ADVERTISEMENT

‘ಬಿಜೆಪಿ ವಿರೋಧಿ ರ‍್ಯಾಲಿ’ಗೆ ಬಸ್‌ ನೀಡದ ಶಿಕ್ಷಕರ ನಿಂದನೆ: ಶಾಸಕನ ವಿರುದ್ಧ ದೂರು ದಾಖಲು

ಏಜೆನ್ಸೀಸ್
Published 19 ಸೆಪ್ಟೆಂಬರ್ 2017, 9:50 IST
Last Updated 19 ಸೆಪ್ಟೆಂಬರ್ 2017, 9:50 IST
‘ಬಿಜೆಪಿ ವಿರೋಧಿ ರ‍್ಯಾಲಿ’ಗೆ ಬಸ್‌ ನೀಡದ ಶಿಕ್ಷಕರ ನಿಂದನೆ: ಶಾಸಕನ ವಿರುದ್ಧ ದೂರು ದಾಖಲು
‘ಬಿಜೆಪಿ ವಿರೋಧಿ ರ‍್ಯಾಲಿ’ಗೆ ಬಸ್‌ ನೀಡದ ಶಿಕ್ಷಕರ ನಿಂದನೆ: ಶಾಸಕನ ವಿರುದ್ಧ ದೂರು ದಾಖಲು   

ಪಟ್ನಾ: ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರ ‘ಬಿಜೆಪಿ ವಿರೋಧಿ ರ‍್ಯಾಲಿ’ಗೆ ಬಸ್‌ಗಳನ್ನು ನೀಡಲು ನಿರಾಕರಿಸಿದ್ದ ಶಿಕ್ಷಕರನ್ನು ನಿಂದಿಸಿದ ಶಾಸಕನ ವಿರುದ್ಧ ರೋಹ್ಟಾಸ್‌ ಜಿಲ್ಲಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಆಗಸ್ಟ್‌ 27ರಂದು ನಗರದಲ್ಲಿ ಆಯೋಜಿಸಿದ್ದ ರ‍್ಯಾಲಿಗೆ ತೆರಳಲು ಎರಡು ಬಸ್‌ ವ್ಯವಸ್ಥೆ ಮಾಡಲು ಕರಾಕಟ್‌ ಶಾಸಕ ಸಂಜಯ್‌ ಕುಮಾರ್‌ ಸಿಂಗ್‌ ಯಾದವ್‌ ವಿಫಲವಾಗಿದ್ದರು. ಹಾಗಾಗಿ ರ‍್ಯಾಲಿಗೆ ಬಸ್‌ಗಳನ್ನು ನೀಡದ ರಾಮ್‌ರೂಪ್‌ ಹೈಸ್ಕೂಲ್‌ನ 14 ಶಿಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು.

ಇದಕ್ಕೆ ಸಂಬಂಧಿಸಿದಂತೆ ಶಾಲೆಯ ನಿಯೋಜಿತ ಮುಖ್ಯ ಶಿಕ್ಷಕ ಗೋದಾರಿ ರಾಮ್‌ವೃಕ್ಷ್‌ ಪಸ್ವಾನ್‌(40) ಅವರು ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ, ‘ಸೋಮವಾರ ಸುಮಾರು 150 ಬೆಂಬಲಿಗರೊಂದಿಗೆ ಶಾಲೆ ಬಳಿ ಬಂದ ಯಾದವ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಲೆಯ ಎಲ್ಲಾ ತರಗತಿಗಳಿಗೂ ಏಕಾಏಕಿ ನುಗ್ಗಿ, ಶಿಕ್ಷಕರಿಗೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ರ‍್ಯಾಲಿಗೆ ಬಸ್‌ ವ್ಯವಸ್ಥೆ ಮಾಡಲು ವಿಫಲವಾದದಕ್ಕೆ ಈ ರೀತಿ ಮಾಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಉಳಿದ ಎಲ್ಲಾ ಶಿಕ್ಷಕರೂ ಪ್ರತ್ಯೇಕವಾಗಿ ಮತ್ತೊಂದು ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಆದರೆ ಪ್ರಕರಣವನ್ನು ಅಲ್ಲಗಳೆದಿರುವ ಯಾದವ್‌, ‘ಶಾಲೆಯಲ್ಲಿ ದಾಖಲಾತಿ ಹಾಗೂ ಮತ್ತಿತರ ವಿಚಾರಗಳಿಗೆ ಅಕ್ರಮವಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂಬ ದೂರುಗಳು ಬಂದಿದ್ದವವು. ಸಾರ್ವಜನಿಕರ ದೂರಿನ ಅನ್ವಯ ಶಾಲೆಯ ಆಡಳಿತ ಮಂಡಳಿ ಜತೆ ಮಾತನಾಡಲು ಶಾಲೆಗೆ ತೆರಳಿದ್ದೆ’

‘ಶಾಲೆಯಲ್ಲಿ ವಿಧಿಸುತ್ತಿರುವ ಹೆಚ್ಚುವರಿ ಶುಲ್ಕ ಸಂಬಂಧ ನಿಯೋಜಿತ ಮುಖ್ಯಶಿಕ್ಷಕರಿಗೆ ನಿರ್ದೇಶನ ನೀಡಿದ್ದೆ. ನಾನು ಯಾರನ್ನೂ ನಿಂದಿಸಿಲ್ಲ, ಅವಮಾನಿಸಿಲ್ಲ ಹಾಗೂ ಬೆದರಿಕೆ ಹಾಕಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.