ADVERTISEMENT

ಬಿಜೆಪಿ ಮುಖಂಡರ ಕೈಹಿಡಿದ ಮತದಾರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 19:30 IST
Last Updated 18 ಡಿಸೆಂಬರ್ 2017, 19:30 IST
ಮುಖ್ಯಮಂತ್ರಿ ವಿಜಯ್ ರೂಪಾಣಿ ಸಂಭ್ರಮ
ಮುಖ್ಯಮಂತ್ರಿ ವಿಜಯ್ ರೂಪಾಣಿ ಸಂಭ್ರಮ   

ಅಹಮದಾಬಾದ್: ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆಯಾದರೂ ಅದರ ಹೆಚ್ಚಿನ ಸ್ಥಳೀಯ ನಾಯಕರು ನಿರಾಶಾದಾಯಕ ಸೋಲು ಕಂಡಿದ್ದಾರೆ. ಆದರೆ, ಬಿಜೆಪಿಯ ಬಹುತೇಕ ಸ್ಥಳೀಯ ನಾಯಕರು ಗೆಲುವು ಸಾಧಿಸಲು ಯಶಸ್ವಿಯಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಮಾಜಿ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌, ಬಿಜೆಪಿ ಅಧ್ಯಕ್ಷ ಜೀತೂ ವಘಾನಿ, ಮಾಜಿ ಸಚಿವರಾದ ಭೂಪೇಂದ್ರ ಸಿಂಗ್‌ ಚೂಡಾಸಮಾ, ಪ್ರದೀಪ್‌ ಸಿಂಗ್‌ ಜಡೇಜಾ, ಸೌರಭ್‌ ಪಟೇಲ್‌ ಬಿಜೆಪಿಯಿಂದ ಜಯ ಸಾಧಿಸಿದ್ದಾರೆ.

ಸೋತ ಮೋದಿ ಪರಮಾಪ್ತ: ಆದರೆ, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಬಿಜೆಪಿ ಅಭ್ಯರ್ಥಿ ಶಂಕರ್‌ ಚೌಧರಿ, ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತ ದಿಲೀಪ್‌ ಸಂಘಾನಿಯಾ ಆಶ್ಚರ್ಯಕರ ರೀತಿಯಲ್ಲಿ ಸೋಲು ಕಂಡಿದ್ದಾರೆ. ಸಂಘಾನಿಯಾ ಪರ ಖುದ್ದು ಮೋದಿ ಪ್ರಚಾರ ನಡೆಸಿದ್ದರು.

ವಿಧಾನಸಭಾ ಸ್ಪೀಕರ್‌ ರಾಮಲಾಲ್‌ ವೋರಾ, ಬಿಜೆಪಿ ಹಿರಿಯ ನಾಯಕ ಜಯನಾರಾಯಣ ವ್ಯಾಸ್‌, ಪಟೇಲ್‌ ಸಮುದಾಯದ ಮುಖಂಡ ನಾರಾಯಣ ಲಲ್ಲು ಪಟೇಲ್‌ ಸೇರಿದಂತೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಆರೇಳು ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ಸೋಲಿನ ರುಚಿ ತೋರಿಸಿದೆ.

ADVERTISEMENT

ಡೋಕ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿಜೆಪಿಯ ಭೂಪೆಂದ್ರ ಸಿಂಗ್‌ ಚೂಡಾಸಮಾ ಕೇವಲ 300 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಕೊನೆಯ ಗಳಿಗೆಯಲ್ಲಿ ಕ್ಷೇತ್ರ ಬದಲಿಸಿದ್ದ ವಿಧಾನಸಭಾ ಮಾಜಿ ಸ್ಪೀಕರ್‌ ರಾಮಲಾಲ್‌ ವೋರಾ 844 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಕಾಂಗ್ರೆಸ್ ಅತಿರಥ, ಮಹಾರಥರಿಗೆ ನಿರಾಸೆ: ಕಾಂಗ್ರೆಸ್‌ನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳೇ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ. ಪಕ್ಷದ ಪ್ರಬಲ ನಾಯಕರಾದ ಶಕ್ತಿಸಿಂಹ ಗೋಹಿಲ್‌, ಅರ್ಜುನ್‌ ಮೋಧವಾಡಿಯಾ ಸೋಲು ಅಚ್ಚರಿ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಚಿಮಣ್‌ ಭಾಯಿ ಪಟೇಲ್‌ ಅವರ ಪುತ್ರ ಹಾಗೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಸಿದ್ಧಾರ್ಥ ಪಟೇಲ್‌, ಕಾಂಗ್ರೆಸ್‌ನ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಅಮರಸಿಂಗ್‌ ಚೌಧರಿ ಅವರ ಪುತ್ರ ತುಷಾರ್‌ ಚೌಧರಿ ಸೋಲು ಅನುಭವಿಸಿದ ಕಾಂಗ್ರೆಸ್‌ನ ಪ್ರಮುಖ ನಾಯಕರು.

ಗಮನಾರ್ಹ ಅಂಶ ಎಂದರೆ 12 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮೂರು ಸಾವಿರ ಮತಗಳಗಿಂತ ಕಡಿಮೆ ಅಂತರದಲ್ಲಿ ಸೋತಿದೆ. ಇದು ಕಾರ್ಯಕರ್ತರಿಗೆ ತೀವ್ರ ನಿರಾಸೆ ಮೂಡಿಸಿದೆ. ಸಂಘಟನೆಯ ಕೊರತೆಯಿಂದಾಗಿ ಸೋಲಬೇಕಾಯಿತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಆದರೆ, ಬಿಜೆಪಿಯನ್ನು ಎರಡಂಕಿಗೆ ಸೀಮಿತಗೊಳಿಸಿದ ಹೆಮ್ಮೆ ಅವರಿಗಿದೆ.

ನೋಟಾಗೆ ಜೈ: ಪೋರಬಂದರಿನಲ್ಲಿ ಕಾಂಗ್ರೆಸ್‌ ಪ್ರಬಲ ನಾಯಕ ಅರ್ಜುನ್‌ ಮೋಧವಾನಿಯಾ 1,855 ಮತಗಳ ಅಂತರದಿಂದ ಸೋತು, ಸತತ ಎರಡನೇ ಬಾರಿಯೂ ನಿರಾಶೆ ಅನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ 3,433 ನೋಟಾ ಮತ ಚಲಾವಣೆಯಾಗಿವೆ. ಬಿಎಸ್‌ಪಿ ಅಭ್ಯರ್ಥಿ ನಾಲ್ಕು ಸಾವಿರಕ್ಕೂ ಹೆಚ್ಚು ಮತ ಪಡೆದು ಕಾಂಗ್ರೆಸ್‌ ಗೆಲುವಿಗೆ ಅಡ್ಡಗಾಲು ಹಾಕಿದ್ದಾರೆ.

ಹೆಚ್ಚಿನ ಕ್ಷೇತ್ರಗಳಲ್ಲಿ ನೋಟಾ ಮತಗಳು ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿವೆ. ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿಗಳು ಕೂಡಾ ನೋಟಾಕ್ಕಿಂತ ಕಡಿಮೆ ಮತ ಪಡೆದಿದ್ದಾರೆ.

ಠೇವಣಿ ಕಳೆದುಕೊಂಡ ಶಿವಸೇನಾ
ಅಹಮದಾಬಾದ್‌ನ ದರಿಯಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವಸೇನಾ ಅಭ್ಯರ್ಥಿ ಕುಂಜಾಲ್‌ ಪಟೇಲ್‌ ಠೇವಣಿ ಕಳೆದುಕೊಂಡಿದ್ದಾರೆ. ಮೈಮೇಲೆ ಮಣಗಟ್ಟಲೇ ಬಂಗಾರದ ಆಭರಣಗಳನ್ನು ಧರಿಸಿ ಪ್ರಚಾರ ನಡೆಸಿದ್ದ ಕುಂಜಾಲ್‌ ಎಲ್ಲರ ಗಮನ ಸೆಳೆದಿದ್ದರು.
*
* ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಬಿಟ್ಟರೆ ಸತತವಾಗಿ ಆರನೇ ಬಾರಿ ಬಿಜೆಪಿ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದೆ.

* ಪಟೇಲ್‌ ಮೀಸಲಾತಿ ಹೋರಾಟಗಾರರ ಪರ ವಕೀಲ ಬಾಬು ಮಂಗುಕಿಯಾಗೆ ಸೋಲು

* ಕುಟಿಯಾನಾ ಕ್ಷೇತ್ರದಿಂದ ಎನ್‌ಸಿಪಿ ಅಭ್ಯರ್ಥಿ ಕಂದಾಲ್‌ ಜಡೇಜಾ ಮರು ಆಯ್ಕೆ

* ಝಾಗಡಿಯಾ ಕ್ಷೇತ್ರದಲ್ಲಿ ಚಲಾವಣೆಯಾದ ನೋಟಾ ಮತಗಳಿಗಿಂತ ಕಡಿಮೆ ಮತ ಪಡೆದ ಜೆಡಿಯು ಅಭ್ಯರ್ಥಿ ಛೋಟುಭಾಯ್‌ ಎ. ವಾಸವಾ.

* ಈ ಕ್ಷೇತ್ರದಲ್ಲಿ ಬುಡಕಟ್ಟು ಜನಾಂಗದ ಪ್ರಬಲ ನಾಯಕ ಛೋಟುಭಾಯ್‌ ವಾಸವಾ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿ ಪುನರಾಯ್ಕೆಯಾಗಿದ್ದಾರೆ

* 1990ರಿಂದ ಬಿಜೆಪಿ ಸತತ ಗೆಲುವು ಸಾಧಿಸುತ್ತ ಬಂದಿದ್ದ ಜಮಾಲ್‌ಪುರ–ಖಾಡಿಯಾ ಕ್ಷೇತ್ರ ಎರಡೂವರೆ ದಶಕಗಳ ನಂತರ ಕಾಂಗ್ರೆಸ್‌ ವಶವಾಗಿದೆ
* * *
ಊನಾ ಕಾಂಗ್ರೆಸ್‌ ತೆಕ್ಕೆಗೆ!
ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಐದಾರು ಶಾಸಕರು ಕೂಡ ಸೋತಿದ್ದಾರೆ. ಗೋರಕ್ಷಕರೆಂದು ಹೇಳಿಕೊಂಡವರು ದಲಿತರ ಮೇಲೆ ಹಲ್ಲೆ ನಡೆಸಿದ ನಂತರ ದೇಶದ ಗಮನ ಸೆಳೆದಿದ್ದ ಊನಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸಿದ್ದಾರೆ.
* * *
ಮೋದಿ ಹುಟ್ಟೂರಲ್ಲಿ ಬಿಜೆಪಿಗೆ ಸೋಲು
ಪ್ರಧಾನಿ ಮೋದಿ ಅವರ ಹುಟ್ಟೂರು ವಡನಗರ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಪಟೇಲ್‌ ಸಮುದಾಯದ ಚಳವಳಿಯ ಕೇಂದ್ರವಾದ ಮೆಹ್ಸಾನಾ ಜಿಲ್ಲೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆಶಾಬೆನ್‌ ಪಟೇಲ್‌ ಗೆದ್ದಿದ್ದಾರೆ.
*

ಗುಜರಾತ್‌ ಜನರ ತೀರ್ಪನ್ನು ವಿನಯದಿಂದ ಸ್ವೀಕರಿಸುತ್ತೇವೆ. ರಾಹುಲ್‌ ಗಾಂಧಿ ಅತ್ಯುತ್ತಮವಾಗಿ ಪ್ರಚಾರ ಮಾಡಿದರು. ಅವಿರತ ಶ್ರಮ ಹಾಕಿದ ಪಕ್ಷದ ಕಾರ್ಯಕರ್ತರು ಚಪ್ಪಾಳೆಗೆ ಅರ್ಹರು. ಪ್ರೀತಿ ಮತ್ತು ಬೆಂಬಲ ನೀಡಿದ ರಾಜ್ಯದ ಜನತೆಗೆ ಧನ್ಯವಾದ
– ಅಶೋಕ್‌ ಗೆಹ್ಲೋಟ್‌,
ಗುಜರಾತ್‌ ಕಾಂಗ್ರೆಸ್‌ ಉಸ್ತುವಾರಿ

*

ಗುಜರಾತ್‌ನಲ್ಲಿ ತನ್ನ ಸ್ಥಾನಬಲವನ್ನು ಹೆಚ್ಚಿಸುವ ಮೂಲಕ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿರುವುದು ತೃಪ್ತಿ ತಂದಿದೆ. ಇದಕ್ಕಾಗಿ ಶ್ರಮ ಹಾಕಿರುವ ರಾಹುಲ್‌ ಗಾಂಧಿ ಅವರನ್ನು ಅಭಿನಂದಿಸುತ್ತೇನೆ
– ಶರದ್‌ ಯಾದವ್‌,
ಜೆಡಿಯು ಬಂಡಾಯ ಬಣದ ನಾಯಕ

*

ಅತ್ಯಂತ ಸಮತೋಲನದ ತೀರ್ಪು ನೀಡಿದ ಗುಜರಾತ್‌ ಮತದಾರರನ್ನು ಅಭಿನಂದಿಸುತ್ತೇನೆ. ಇದು ಬಿಜೆಪಿಗೆ ಸಿಕ್ಕಿರುವ ತಾತ್ಕಾಲಿಕ ಮತ್ತು ಮುಖ ಉಳಿಸುವಂತಹ ಜಯ. ಆದರೆ, ಅದು ನೈತಿಕವಾಗಿ ಸೋತಿರುವುದನ್ನು ಫಲಿತಾಂಶ ತೋರಿಸಿದೆ. ದೌರ್ಜನ್ಯಗಳು, ಆತಂಕ ಮತ್ತು ಜನಸಾಮಾನ್ಯರಿಗೆ ಆಗಿರುವ ಅನ್ಯಾಯದ ವಿರುದ್ಧ ಗುಜರಾತ್‌ ಮತ ಹಾಕಿದೆ.
– ಮಮತಾ ಬ್ಯಾನರ್ಜಿ,
ಪಶ್ಚಿಮ ಬಂಗಾಳ ಮುಖ್ಯಮಂತ್ರಿ

*

ಪ್ರಧಾನಿ ನರೇಂದ್ರ ಮೋದಿ ಇನ್ನಷ್ಟು ಸರ್ವಾಧಿಕಾರಿ ಧೋರಣೆ ತಾಳಬಹುದು. ಹಿಂದುತ್ವ ನೀತಿಗಳನ್ನು ಮತ್ತಷ್ಟು ಜೋರಾಗಿ ಅನುಸರಿಸಬಹುದು. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಸಕಾರಾತ್ಮಕ ಸೂಚನೆ ಅಲ್ಲ
– ಎಸ್‌. ಸುಧಾಕರ್‌ ರೆಡ್ಡಿ,
ಸಿಪಿಐ ಪ್ರಧಾನ ಕಾರ್ಯದರ್ಶಿ

*

ಗುಜರಾತ್‌ ಜನರು, ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು. ಅಭಿವೃದ್ಧಿ ಕಾರ್ಯಸೂಚಿ ಮತ್ತು ಮೋದಿ ಸರ್ಕಾರದ ನೀತಿಗಳ ಮೇಲೆ ಇಡೀ ದೇಶ ಇಟ್ಟಿರುವ ನಂಬಿಕೆಯನ್ನು ಈ ಫಲಿತಾಂಶ ಪುನರುಚ್ಚರಿಸಿದೆ
– ಅರುಣ್‌ ಜೇಟ್ಲಿ,
ಕೇಂದ್ರ ಸಚಿವ

*

ರಾಜಕಾರಣದ ಸಭ್ಯತೆಯನ್ನು ಮರೆತವರಿಗೆ ಮತ್ತು ಅಸಂಸದೀಯ ಪದಗಳನ್ನು ಬಳಸುವವರಿಗೆ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪಾಠ. ನರೇಂದ್ರ ಮೋದಿ ನಾಯಕತ್ವ ಮತ್ತು ಅವರ ಆರ್ಥಿಕ ಸುಧಾರಣಾ ನೀತಿಗಳಿಗೆ ಸಿಕ್ಕ ಜಯ
– ಯೋಗಿ ಆದಿತ್ಯನಾಥ,
ಉತ್ತರ ಪ್ರದೇಶ ಮುಖ್ಯಮಂತ್ರಿ

*

ಬಿಜೆಪಿಯ ‘ವಿಶ್ವಾಸ’ ಮತ್ತು ‘ವಿಕಾಸ’ದ ರಾಜಕಾರಣಕ್ಕೆ ಸಿಕ್ಕಿರುವ ಜನಾದೇಶ. ನಮ್ಮ ವಿರುದ್ಧ ಸುಳ್ಳು ಸಂದೇಶಗಳನ್ನು ಹರಡಲು ವಿರೋಧ ಪಕ್ಷಗಳು ಯತ್ನಿಸಿದ್ದವು. ಮೋದಿ ಮತ್ತು ಅಮಿತ್‌ ಷಾ ನಾಯಕತ್ವದಿಂದಾಗಿ ನಾವು ಗೆದ್ದೆವು
– ದೇವೇಂದ್ರ ಫಡಣವೀಸ್‌,
ಮಹಾರಾಷ್ಟ್ರ ಮುಖ್ಯಮಂತ್ರಿ

*

2019ರ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭದ ತುತ್ತಲ್ಲ ಎಂಬುದನ್ನು ಗುಜರಾತ್‌ ಫಲಿತಾಂಶ ತೋರಿಸಿದೆ. ಬಿಜೆಪಿಯವರು ತಮ್ಮ ಆಡಳಿತ ವೈಖರಿಯನ್ನು ಪರಾಮರ್ಶಿಸಬೇಕು
– ಎ.ಪಿ. ಜಿತೇಂದರ್‌,
ಲೋಕಸಭೆಯಲ್ಲಿ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್‌ಎಸ್‌) ನಾಯಕ

*

ಗೆದ್ದವನೇ ರಾಜ: ಅಭಿವೃದ್ಧಿಯ ಬಗ್ಗೆ ತಮಾಷೆ ಮಾಡಿದವರಿಗೆ ಜನರು ನೀಡಿದ ಸಂದೇಶ ಇದು
– ಮುಖ್ತಾರ್‌ ಅಬ್ಬಾಸ್‌ ನಕ್ವಿ,
ಕೇಂದ್ರ ಸಚಿವ

*

ಮತಗಟ್ಟೆ ಮಟ್ಟದ ಪಕ್ಷದ ಕಾರ್ಯಕರ್ತರು ಮತ್ತು  ‘ಉತ್ತಮ ಆಡಳಿತ’ ಹಾಗೂ ‘ಅಭಿವೃದ್ಧಿ’ಗಾಗಿ ಮತ ಹಾಕಿದವರಿಗೆ ಈ ಗೆಲುವು ಅರ್ಪಿತ
– ಸ್ಮೃತಿ ಇರಾನಿ,
ಕೇಂದ್ರ ಸಚಿವೆ

*

ಮೋದಿ ಸರ್ಕಾರದ ನೀತಿಗಳನ್ನು ಜನರು ಒಪ್ಪಿಕೊಂಡಿದ್ದಾರೆ. ಮೋದಿ ನಾಯಕತ್ವದ ಪ್ರಭಾವ ಚುನಾವಣೆಯಲ್ಲಿ ಪ್ರತಿಫಲನಗೊಂಡಿದೆ
– ರಾಜನಾಥ್‌ ಸಿಂಗ್‌,
ಕೇಂದ್ರ ಸಚಿವ

*

ಗುಜರಾತ್‌ ಜನರು ಕಾಂಗ್ರೆಸ್‌ನ ಜಾತಿ ರಾಜಕೀಯವನ್ನು ತಿರಸ್ಕರಿಸಿದ್ದಾರೆ. ಅಭಿವೃದ್ಧಿಗಾಗಿ ಮತ ನೀಡಿದ ಜನರಿಗೆ ಗೆಲುವಿನ ಶ್ರೇಯ ಸಲ್ಲಬೇಕು
– ನಿರ್ಮಲಾ ಸೀತಾರಾಮನ್‌,
ಕೇಂದ್ರ ಸಚಿವೆ

*

ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಅಭಿನಂದನೆಗಳು. ಗುಜರಾತ್‌ನಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್‌ ಹಿಮಾಚಲಪ್ರದೇಶದಲ್ಲೂ ಸೋಲನ್ನು ಅಪ್ಪಿಕೊಂಡಿದೆ
– ನಿತೀಶ್‌ ಕುಮಾರ್‌,
ಬಿಹಾರ ಮುಖ್ಯಮಂತ್ರಿ

*

ಮೊದಲ ಇನಿಂಗ್ಸ್‌ನಲ್ಲೇ ರಾಹುಲ್‌ ಸಾಧನೆ ಶೂನ್ಯ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿರುವುದು 2019ರ ಲೋಕಸಭಾ ಚುನಾವಣಾ ಫಲಿತಾಂಶ ಮತ್ತು ಕೇಂದ್ರದಲ್ಲಿ ಮುಂದಿನ ಸರ್ಕಾರ ಯಾರು ರಚಿಸುತ್ತಾರೆ ಎಂಬುದರ ಮುನ್ಸೂಚನೆ
– ಮನೋಹರ್‌ ಪರಿಕ್ಕರ್‌,
ಗೋವಾ ಮುಖ್ಯಮಂತ್ರಿ

*

ಚುನಾವಣಾ ಗೆಲವು ಮತ್ತು ರಾಜಕೀಯ ಗೆಲುವು ಎಂಬುದಿದೆ. ಗುಜರಾತ್‌ನಲ್ಲಿ ರಾಜಕೀಯವಾಗಿ ಯಾರು ಗೆದ್ದರು ಎಂದು ನಾನು ಹೇಳಬೇಕೇ? ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ನೈತಿಕವಾದ ಉತ್ತೇಜನ ಸಿಕ್ಕಿದೆ. 2018ರಲ್ಲಿ ಐದು ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ರಣಾಂಗಣ ಸಿದ್ಧವಾಗಿದೆ
– ಪಿ.ಚಿದಂಬರಂ,
ಕಾಂಗ್ರೆಸ್‌ ಮುಖಂಡ

*

ಗುಜರಾತ್‌ ಫಲಿತಾಂಶ ಸ್ಪಷ್ಟವಾಗಿದೆ ಎಂಬುದು ನನ್ನ ಭಾವನೆ. ಬಿಜೆಪಿ ಚುನಾವಣೆ ಗೆದ್ದಿದೆ. ಆದರೆ ಕಾಂಗ್ರೆಸ್‌ ಸೋತಿಲ್ಲ
– ಶಶಿ ತರೂರ್‌,
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.