ADVERTISEMENT

ಬೆಂಜಮಿನ್ ನೆತನ್ಯಾಹು –ಮೋದಿ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 10:58 IST
Last Updated 29 ಸೆಪ್ಟೆಂಬರ್ 2014, 10:58 IST

ನ್ಯೂಯಾರ್ಕ್ (ಪಿಟಿಐ): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗವಾಗಿ ನ್ಯೂಯಾರ್ಕ್‌ಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇದೇ ಮೊದಲ ಬಾರಿಗೆ ಸೋಮವಾರ ಭೇಟಿಯಾಗಿ ಚರ್ಚಿಸಿದರು.

ಅಲ್ಲದೇ ದ್ವಿಪಕ್ಷೀಯ ಸಂಬಂಧಗಳಿಗೆ ‘ಆಕಾಶವೇ ಮಿತಿ’ ಎಂದು ನೆತನ್ಯಾಹು ಬಣ್ಣಿಸಿದ್ದಾರೆ. 11 ವರ್ಷಗಳ ಬಳಿಕ ಎರಡೂ ದೇಶಗಳ ಮುಖ್ಯಸ್ಥರ ನಡುವಣ ಮೊದಲ ಭೇಟಿ ಇದಾಗಿದೆ.

ಉಭಯ ನಾಯಕರು ತಂಗಿರುವ ನ್ಯೂಯಾರ್ಕಿನ ಪ್ಯಾಲೆಸ್‌ ಹೋಟೆಲ್‌ನಲ್ಲಿ ಮಾತುಕತೆ ನಡೆಯಿತು. ಈ ವೇಳೆ ರಕ್ಷಣಾ ಸಹಭಾಗಿತ್ವ, ಪಶ್ಚಿಮ ಏಷ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್‌ ಸಂಘಟನೆಯಿಂದ ಉಂಟಾಗಿರುವ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ADVERTISEMENT

ಸುಮಾರ 30 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಯಹೂದಿ ನಾಯಕ ನೇತನ್ಯಾಹು ಅವರು ಶೀಘ್ರವೇ ಇಸ್ರೇಲ್‌ಗೆ ಭೇಟಿ ನೀಡುವಂತೆ ಮೋದಿ ಅವರನ್ನು ಆಹ್ವಾನಿಸಿದ್ದಾರೆ.

ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇಸ್ರೇಲ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ನೆತನ್ಯಾಹು ಅವರು ಪ್ರಧಾನಿಯಾಗಿಯೂ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸಯ್ಯದ್ ಅಕ್ಬರುದ್ದೀನ್‌ ತಿಳಿಸಿದ್ದಾರೆ. ಮೋದಿ ಅವರು 2006ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದರು.

ಭೇಟಿ ಆಹ್ವಾನವನ್ನು ಮೋದಿ ಅವರು ಸ್ವೀಕರಿಸಿದ್ದಾರೆ. ಉಭಯ ನಾಯಕರು ಭೇಟಿಯ ವೇಳೆ ಆರ್ಥಿಕ ಸಹಕಾರ ವೃದ್ಧಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಅಕ್ಬರುದ್ದೀನ್ ಅವರು ತಿಳಿಸಿದ್ದಾರೆ.

ಭಾರತ ಹಾಗೂ ಇಸ್ರೇಲ್‌ ನಡುವೆ ಉತ್ತಮ ಬಾಂಧವ್ಯವಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಸುಮಾರು ಆರು ಬಿಲಿಯನ್‌ ಅಮೆರಿಕ ಡಾಲರ್ ಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.