ADVERTISEMENT

ಭೂಕುಸಿತ: 46 ಮಂದಿ ಸಾವು

ಪಿಟಿಐ
Published 13 ಆಗಸ್ಟ್ 2017, 19:32 IST
Last Updated 13 ಆಗಸ್ಟ್ 2017, 19:32 IST
ಭೂಕುಸಿತ: 46 ಮಂದಿ ಸಾವು
ಭೂಕುಸಿತ: 46 ಮಂದಿ ಸಾವು   

ಶಿಮ್ಲಾ: ಮೇಘಸ್ಫೋಟದಿಂದ ಹಿಮಾಚಲ ಪ್ರದೇಶದ ಮಂಡಿ– ಪಠಾಣ್‌ಕೋಟ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಎರಡು ಬಸ್ಸುಗಳು ಸಿಲುಕಿ ಕನಿಷ್ಠ 46 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಈ ಬಸ್ಸಿನಲ್ಲಿ 50ಕ್ಕೂ ಅಧಿಕ ಪ್ರಯಾಣಿಕರಿದ್ದರು. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹಿಮಾಚಲ ಪ್ರದೇಶದ ಸಾರಿಗೆ ಸಚಿವ ಜಿ.ಎಸ್‌.ಬಾಲಿ ತಿಳಿಸಿದ್ದಾರೆ.

ಒಂದು ಬಸ್ಸು ಮನಾಲಿಯಿಂದ ಕಟ್ರಾಕ್ಕೆ ಹಾಗೂ ಮತ್ತೊಂದು ಮನಾಲಿಯಿಂದ ಛಂಬಾಕ್ಕೆ ತೆರಳುತ್ತಿತ್ತು. ಚಹಾ ವಿರಾಮಕ್ಕಾಗಿ ಎರಡು ಬಸ್‌ಗಳು ಕೊಟ್ರುಪಿಯಲ್ಲಿ ನಿಂತಿದ್ದ ವೇಳೆ, ಈ ಅನಾಹುತ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ವಿಶೇಷ ಕಾರ್ಯದರ್ಶಿ ಡಿ.ಡಿ.ಶರ್ಮಾ ತಿಳಿಸಿದ್ದಾರೆ.

ಕೊಟ್ರುಪಿ ಭಾಗದಲ್ಲಿ ಹೆದ್ದಾರಿ ಸಂಪೂರ್ಣವಾಗಿ ಕುಸಿದುಹೋಗಿದೆ.  ಬಸ್ಸುಗಳು 800 ಮೀಟರ್‌ ಆಳದ ಕಮರಿಗೆ ಬಿದ್ದಿದೆ. ಈ ಪೈಕಿ ಒಂದು ಬಸ್‌ ನೆಲದ ಅಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿದ್ದು, ಅದನ್ನು ಇದುವರೆಗೂ ಪತ್ತೆಹಚ್ಚಲಾಗಿಲ್ಲ ಎಂದು ಅವರು ತಿಳಿಸಿದರು.

‘ಮನಾಲಿ– ಕಟ್ರಾ ಮಾರ್ಗದಲ್ಲಿ ತೆರಳುತ್ತಿದ್ದ ವೋಲ್ವೊ ಬಸ್ಸಿನಲ್ಲಿ 8 ಮಂದಿ ಪ್ರಯಾಣಿಕರಿದ್ದು, ಮತ್ತೊಂದು ಬಸ್ಸಿನಲ್ಲಿ 47 ಪ್ರಯಾಣಿಕರಿದ್ದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು
ಬಂದಿದೆ. ಇಲ್ಲಿಯವರೆಗೆ 34ಮೃತ ದೇಹಗಳು ಸಿಕ್ಕಿದ್ದು, ಆ ಪೈಕಿ 18ಮಂದಿಯ ಗುರುತು ಪತ್ತೆಯಾಗಿದೆ, ಇನ್ನುಳಿದವರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಮಹಾ ನಿರ್ದೇಶಕ ಸೋಮ್ಯೆಶ್‌ ಗೋಯಲ್‌ ತಿಳಿಸಿದರು.

ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ಕೌಲ್‌ ಸಿಂಗ್‌ ಠಾಕೂರ್‌, ಸಾರಿಗೆ ಸಚಿವ ಜಿ.ಎಸ್‌ ಬಾಲಿ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಜ ಸಚಿವ ಅನಿಲ್‌ ಶರ್ಮ ಭೇಟಿ ನೀಡಿ ಪರಿಶೀಲಿಸಿದರು. ಮೃತ ಕುಟುಂಬಕ್ಕೆ ಠಾಕೂರ್‌ ಅವರು ₹4ಲಕ್ಷ ಹಾಗೂ ಬಾಲಿ ಅವರು ತಲಾ ₹1ಲಕ್ಷ ಪರಿಹಾರ ಘೋಷಿಸಿದ್ದಾರೆ.

ಹೆದ್ದಾರಿ ಬಂದ್‌: ಭೂಕುಸಿತದ ಬಳಿಕ ಚಂಡೀಗಡ– ಮನಾಲಿಗೆ ಸಂಪರ್ಕ ಕಲ್ಪಿಸುವ  ಮಂಡಿ– ಔಟ್‌ ಭಾಗದ ಹೆದ್ದಾರಿಯನ್ನು ಮುಚ್ಚಿ ಮಂಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅದೇ ರೀತಿ ಪಠಾಣ್‌ಕೋಟ್‌– ಮಂಡಿ ರಾಷ್ಟ್ರೀಯ ಹೆದ್ದಾರಿಯ ಪೈಕಿ ಜೋಗಿಂದರ್‌ನಗರ್– ಮಂಡಿ ಭಾಗದಲ್ಲಿ ಹೆದ್ದಾರಿ ಮುಚ್ಚಲಾಗಿದೆ ಎಂದು ಮಂಡಿ ಜಿಲ್ಲಾಡಳಿತ ಪ್ರಕಟಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
*
ಸೇನೆಯಿಂದ ರಕ್ಷಣಾ ಕಾರ್ಯಾಚರಣೆ
ಅನಾಹುತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌)ಯು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರು, ಪೊಲೀಸರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಛಂಬಾ ಡಿಪೋಗೆ ಸೇರಿದ ಬಸ್ಸಿನ ಚಾಲಕ ಚಂದೆನ್‌ ಶರ್ಮಾ ಹಾಗೂ ಸತ್ಪಾಲ್‌ ಸೇರಿದಂತೆ ಎಂಟು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ.

*
ಈ ಹಿಂದೆಯೂ ನಡೆದಿತ್ತು...!
ಕಳೆದ ಮೂರು ದಶಕದಲ್ಲಿ ಹಿಮಾಚಲಪ್ರದೇಶದಲ್ಲಿ ಸಂಭವಿಸಿದ ಮೂರನೇ ಭೀಕರ ಭೂಕುಸಿತ ಇದಾಗಿದೆ. 1988ರಲ್ಲಿ ಶಿಮ್ಲಾ ಜಿಲ್ಲೆಯ ಮಟಿಯಾನಾದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಬಸ್ಸು ಸಿಲುಕಿ 45 ಮಂದಿ ಸಾವನ್ನಪ್ಪಿದ್ದರು. 1994ರಲ್ಲಿ ಕುಲು ಜಿಲ್ಲೆಯ ಲುಗ್ಗರ್‌ ಹಟಿಯಲ್ಲಿ ಇದೇ ರೀತಿ ಅವಘಡ ಸಂಭವಿಸಿ 42 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.