ADVERTISEMENT

ಮಣ್ಣಿನ ಗುಡಿಸಲು ನೆನೆದ ಕೋವಿಂದ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಮಣ್ಣಿನ ಗುಡಿಸಲು ನೆನೆದ ಕೋವಿಂದ್‌
ಮಣ್ಣಿನ ಗುಡಿಸಲು ನೆನೆದ ಕೋವಿಂದ್‌   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯು ಗುರುವಾರ ದಿನವಿಡೀ ಸುರಿದ ಮಳೆಯಿಂದ ತೋಯ್ದಿತ್ತು. ಚುನಾವಣೆಯಲ್ಲಿ ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮನಾಥ ಕೋವಿಂದ್‌ ಅವರಿಗೆ, ಬಾಲ್ಯದಲ್ಲಿ ಮಳೆ ಬಂದ ಸಂದರ್ಭದಲ್ಲಿ ಮಣ್ಣಿನ ಗುಡಿಸಲಿನಲ್ಲಿ ಕಳೆದ ದಿನಗಳು ನೆನಪಾದವು.

‘ದೆಹಲಿಯಲ್ಲಿ ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದೆ. ನನ್ನ ಪೂರ್ವಜರ ಗ್ರಾಮದಲ್ಲಿ ನಾನು ಕಳೆದ ಬಾಲ್ಯದ ದಿನಗಳನ್ನು ಈ ವಾತಾವರಣ ನೆನಪಿಸುತ್ತಿದೆ’ ಎಂದು ಕೋವಿಂದ್‌ ಹೇಳಿದರು.

‘ಮಣ್ಣಿನ ಗುಡಿಸಲಿನಲ್ಲಿ ನಾವು ವಾಸಿಸುತ್ತಿದ್ದೆವು. ಮಳೆಗಾಲದಲ್ಲಿ ನೀರು ಸೋರುತ್ತಿತ್ತು. ನಾನು, ಸೋದರ, ಸೋದರಿಯರು ಗುಡಿಸಲಿನ ಒಂದು ಮೂಲೆಯಲ್ಲಿ ನಿಂತು ಮಳೆ ನಿಲ್ಲುವುದನ್ನು ಕಾಯುತ್ತಿದ್ದೆವು’ ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ADVERTISEMENT

‘ಮಳೆಯಲ್ಲಿ ನೆನೆಯುತ್ತಿರುವ ಇಂತಹ ರಾಮನಾಥ ಕೋವಿಂದರು ಹಲವು ಮಂದಿ ಇರಬಹುದು. ಜೀವನೋಪಾಯಕ್ಕಾಗಿ ಹಣ ಸಂಪಾದಿಸಲು ಮಳೆಯಲ್ಲಿ ಕಷ್ಟಪಟ್ಟು ದುಡಿಯುವವರು ತುಂಬಾ ಜನರಿರಬಹುದು. ನಾನು ಅವರನ್ನು ಪ್ರತಿನಿಧಿಸುತ್ತೇನೆ. ಶ್ರಮ ಹಾಕಿ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸಂಪಾದಿಸುವವರಿಗೆ ಇದೊಂದು ಸಂದೇಶ’ ಎಂದು ಅವರು ಹೇಳಿದರು.

‘ಈ ಹುದ್ದೆಗೆ ಆಯ್ಕೆಯಾಗುತ್ತೇನೆ ಅಥವಾ ಇದು ನನ್ನ ಗುರಿ ಎಂದು ನಾನು ಎಂದೂ ಯೋಚಿಸಿರಲಿಲ್ಲ. ಸಮಾಜಕ್ಕೆ ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂಬ ತುಡಿತ ನನ್ನನ್ನು ಇಲ್ಲಿವರೆಗೆ ಕರೆತಂದಿದೆ’ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಪತಿಯಾಗಿ ಆಯ್ಕೆಯಾದ ತಕ್ಷಣ  ಪ್ರತಿಕ್ರಿಯಿಸಿದ ಕೋವಿಂದ್‌, ‘ಇದು ಅತ್ಯಂತ ಭಾವುಕ ಕ್ಷಣ... ನನಗೆ ನೀಡಿರುವ ಅತ್ಯಂತ ದೊಡ್ಡ ಜವಾಬ್ದಾರಿ ಇದು. ರಾಷ್ಟ್ರಪತಿ ಹುದ್ದೆಗೆ ನಾನು ಆಯ್ಕೆಯಾಗಿರುವುದು ಭಾರತದ ಪ್ರಜಾಪ್ರಭುತ್ವದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರಪತಿಯಾಗಿ ಸಂವಿಧಾನದ ರಕ್ಷಣೆ ಮತ್ತು ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನನ್ನ ಕರ್ತವ್ಯ. ದೇಶದ ಎಲ್ಲ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ಸರ್ವೇ ಭವಂತು ಸುಖಿನಃ (ಎಲ್ಲರೂ ಸುಖವಾಗಿರಲಿ) ಎಂಬ ಆಶಯದಿಂದ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ’ ಎಂದು ಅವರು ವಾಗ್ದನ ನೀಡಿದರು.

ತಮ್ಮ ಪ್ರತಿಸ್ಪರ್ಧಿ, ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮೀರಾ ಕುಮಾರ್‌ ಅವರಿಗೂ ಕೋವಿಂದ್ ಕೃತಜ್ಞತೆ ಸಲ್ಲಿಸಿದರು. ಭವಿಷ್ಯದಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಶುಭ ಹಾರೈಕೆ: ಮೀರಾ ಕುಮಾರ್‌ ಕೂಡ ಕೋವಿಂದ್‌ ಅವರಿಗೆ ಶುಭಹಾರೈಸಿದರು.

‘ಸವಾಲಿನ ಈ ಸಮಯದಲ್ಲಿ ಸಂವಿಧಾನ ಹಾಗೂ ಅದರ ಆಶಯವನ್ನು  ಎತ್ತಿ ಹಿಡಿಯುವ ಅವಕಾಶ ಕೋವಿಂದ್‌ ಅವರಿಗೆ ಸಿಕ್ಕಿದೆ. ಅವರಿಗೆ ಅಭಿನಂದನೆಗಳು’ ಎಂದು ಅವರು ಹೇಳಿದರು.

‘ಸಿದ್ಧಾಂತಕ್ಕಾಗಿ ನಡೆಯುವ ನನ್ನ ಹೋರಾಟ 2017ರ ಜುಲೈ 20ರಂದು ನಿಲ್ಲುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ’ ಎಂದೂ ಮೀರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.