ADVERTISEMENT

ಬ್ರಿಟಿಷರ ಕಾಲದ ತೊಟ್ಟಿ ಪತ್ತೆ

‘ಎ’ನಿಂದ ‘ಜಿ’ ವಾರ್ಡ್‌ವರೆಗೆ 66 ಸ್ಥಿರ ಜಲಾಗಾರ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 18:48 IST
Last Updated 26 ಸೆಪ್ಟೆಂಬರ್ 2016, 18:48 IST
ಬ್ರಿಟಿಷರ ಕಾಲದ ತೊಟ್ಟಿ ಪತ್ತೆ
ಬ್ರಿಟಿಷರ ಕಾಲದ ತೊಟ್ಟಿ ಪತ್ತೆ   

ಮುಂಬೈ: ಬ್ರಿಟಿಷರ ಕಾಲಕ್ಕೆ ಸೇರಿದ 60ಕ್ಕೂ ಹೆಚ್ಚು ಸ್ಥಿರ ನೀರಿನ ತೊಟ್ಟಿಗಳು ಮುಂಬೈನಲ್ಲಿ ಪತ್ತೆಯಾಗಿದ್ದು, ನೀರಿನ ಸಂರಕ್ಷಣೆ ಮತ್ತು ಸಂಗ್ರಹಣೆಯ ಅತ್ಯುತ್ಕೃಷ್ಟ ಮಾದರಿಗಳು ಮತ್ತು ಅವುಗಳ ಬಳಕೆಯ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದೆ. ಅಲ್ಲದೆ, ಇವುಗಳು ಅತ್ಯಮೂಲ್ಯ ಪಾರಂಪರಿಕ ಮಹತ್ವ ಪಡೆದುಕೊಂಡಿವೆ.

ಶಿವ ಸೇನಾದ ಪಾಲಿಕೆ ಸದಸ್ಯ ಪ್ರೊ. ಅವಕಾಶ್‌ ಜಾಧವ್‌ ಈ ತೊಟ್ಟಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ‘ಮೂರು ತಿಂಗಳ ಹಿಂದೆ ಚತ್ರಪತಿ ಶಿವಾಜಿ ಮಹಾರಾಜ ವಸ್ತು ಸಂಗ್ರಹಾ ಲಯದ ಆವರಣದಲ್ಲಿ ಬಿಎಂಸಿಯ ಒಂದು ಫಲಕ ಕಾಣಿಸಿತು. ಅದರಲ್ಲಿ ‘ಸ್ಟ್ಯಾಟಿಕ್‌ ವಾಟರ್ ಟ್ಯಾಂಕ್‌ ಎ–4’ ಎಂದು ಬರೆಯಲಾಗಿತ್ತು. ಅದನ್ನು ಪ್ರತ್ಯೇಕವಾದ ತುದಿಯಲ್ಲಿ ಇರಿಸಲಾಗಿತ್ತು. ಅದನ್ನು ತೆರೆಯಲು ವ್ಯವಸ್ಥೆ ಮಾಡಿದೆ. ಅದು 2.50 ಲಕ್ಷ ಲೀಟರ್‌ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂಬುದು ತಿಳಿಯಿತು’ ಎಂದು ಜಾಧವ್‌ ತಿಳಿಸಿದ್ದಾರೆ.

‘ಎ–4’ ಫಲಕ ನೀಡಿದ ಸುಳಿವು ಬೆನ್ನತ್ತಿದ ಜಾಧವ್‌ ಅವರು, ‘ಎ’ ಸರಣಿಯ ಇತರೆ ಜಲಾಗಾರಗಳ ಶೋಧಕ್ಕೆ ಮುಂದಾದರು. ‘ಎ’ ವಾರ್ಡ್‌ ಒಂದರಲ್ಲಿಯೇ ಅಂತಹ ಆರು ಜಲಾಗಾರಗಳಿರುವ ಬಗ್ಗೆ ಅವರಿಗೆ ಮಾಹಿತಿ ದೊರಕಿತು. ಎರಡು ವಾರಗಳ ಕಾಲ ಬಿಎಂಸಿಯ ಜಲಮಂಡಳಿ ಮತ್ತು ತುರ್ತು ದುರಸ್ತಿ ಸೇವೆಗಳ ಇಲಾಖೆಗಳಿಂದ ಮಾಹಿತಿ ಶೇಖರಿಸಿದ ಅವರಿಗೆ ‘ಎ’ನಿಂದ ‘ಜಿ’ ವಾರ್ಡ್‌ವರೆಗೆ 66 ಸ್ಥಿರ ಜಲಾಗಾರಗಳಿರುವುದು ಗೊತ್ತಾಗಿದೆ.

‘66 ಜಲಾಗಾರಗಳ ಪೈಕಿ 13 ತೊಟ್ಟಿಗಳು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಅಥವಾ ಅವುಗಳ ಸುತ್ತಲೂ ಕಟ್ಟಡಗಳು ಎದ್ದಿರಬಹುದು. ಹೀಗಾಗಿ ಒಟ್ಟು 53 ಜಲಾಗಾರಗಳನ್ನು ಮಾತ್ರ ಪತ್ತೆಹಚ್ಚಬಹುದು. ಈ ಎಲ್ಲ ಜಲಾಗಾರಗಳೂ ಸುಮಾರು 1.57 ಕೋಟಿ ಲೀಟರ್‌ ನೀರು ತುಂಬುವ ಸಾಮರ್ಥ್ಯ ಹೊಂದಿವೆ’ ಎಂದು ಅವರು ತಿಳಿಸಿದ್ದಾರೆ.

ಈ ಎಲ್ಲ ಜಲಾಗಾರಗಳೂ ಒಂದೇ ಅಳತೆ ಹೊಂದಿವೆ. 10 ಮೀಟರ್‌ ಉದ್ದ ಮತ್ತು 10 ಮೀಟರ್‌ ಅಗಲದ ಜಲಾ ಗಾರಗಳು 3 ಮೀಟರ್‌ ಆಳ ಹೊಂದಿವೆ. ಸಂಪೂರ್ಣ ಕಾಂಕ್ರೀಟ್‌ನಿಂದ ನಿರ್ಮಿತವಾದ ಗಟ್ಟಿಮುಟ್ಟಾದ ಇವು ಈಗಲೂ ಸುಸ್ಥಿತಿಯಲ್ಲಿವೆ.

‘ಇವು ಪರಂಪರೆ ಮತ್ತು ಇತಿಹಾಸದ ತುಣುಕುಗಳಾಗಿವೆ. ಇಂತಹ ಇನ್ನೂ ಸಂಗ್ರಹ ವ್ಯವಸ್ಥೆಗಳು ಇರಬಹುದು. ಮಳೆ ನೀರು ಇಂಗುವಿಕೆಗೂ ವ್ಯವಸ್ಥೆ ಇರ ಬಹುದು’ ಎಂದು ಜಾಧವ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.