ADVERTISEMENT

ಬಿಹಾರ: ಮಹಾಘಟಬಂಧನ ಅವಸಾನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 20:13 IST
Last Updated 26 ಜುಲೈ 2017, 20:13 IST
ಬಿಹಾರ: ಮಹಾಘಟಬಂಧನ ಅವಸಾನ
ಬಿಹಾರ: ಮಹಾಘಟಬಂಧನ ಅವಸಾನ   

ಪಟ್ನಾ: ಬಿಹಾರದ ಆಡಳಿತಾರೂಢ ಮೈತ್ರಿಕೂಟದ ಅಂಗ ಪಕ್ಷಗಳಾದ ಆರ್‌ಜೆಡಿ ಮತ್ತು ಜೆಡಿಯು ನಡುವೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತೆರೆ ಎಳೆದಿದ್ದಾರೆ.

ಈ ಮೂಲಕ, ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿದ್ದ ಬಿಹಾರದ ಎರಡು ವರ್ಷಗಳ  ಹಿಂದಿನ ಮಹಾಮೈತ್ರಿಯ ರಾಜಕೀಯ ಪ್ರಯೋಗ ಮುಗ್ಗರಿಸಿ ಬಿದ್ದಿದೆ. 2015ರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು.

ನಿತೀಶ್‌ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿರುವ ತಮ್ಮ ಮಗ ತೇಜಸ್ವಿ ಯಾದವ್‌ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಹೇಳಿದ ಬಳಿಕ ನಿತೀಶ್‌, ರಾಜೀನಾಮೆ ನೀಡುವ ಅಚ್ಚರಿಯ ಕ್ರಮ ಕೈಗೊಂಡರು.

ಲಾಲು ಅವರು ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯ ಹೋಟೆಲ್‌ ಗುತ್ತಿಗೆ ನೀಡಲು ಜಮೀನು ಪಡೆದ ಹಗರಣದಲ್ಲಿ ತೇಜಸ್ವಿ ವಿರುದ್ಧ ಸಿಬಿಐ ದೂರು ದಾಖಲಿಸಿತ್ತು. ಆ ಬಳಿಕ ತೇಜಸ್ವಿ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿತ್ತು.  ರಾಜೀನಾಮೆಗೂ ಮೊದಲು ನಿತೀಶ್‌ ಅವರು ಜೆಡಿಯು ಶಾಸಕರ ಸಭೆ ನಡೆಸಿದ್ದರು. ‘ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮುಂದೇನು ಎಂಬ ಬಗ್ಗೆ ತಿಳಿಸುತ್ತೇನೆ’ ಎಂದು ಶಾಸಕರಿಗೆ ಹೇಳಿದ್ದರು.

ಸುಳಿವು ಕೊಟ್ಟ ಹೇಳಿಕೆಗಳು: ‘ನಿತೀಶ್‌ ಅವರನ್ನು 40 ವರ್ಷಗಳಿಂದ ಬಲ್ಲೆ. ಅವರೇನು ಸಂತ ಅಲ್ಲ’ ಎಂದು ಆರ್‌ಜೆಡಿ ಮುಖಂಡ ಶಿವಾನಂದ ತಿವಾರಿ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ, ‘ನಿತೀಶ್‌ ಕುಮಾರ್‌ ಅವರ ಸ್ವಚ್ಛ ವ್ಯಕ್ತಿತ್ವ ಕಾಪಾಡುವ ವಿಚಾರದಲ್ಲಿ ರಾಜಿಯೇ ಇಲ್ಲ’ ಎಂದರು.

ಫಲ ಕೊಡದ ಸೋನಿಯಾ ಸಂಧಾನ: ಮಹಾಮೈತ್ರಿಯ ಬಿರುಕು ಸರಿಪಡಿಸಲು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಶ್ರಮಿಸಿದ್ದರು. ಲಾಲು ಮತ್ತು ನಿತೀಶ್‌ ಜತೆ ಹಲವು ಬಾರಿ ಅವರು ಮಾತುಕತೆ ನಡೆಸಿದ್ದರು. ಆದರೆ ಅದು ಫಲ ಕೊಡಲಿಲ್ಲ.

ವಿರೋಧ ಪಕ್ಷಗಳ ಒಗ್ಗಟ್ಟಿಗೆ ಪೆಟ್ಟು:  ಎನ್‌ಡಿಎ ವಿರುದ್ಧ 18 ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ ಹೋರಾಡುವ ಕಾಂಗ್ರೆಸ್‌ ಪ್ರಯತ್ನಕ್ಕೆ ಮಹಾಮೈತ್ರಿಯ ಅವಸಾನ ದೊಡ್ಡ ಹಿನ್ನಡೆಯಾಗಿದೆ.

ವಿರೋಧ ಪಕ್ಷಗಳ ಒಗ್ಗಟ್ಟಿನ ಮೂಲಕವೇ 2019ರ ಲೋಕಸಭೆ ಚುನಾವಣೆ ಎದುರಿಸುವ ಕಾರ್ಯತಂತ್ರವನ್ನು ಕಾಂಗ್ರೆಸ್‌ ಹೆಣೆದಿದೆ.  ಬದ್ಧ ರಾಜಕೀಯ ವೈರಿಗಳಾಗಿದ್ದ ನಿತೀಶ್‌ ಮತ್ತು ಲಾಲು ಅವರು 2015ರಲ್ಲಿ  ಒಟ್ಟಾಗುವ ಮೂಲಕ ಇಂತಹ ಹೋರಾಟದ ಅವಕಾಶ ತೆರೆದುಕೊಂಡಿತ್ತು. ಬೇರೆಡೆಯೂ ಇಂತಹ ರಾಜಕೀಯ ಪ್ರಯೋಗಕ್ಕೆ ಇದು ಪ್ರೇರಣೆ ನೀಡಿತ್ತು. ಆದರೆ ಈಗ ಪ್ರಯೋಗ ತನ್ನ ಹುಟ್ಟೂರಲ್ಲಿಯೇ ಅವಸಾನ ಕಂಡಿದೆ.
*
ಮೈತ್ರಿ ವಿರುದ್ಧವೇ ನಿತೀಶ್‌ ನಿರ್ಧಾರ
ಬಿಜೆಪಿ ಜತೆಗಿನ ದೀರ್ಘ ಸಂಬಂಧವನ್ನು ಕಡಿದುಕೊಂಡ ನಿತೀಶ್‌ ಅವರು 2015ರಲ್ಲಿ ಆರ್‌ಜೆಡಿ ಮತ್ತು ಜೆಡಿಯು ಜತೆ ಸೇರಿ ಮಹಾಮೈತ್ರಿ ಮಾಡಿಕೊಂಡರು.

ಈ ಮೈತ್ರಿ ಸುಖಕರವಾದ ಪ್ರಯಾಣ ಆಗಿರಲಿಲ್ಲ. ಲಾಲು ವಿರುದ್ಧ ಇದ್ದ ಭ್ರಷ್ಟಾಚಾರ ಆರೋಪಗಳು ಸ್ವಚ್ಛ ವರ್ಚಸ್ಸಿನ ನಿತೀಶ್‌ ಅವರಿಗೆ ಇರುಸು ಮುರುಸು ಉಂಟು ಮಾಡಿದ್ದವು.

ನಿತೀಶ್‌ ಅವರ ನಡವಳಿಕೆಯೂ ಮೈತ್ರಿಕೂಟದ ಇತರ ಪಕ್ಷಗಳಿಗೆ ಹಲವು ಬಾರಿ ಕಿರಿಕಿರಿ ಉಂಟು ಮಾಡಿದ್ದವು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಿಸಿದಾಗ ವಿರೋಧ ಪಕ್ಷಗಳು ಅದನ್ನು ಟೀಕಿಸಿದ್ದವು. ಆದರೆ ನಿತೀಶ್‌  ಕೇಂದ್ರದ ನಿರ್ಧಾರದ ಪರವಾಗಿ ನಿಂತರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಚಾರದಲ್ಲಿಯೂ ನಿತೀಶ್‌ ಅವರು ಮೈತ್ರಿ ಪಕ್ಷಗಳಿಗಿಂತ ಭಿನ್ನವಾದ ನಿಲುವು ತಳೆದರು. ಮೈತ್ರಿಕೂಟದ ಪಕ್ಷಗಳಿಗಿಂತ ನಿತೀಶ್‌ ಅವರು ಬಿಜೆಪಿಯತ್ತಲೇ ವಾಲುತ್ತಿದ್ದುದು ಸ್ಪಷ್ಟವಾಗಿತ್ತು.

ಹಾಗಾಗಿ 2019ರ ಲೋಕಸಭಾ ಚುನಾವಣೆಗೆ ಮೊದಲು ನಿತೀಶ್‌ ಅವರು ಮಹಾಮೈತ್ರಿ ತೊರೆದು ಹೋಗಬಹುದು ಎಂಬ ಅನುಮಾನ ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಇದ್ದೇ ಇತ್ತು ಎಂದು ವಿಶ್ಲೇಷಕರು ಹೇಳುತ್ತಾರೆ.

ADVERTISEMENT

*
ನಿತೀಶ್‌ ಮೇಲೆ ಕೊಲೆಯ ಕಳಂಕ
ಪಟ್ನಾ:
ನಿತೀಶ್‌ ಕುಮಾರ್‌ ರಾಜೀನಾಮೆ ನೀಡುತ್ತಿದ್ದಂತೆ ಅವರ ವಿರುದ್ಧ ಹರಿಹಾಯ್ದಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌, ನಿತೀಶ್‌ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ.

ನಿತೀಶ್‌ ಕುಮಾರ್‌ ಅವರು ಬಿಜೆಪಿಯೊಂದಿಗೆ ಕೈ ಜೋಡಿಸಿ ಒಳಸಂಚು ರೂಪಿಸಿದ್ದಾರೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾವು ಐಪಿಸಿ ಸೆಕ್ಷನ್‌ 302ರ ಆರೋಪಿ ಎಂಬುದು ನಿತೀಶ್‌ ಅವರಿಗೆ ಗೊತ್ತಿದೆ. ದೇಶದ ಒಬ್ಬ ಮುಖ್ಯಮಂತ್ರಿ ಕೊಲೆ ಮತ್ತು ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜೀನಾಮೆ ನೀಡಿರುವುದನ್ನು ಶ್ಲಾಘಿಸಿ ಪ್ರಧಾನಿ ಮೋದಿ ಅವರು ಮಾಡಿರುವ ಟ್ವೀಟ್‌ ಪ್ರಸ್ತಾಪಿಸಿದ ಅವರು, ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ.  ಒಂದು ವೇಳೆ ಬಿಜೆಪಿಯೊಂದಿಗೆ ಸೇರುವ ಯೋಚನೆ ನಿತೀಶ್‌ ಅವರಿಗೆ  ಇಲ್ಲದಿದ್ದರೆ, ಮೈತ್ರಿ ಪಕ್ಷಗಳ ಎಲ್ಲ ಶಾಸಕರ ಸಭೆ ಕರೆದು ಹೊಸ ನಾಯಕನ ಆಯ್ಕೆ ಮಾಡಲು ಒಪ್ಪಲಿ’ ಎಂದು ಸವಾಲು ಹಾಕಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಹಾಗೂ ಮಗನ ವಿರುದ್ಧ ಸಿಬಿಐ ಆರೋಪ ಮಾಡಿದ ನಂತರ ಬಿಕ್ಕಟ್ಟು ಸೃಷ್ಟಿಯಾಯಿತು ಎಂದು ಸ್ಪಷ್ಟಪಡಿಸಿದ ಅವರು, ‘ಈ ಆರೋಪಗಳು ಸುಳ್ಳು ಮತ್ತು  ರಾಜಕೀಯ ಪ್ರೇರಿತವಾಗಿದ್ದು ಎಂದು ನಿತೀಶ್‌ ಕುಮಾರ್‌ಗೆ ತಿಳಿಸಿದ್ದೆವು’ ಎಂದು ಹೇಳಿದ್ದಾರೆ.
*
ಬಿಹಾರದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿರುವ ಆರ್‌ಜೆಡಿಗೆ ಸರ್ಕಾರ ರಚಿಸುವ ಅವಕಾಶ ನೀಡಬೇಕು
- ಲಾಲು ಪ್ರಸಾದ್,
ಆರ್‌ಜೆಡಿ ಮುಖ್ಯಸ್ಥ
*
‘ರಾಜೀನಾಮೆ ನಿರಾಸೆ ತಂದಿದೆ’
ನವದೆಹಲಿ:
ನಿತೀಶ್‌ ಕುಮಾರ್‌ ರಾಜೀನಾಮೆ ನೀಡಿರುವುದಕ್ಕೆ ಕಾಂಗ್ರೆಸ್‌ ತೀವ್ರ ನಿರಾಸೆ ವ್ಯಕ್ತಪಡಿಸಿದೆ. ಮಹಾ ಮೈತ್ರಿಯಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ತನ್ನ ಯತ್ನವನ್ನು ಮುಂದುವರಿಸುವುದಾಗಿ ಅದು ಹೇಳಿದೆ.

‘ನಾವು ಕಾಂಗ್ರೆಸ್ಸಿಗರು, ಅದರಲ್ಲೂ ಪ್ರಮುಖವಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ನಿತೀಶ್‌ ಕುಮಾರ್‌ ಅವರ ಬಗ್ಗೆ ಹೆಚ್ಚಿನ ಗೌರವ ಇದೆ. ಅವರೊಂದಿಗೆ ಸೌಹಾರ್ದ ಸಂಬಂಧ ಇದೆ. ಅವರ ಈ ನಿರ್ಧಾರದಿಂದ ನಮಗೆ ನಿರಾಸೆಯಾಗಿದೆ ಎಂದು ಪಕ್ಷದ ಮುಖ್ಯ ವಕ್ತಾರ ರಣ್‌ದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

‘ಮಹಾ ಘಟಬಂಧನ್‌’ನ (ಮಹಾ ಮೈತ್ರಿ)  ನೀತಿಗಳು, ಸಿದ್ಧಾಂತಗಳು ಮತ್ತು ಸಾಮೂಹಿಕ ನಾಯಕತ್ವವನ್ನು ಆಧಾರವಾಗಿಟ್ಟುಕೊಂಡು ಬಿಹಾರದ ಮತದಾರರು ಈ ಮೈತ್ರಿ ಕೂಟಕ್ಕೆ ಐದು ವರ್ಷಗಳ ಅವಧಿಗೆ ಜನಾದೇಶ ನೀಡಿದ್ದರು ಎಂದು ಅವರು ಹೇಳಿದ್ದಾರೆ.

‘ಜನರ ತೀರ್ಪನ್ನು ಗೌರವಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಬಂದಿರುವ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಲು ನಾವು ಯತ್ನಿಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
*
ಮೋದಿ ಅಭಿನಂದನೆ
ನವದೆಹಲಿ:
ಭ್ರಷ್ಟಾಚಾರ ವಿರೋಧಿ ನಿಲುವು ತೆಗೆದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿತೀಶ್‌ ಕುಮಾರ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಕಿರು ಬ್ಲಾಗಿಂಗ್‌ ತಾಣ ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ, ‘ನಿತೀಶ್‌ ಕುಮಾರ್‌ ಅವರೇ, ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ   ಜೊತೆಯಾಗಿರುವುದಕ್ಕೆ ಅಭಿನಂದನೆಗಳು.... 1.25 ಕೋಟಿ ಜನರು ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ ಮತ್ತು ಸಮರ್ಥಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ದೇಶದ, ಅದರಲ್ಲೂ ಬಿಹಾರದ ಉತ್ಕೃಷ್ಟ ಭವಿಷ್ಯಕ್ಕಾಗಿ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ  ಕೈ ಜೋಡಿಸುವುದು ಇಂದಿನ ತುರ್ತು ಅಗತ್ಯ’ ಎಂದು ಅವರು ಹೇಳಿದ್ದಾರೆ.

ಕುತೂಹಲಕಾರಿ ಸಂಗತಿ ಎಂದರೆ, ಪ್ರಧಾನಿ ಅವರ ಟ್ವೀಟ್‌ಗೆ ಧನ್ಯವಾದ ಸಲ್ಲಿಸಿ ನಿತೀಶ್‌ ಕುಮಾರ್‌ ಕೂಡ ಟ್ವೀಟ್‌ ಮಾಡಿದ್ದಾರೆ.

*
ಬಿರುಕಿನ ಹಾದಿ
27 ಜುಲೈ 2014: ನಿತೀಶ್ ಕುಮಾರ್, ಲಾಲು ಪ್ರಸಾದ್ ಮತ್ತು ಕಾಂಗ್ರೆಸ್‌ನಿಂದ ಮಹಾಮೈತ್ರಿ ಘೋಷಣೆ

5 ಜೂನ್ 2015: ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್‌ ಕುಮಾರ್ ಘೋಷಣೆ

8ನೇ ನವೆಂಬರ್ 2015: ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಾ ಮೈತ್ರಿಕೂಟಕ್ಕೆ ಭರ್ಜರಿ ಜಯ. 178 ಸ್ಥಾನಗಳಲ್ಲಿ ಗೆಲುವು.

21 ಜನವರಿ 2016: ಗೃಹ ಸಚಿವರೂ ಆಗಿರುವ ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರ್‌ಜೆಡಿ ಉಪಾಧ್ಯಕ್ಷ ರಘುವಂಶ್ ಪ್ರಸಾದ್ ಸಿಂಗ್‌ ಆರೋಪ

10 ಸೆಪ್ಟೆಂಬರ್ 2016: ಅಪರಾಧ ಹಿನ್ನೆಲೆಯ ರಾಜಕಾರಣಿ ಶಹಾಬುದ್ದೀನ್ ಅವರು ಜೈಲಿನಿಂದ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ತಮ್ಮ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್‌ರನ್ನು ಹೊಗಳಿದರು. ನಿತೀಶ್‌ರನ್ನು ‘ಸನ್ನಿವೇಶಗಳ ಮುಖ್ಯಮಂತ್ರಿ’ ಎಂದು ಲೇವಡಿ

11 ಸೆಪ್ಟೆಂಬರ್ 2016: ಯಾರಿಗೆ ತಮ್ಮ ಮತ ನೀಡಿದ್ದೇವೆ ಎಂಬುದು ಬಿಹಾರದ ಜನತೆಗೆ ತಿಳಿದಿದೆ– ಶಹಾಬುದ್ದೀನ್‌ ಲೇವಡಿಗೆ ನಿತೀಶ್ ತಿರುಗೇಟು

29 ಸೆಪ್ಟೆಂಬರ್ 2016: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ, ಗಡಿ ನಿಯಂತ್ರಣ ರೇಖೆಯಾಚೆ ಪಾಕಿಸ್ತಾನದ ಸೇನೆಯ ಮೇಲೆ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ  ನಿತೀಶ್‌ ಮೆಚ್ಚುಗೆ

9 ನವೆಂಬರ್ 2016: ಕೇಂದ್ರ ಸರ್ಕಾರದ ನೋಟು ರದ್ದತಿ ಕ್ರಮ ಒಂದು ವಂಚನೆ ಎಂದ ಲಾಲು ಪ್ರಸಾದ್. ಆದರೆ ಕೇಂದ್ರದ ನಿರ್ಧಾರ ಸ್ವಾಗತಿಸಿದ ನಿತೀಶ್

5ನೇ ಜನವರಿ 2017: ಪಟ್ನಾದಲ್ಲಿ ನಡೆದ ‘ನಶಾ ಮುಕ್ತಿ ಅಭಿಯಾನ’ದ ಚಾಲನಾ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ನಿತೀಶ್ ಕುಮಾರ್.
ರಾಜ್ಯದಲ್ಲಿ ಮದ್ಯ ನಿಷೇಧಿಸಿದ ನಿತೀಶ್‌ರನ್ನು ಶ್ಲಾಘಿಸಿದ ಮೋದಿ. ಗುಜರಾತ್‌ನಲ್ಲಿ 12 ವರ್ಷಗಳ ಹಿಂದೆಯೇ ಮೋದಿ ಮದ್ಯ ನಿಷೇಧಿಸಿದ್ದರು ಎಂದ ನಿತೀಶ್

26 ಮೇ 2017: ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಎಲ್ಲಾ ವಿರೋಧ ಪಕ್ಷಗಳ ನಾಯಕರ ಜತೆ ಚರ್ಚೆ ನಡೆಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆದಿದ್ದ ಔತಣಕೂಟಕ್ಕೆ ನಿತೀಶ್ ಗೈರು. ಜೆಡಿಯು ಪ್ರತಿನಿಧಿ ಭಾಗಿ

27 ಮೇ 2017: ಮಾರಿಷಸ್ ಪ್ರಧಾನಿ ಅವರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ನಿತೀಶ್ ಭಾಗಿ. ನಂತರ ಇಬ್ಬರೂ ನಾಯಕರ ಮಧ್ಯೆ ಸಭೆ

21 ಜೂನ್ 2017: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಯ ಅಭ್ಯರ್ಥಿಯಾಗಿದ್ದ ರಾಮನಾಥ ಕೋವಿಂದ್ ಅವರಿಗೆ ನಿತೀಶ್‌ ಮುಂದಾಳತ್ವದ ಜೆಡಿಯು ಬೆಂಬಲ ಘೋಷಣೆ.

7ನೇ ಜುಲೈ 2017: ಹೋಟೆಲ್‌ಗಳಿಗಾಗಿ ಜಮೀನು ಮಂಜೂರು ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಮತ್ತು ಕುಟುಂಬದವರ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ. ರಾಜ್ಯದ ಉಪಮುಖ್ಯಮಂತ್ರಿ, ಲಾಲು ಪುತ್ರ ತೇಜಸ್ವಿ ಯಾದವ್‌ ಅವರನ್ನು ಆರೋಪಿಯನ್ನಾಗಿಸಿ ಎಫ್‌ಐಆರ್ ದಾಖಲಿಸಿದ ಸಿಬಿಐ. ಎಫ್‌್ಐಆರ್‌ನಲ್ಲಿ ಲಾಲು ಪತ್ನಿ ರಾಬ್ಡಿ ದೇವಿ ಮತ್ತು ಅವರ ಸಹ ಉದ್ಯಮಿಗಳ ಹೆಸರು

8ನೇ ಜುಲೈ 2017: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಾಲು ಪುತ್ರಿ ಮಿಸಾ ಭಾರತಿ ಮತ್ತು ಅವರ ಪತಿಗೆ ಸೇರಿದ ತೋಟದ ಮನೆಗಳು  ಹಾಗೂ ಇತರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ

9 ಜುಲೈ 2017: ತೇಜಸ್ವಿ ಯಾದವ್ ಆರೋಪ ಮುಕ್ತರಾಗಿ ಬರಲಿ ಎಂದ ನಿತೀಶ್

10 ಜುಲೈ 2017: ಆರ್‌ಜೆಡಿ ಸಭೆ. ತೇಜಸ್ವಿ ಯಾದವ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದ ಪಕ್ಷ. ತಪ್ಪು ಮಾಡದಿದ್ದ ಮೇಲೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ತೇಜಸ್ವಿ ಯಾದವ್

14 ಜುಲೈ 2017: ಲಾಲು ಮತ್ತು ನಿತೀಶ್ ನಡುವಣ ಭಿನ್ನಾಭಿಪ್ರಾಯ ಬಗೆಹರಿಸಲು ಸೋನಿಯಾ ಗಾಂಧಿ, ಇಬ್ಬರು ನಾಯಕರ ಸಭೆ ಕರೆದಿದ್ದಾರೆ ಎಂದು ಮಾಧ್ಯಮಗಳ ವರದಿ. ಅಂತಹ ಯಾವಹದೇ ಕರೆ ಬಂದಿಲ್ಲ ಎಂದ ಲಾಲು

15ನೇ ಜುಲೈ 2017: ರಾಜ್ಯ ಸರ್ಕಾರದ ಕಾರ್ಯಕ್ರಮ ಒಂದಕ್ಕೆ ಗೈರುಹಾಜರಾದ ತೇಜಸ್ವಿ.

18ನೇ ಜುಲೈ 2017: ಸಂಪುಟ ಸಭೆಯ ನಂತರ ನಿತೀಶ್ ಮತ್ತು ತೇಜಸ್ವಿ ಮಧ್ಯೆ ಮಾತುಕತೆ. ವಿವರ ಬಹಿರಂಗವಾಗಲಿಲ್ಲ
*
ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದಂತೆ, ಸೋನಿಯಾ ಗಾಂಧಿ ಅವರನ್ನು ನಿತೀಶ್ ಭೇಟಿ ಮಾಡಿದ್ದರು. ಜತೆಗೆ, ‘ನಿಮ್ಮ ನೇತೃತ್ವದಲ್ಲೇ ಎಲ್ಲಾ ವಿರೋಧ ಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಘೋಷಿಸಿದ ನಂತರ, ಅವರಿಗೆ ನಿತೀಶ್ ತಮ್ಮ ಬೆಂಬಲ ಘೋಷಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.