನು ಆಯ್ಕೆ ಮಾಡಿ­ಕೊಳ್ಳುವುದೇ? ಅಥವಾ ಕಾಂಗ್ರೆಸ್‌ ಕಡೆ ಮುಖ ಮಾಡುವುದೇ? ಎನ್ನುವ ಪ್ರಶ್ನೆ ಕುತೂಹಲ ಕೆರಳಿಸಿದೆ. ಬಿಜೆಪಿ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿದೆ. ಪಿಡಿಪಿ ಜೊತೆಗೂ ಸೈ, ನ್ಯಾಷನಲ್‌ ಕಾನ್ಫರೆನ್ಸ್‌  ಆದರೂ ಅಡ್ಡಿಯಿಲ್ಲ, ಅದರ ಒಂದಂಶದ ಗುರಿ ‘ಕಾಂಗ್ರೆಸ್‌ ಮುಕ್ತ ಭಾರತ’ ನಿರ್ಮಾಣ. ಈ ಕೆಲಸದಲ್ಲಿ ಯಾರೇ ಭಾಗಿ­ಯಾದರೂ ಪರವಾಗಿಲ್ಲ. ಆದರೆ, ಪಿಡಿಪಿ ಇನ್ನೂ ಗುಟ್ಟು ಬಿಟ್ಟಿಲ್ಲ. ಸರ್ಕಾರ ರಚಿಸುವ ವಿಷಯದಲ್ಲಿ ಅದಕ್ಕೆ ಆತುರ ಇದ್ದಂತಿಲ್ಲ. ನಿಧಾನ­ವಾಗಿ ಆಲೋಚಿಸಿ ತೀರ್ಮಾನ ಮಾಡುವುದಾಗಿ ಮೆಹ­ಬೂಬ ಮುಫ್ತಿ ಹೇಳಿದ್ದಾರೆ.

ಚುನಾವಣೆ ಪ್ರಚಾರ ಸಮಯದಲ್ಲಿ ನರೇಂದ್ರ ಮೋದಿ ಅವರು, ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬದ ಹಿಡಿತದಿಂದ ಜಮ್ಮು– ಕಾಶ್ಮೀರ­ವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿ­ದ್ದರು. ಅವರ ಮನವಿಗೆ ಯಾರೂ ಕಿವಿ­ಗೊಟ್ಟಂ­ತಿಲ್ಲ. ವಿಪರ್ಯಾಸವೆಂದರೆ, ಸರ್ಕಾರ ಮಾಡಲು ಬಿಜೆಪಿ ಈಗ ಇವೆರಡೂ ಕುಟುಂಬಗಳತ್ತಲೇ ನೋಡುತ್ತಿದೆ. ಬಿಜೆಪಿಯ ‘ಮಿಷನ್‌ 44’ ತಂತ್ರ ಫಲಿಸದಿದ್ದರೂ, ನೆಲೆ ವಿಸ್ತರಿಸಿಕೊಂಡಿದೆ. ಶೇಕಡಾ 23ರಷ್ಟು ಮತಗಳನ್ನು ಪಡೆಯುವ ಮೂಲಕ ರಾಜಕೀಯ ವಿರೋಧಿಗಳು ಹುಬ್ಬೇರಿಸುವಂತೆ ಮಾಡಿದೆ. ಪಿಡಿಪಿ ಶೇಕಡಾ 22.7ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ.

ಬೆಳೆದ ಬಿಜೆಪಿ: ‘ಮಿಷನ್‌ 44 ಗುರಿ ಮುಟ್ಟಲು ಬಿಜೆಪಿಗೆ ಸಾಧ್ಯವಾಗದೆ ಇರಬಹುದು. ರಾಜ್ಯ­ದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ರೂಪು­ಗೊಂಡಿದೆ. ಅದು ನಮ್ಮ ಸಾಧನೆ’ ಎಂದು ಆ  ಪಕ್ಷದ ಅಧ್ಯಕ್ಷ ಅಮಿತ್‌ ಷಾ ಸೋಮವಾರ ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದ್ದಾರೆ. ಅವರ ಮಾತು ಅಕ್ಷರಶಃ  ನಿಜ. ಹನ್ನೆರಡು ವರ್ಷಗಳ ಹಿಂದೆ ಬಿಜೆಪಿ ವಿಧಾನಸಭೆಯಲ್ಲಿ ಒಂದೇ ಒಂದು ಸ್ಥಾನ ಹೊಂದಿತ್ತು. 2008ರಲ್ಲಿ ಅದು ಹನ್ನೊಂ­ದಾ­ಯಿತು. ಈಗ ಇಪ್ಪತ್ತೈ­ದಾಗಿದೆ. ಒಂದು ದಶಕ­ದಲ್ಲಿ ಬಿಜೆಪಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದಿದೆ.

ಕಾಶ್ಮೀರದ ಪ್ರತ್ಯೇಕತಾವಾದಿಗಳು ಚುನಾವಣೆ ಬಹಿಷ್ಕರಿಸಲು ನೀಡಿದ್ದ ಕರೆಯನ್ನು ಕಟ್ಟುನಿಟ್ಟಾಗಿ ಜನರ ಮೇಲೆ ಹೇರಿದ್ದರೆ ಬಿಜೆಪಿಗೆ ಹೆಚ್ಚು ಲಾಭ­ವಾಗುತಿತ್ತು. ಅನಂತರ ಅವರು ನಿಲುವು ಸಡಿಲ­ಗೊಳಿಸಿದರು. ಬಿಜೆಪಿ ಬೆಳವಣಿಗೆಯನ್ನು ಕಣಿವೆ­ಯಲ್ಲಿ ತಡೆಯುವ ಉದ್ದೇಶದಿಂದ ಪ್ರತ್ಯೇಕತಾ­ವಾದಿಗಳು ತಟಸ್ಥವಾಗಿ ಉಳಿದರು. ಇದರಿಂದಾಗಿ ಹೆಚ್ಚಿನ ಪ್ರಮಾಣದ ಮತದಾನವಾಯಿತು ಎಂಬ ಮಾತುಗಳು ಕಣಿವೆಯಲ್ಲಿ ಕೇಳುತ್ತಿವೆ.

ಕಾಶ್ಮೀರದಲ್ಲಿ ಬಿಜೆಪಿಗೆ ಒಂದೂ ಸ್ಥಾನ ಪಡೆ­ಯಲು ಸಾಧ್ಯವಾಗದೆ ಇರಬಹುದು. ಅದು ಪರೋಕ್ಷ­ವಾಗಿ ಬೆಂಬಲಿಸಿದ ಒಂದಿಬ್ಬರು ಅಭ್ಯರ್ಥಿ­ಗಳು ಗೆದ್ದಿದ್ದಾರೆ. ಹಂದ್ವಾರ ಕ್ಷೇತ್ರದಿಂದ ಪೀಪಲ್‌ ಕಾನ್ಫರೆನ್ಸ್‌  ಮುಖಂಡ ಸಜ್ಜಾದ್‌ ಲೋನ್‌ ಆಯ್ಕೆ­ಯಾಗಿದ್ದಾರೆ. ಅವರ ಮುಂದಿನ ನಡೆ ಏನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಬಿಜೆಪಿಗೆ ಹೋಲಿಸಿದರೆ ಪಿಡಿಪಿ ಸಾಧನೆಯೇ. ಕಡಿಮೆ ಒಮರ್‌ ಸರ್ಕಾರದ ವಿರುದ್ಧ ಕಣಿವೆ ಮತದಾರ­ರ­ಲ್ಲಿದ್ದ ಸಿಟ್ಟು, ಅಸಹನೆ–ಅಸಮಾಧಾನದ ಲಾಭ­ವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಅದು ಸೋತಿದೆ.

ಎನ್‌ಸಿ ವಿರುದ್ಧ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿ­ದರೂ 28ರ ಗಡಿ ದಾಟಲು ಪಿಡಿಪಿಗೆ ಸಾಧ್ಯವಾ­ಗಿಲ್ಲ. ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಪ್ರವಾಹ... ಸಾಲದೆಂಬಂತೆ ‘ಅಫ್ಜಲ್‌ ಗುರು ಗಲ್ಲು ಪ್ರಕರಣ’ವನ್ನು ಮುಫ್ತಿ ಬಂಡವಾಳ ಮಾಡಿ­ಕೊಂಡರೂ ಪ್ರಯೋಜನವಾಗಿಲ್ಲ. ಜಮ್ಮು–  ಕಾಶ್ಮೀ­ರದ ಒಟ್ಟು ಸ್ಥಾನಗಳು 87. ಜಮ್ಮು ಭಾಗ­ದಲ್ಲಿ 37, ಲಡಾಖ್‌ ವಿಭಾಗದಲ್ಲಿ 4 ಮತ್ತು ಕಾಶ್ಮೀರದಲ್ಲಿ 46 ಕ್ಷೇತ್ರಗಳಿವೆ. ಕಾಶ್ಮೀರದ ಮತ­ದಾರರು ಸರ್ಕಾರದ ವಿರುದ್ಧ ಹೊರ ಹಾಕುತ್ತಿದ್ದ ಆಕ್ರೋಶ ಗಮನಿಸಿದರೆ, ಇನ್ನಷ್ಟು ಸ್ಥಾನಗಳನ್ನು ಪಡೆಯಬಹುದಿತ್ತು. ಹೆಚ್ಚಿನ ಸ್ಥಾನ ಗೆಲ್ಲುವುದು ಹೋಗಲಿ. ಹಾಲಿ ಕ್ಷೇತ್ರಗಳನ್ನು ಉಳಿಸಿಕೊಂಡಿ­ದ್ದರೂ ಸಾಕಿತ್ತು. ಈ ಪಕ್ಷದ ಹಾಲಿ ಶಾಸಕರಲ್ಲಿ ಆರು ಮಂದಿ ಸೋತಿದ್ದಾರೆ. ಇದು ಮುಫ್ತಿ ಮಹಮದ್‌ ಅವರಿಗೆ ಆಗಿರುವ ಹಿನ್ನಡೆ.

ನ್ಯಾಷನಲ್‌ ಕಾನ್ಫರೆನ್ಸ್‌  ಶೇಕಡಾ 20.8ರಷ್ಟು ಮತ ಪಡೆದು 15 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ 12 ಸ್ಥಾನಗಳನ್ನು ಪಡೆದಿದೆ. ಅದಕ್ಕೆ ಬಂದಿರು­ವುದು ಶೇಕಡಾ 18 ರಷ್ಟು ಮತಗಳು. ಕಾಶ್ಮೀರದ ಮತದಾರರ ಸಿಟ್ಟಿರುವುದು ಅಬ್ದುಲ್ಲಾ ಕುಟುಂಬದ ವಿರುದ್ಧವೇ ವಿನಾ ನ್ಯಾಷನಲ್‌ ಕಾನ್ಫ­ರೆನ್ಸ್‌  ಮೇಲೆ ಅಲ್ಲ ಎಂದು ಅನೇಕರು ವ್ಯಾಖ್ಯಾ­ನಿ­ಸಿದ್ದಾರೆ. ಈ ಮಾತಿಗೆ ಸ್ವತಃ ಮುಖ್ಯಮಂತ್ರಿಯೇ ಸಾಕ್ಷಿಯಾಗಿದ್ದಾರೆ. ಶ್ರೀನಗರದ ಸನ್ವಾರ್‌ ವಿಧಾನ­ಸಭೆ ಕ್ಷೇತ್ರದಲ್ಲಿ ಒಮರ್‌ ಸೋತಿದ್ದಾರೆ. ಬೀರ್ವಾ ಕ್ಷೇತ್ರದಲ್ಲಿ ಸಾವಿರಕ್ಕೂ ಕಡಿಮೆ ಅಂತರದಿಂದ ಗೆದ್ದಿದ್ದಾರೆ.

ಕುಗ್ಗಿದ ಕಾಂಗ್ರೆಸ್‌ ಬಲ: ನ್ಯಾಷನಲ್‌ ಕಾನ್ಫರೆನ್ಸ್‌  2008ರ ಚುನಾವಣೆಯಲ್ಲಿ ಶ್ರೀನಗರದ ಎಲ್ಲ ಎಂಟು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ಸಲ ಅದಕ್ಕೆ ಗೆಲ್ಲಲು ಸಾಧ್ಯವಾಗಿ­ರುವುದು ಮೂರು ಕ್ಷೇತ್ರ­ಗಳನ್ನು ಮಾತ್ರ. ಐದು ಕ್ಷೇತ್ರಗಳು ಪಿಡಿಪಿ ಪಾಲಾಗಿವೆ. ಕಾಂಗ್ರೆಸ್‌ ಶಕ್ತಿ ಚುನಾವಣೆಯಿಂದ ಚುನಾವಣೆಗೆ ಕ್ಷೀಣಿಸುತ್ತಿದೆ. ಜಮ್ಮು– ಕಾಶ್ಮೀರ­ದಲ್ಲೂ ಅದರ ಪ್ರಾಬಲ್ಯ ಕಡಿಮೆ ಆಗಿದೆ. ಹಿಂದಿನ ಚುನಾವಣೆಯಲ್ಲಿ ಹದಿನೇಳು ಸ್ಥಾನಗಳನ್ನು ಗೆದ್ದು­ಕೊಂಡಿತ್ತು.

ಸೋನಿಯಾ, ರಾಹುಲ್‌ ಪಕ್ಷದ ಸ್ಥಿತಿ ಶೋಚ­ನೀಯವಾಗಿದೆ. ಜನ ಬದ­ಲಾವಣೆ ಬಯಸು­ತ್ತಿ­ದ್ದಾರೆ. ಕಾಂಗ್ರೆಸ್‌ಗೆ ಮತದಾರರ ಮನಸು ಅರ್ಥ­ವಾದಂತೆ ಕಾಣುವುದಿಲ್ಲ. ಅದಕ್ಕೀಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.  ಜಮ್ಮು– ಕಾಶ್ಮೀರದ ಜನ ಬದಲಾವಣೆ ಬಯಸಿದ್ದಾರೆ. ಬದಲಾವಣೆ ತರಬಲ್ಲ ಶಕ್ತಿ ಯಾರಿ­ಗಿದೆ? ನರೇಂದ್ರ ಮೋದಿ ಅವರಿಗೋ ಅಥವಾ ಮುಫ್ತಿ ಸಯೀದ್‌ ಅವರಿಗೋ ಎನ್ನುವ ಗೊಂದಲ ಅವರಿಗೆ ಇದ್ದಂತಿದೆ. ಇದರಿಂದಾಗಿಯೇ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದಿದೆ.

ಜಮ್ಮು–ಕಾಶ್ಮೀರ
* ಗೆದ್ದ ಪ್ರಮುಖರು
ಸಾಜಿದ್‌ ಗನಿ ಲೋನ್‌– ಜೆಕೆಪಿಸಿ, ಒಮರ್‌್ ಅಬ್ದುಲ್ಲಾ–ಎನ್‌ಸಿ ( ಬೀರ್ವಾ ಕ್ಷೇತ್ರ), ಅಲಿ ಮೊಹಮ್ಮದ್‌ ಸಾಗರ್‌–ಎನ್‌ಸಿ, ಅಲ್ತಫ್‌ ಬುಖಾರಿ–ಪಿಡಿಪಿ
* ಸೋತವರು
ಹೀನಾ ಭಟ್‌–ಬಿಜೆಪಿ, ಒಮರ್‌್ ಅಬ್ದುಲ್ಲಾ ( ಸೊನಾವರ್‌್ ಕ್ಷೇತ್ರ)

ಜಾರ್ಖಂಡ್‌
* ಗೆದ್ದ ಪ್ರಮುಖರು

ಹೇಮಂತ್‌ ಸೊರೆನ್‌–ಜೆಎಂಎಂ (ಬರೈತ್‌ ಕ್ಷೇತ್ರ ),ರಘುವರ್‌್ ದಾಸ್‌, ಸರಯು ರಾಯ್‌–ಬಿಜೆಪಿ
* ಸೋತವರು
ಶಶಾಂಕ್‌ ಎಸ್‌ ಭೋಕ್ತಾ–ಜೆಎಂಎಂ, ಬಾಬು ಲಾಲ್‌ ಮರಾಂಡಿ –ಜೆವಿಎಂ, ಅರ್ಜುನ್‌ ಮುಂಡಾ–ಬಿಜೆಪಿ, ಮಧು ಕೋಡಾ–ಜೆಬಿಎಸ್‌ಪಿ, ಸುಖ್‌ದೇವ್‌ ಭಗತ್‌–ಕಾಂಗ್ರೆಸ್‌, ಸುದೇಶ್‌ ಮಹ್ತೊ–ಎಜೆಎಸ್‌ಯು ಮತ್ತು ಹೇಮಂತ್‌ ಸೊರೆನ್‌ (ದುಮ್ಕಾ ಕ್ಷೇತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT