ADVERTISEMENT

ಮತ್ತೆ ಉಗ್ರರ ಅಟ್ಟಹಾಸ

ಪಂಜಾಬ್‌ನ ದಿನಾನಗರದ ಠಾಣೆ ಮೇಲೆ ದಾಳಿ, ಎಸ್ಪಿ ಸೇರಿ ಎಂಟು ಸಾವು

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಗುರುದಾಸಪುರ (ಪಿಟಿಐ): ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ದೀನಾನಗರದಲ್ಲಿ ಪಾಕ್‌ ಮೂಲದವರೆಂದು ಶಂಕಿಸಲಾದ ಮೂವರು ಫಿಯಾದಿನ್‌ ಉಗ್ರರು ಸೋಮವಾರ ನಸುಕಿನಲ್ಲಿ ಬಸ್‌ ಮೇಲೆ ಮತ್ತು ಪೊಲೀಸ್‌ ಠಾಣೆಯೊಳಗೆ ಮನಬಂದಂತೆ ಗುಂಡು ಹಾರಿಸಿ 8 ಮಂದಿಯನ್ನು ಕೊಂದು ಹಾಕಿದ್ದಾರೆ.

ನಂತರ ಠಾಣೆ ಪಕ್ಕದ ಕಟ್ಟಡದಲ್ಲಿ ಅವಿತುಕೊಂಡಿದ್ದ ಮೂರೂ ಉಗ್ರರನ್ನು, ಸ್ಥಳಕ್ಕೆ ಧಾವಿಸಿದ  ಸೇನಾ ಯೋಧರು, ಎನ್‌ಸಿಜಿ ಕಮಾಂಡೋಗಳು ಹಾಗೂ ಪೊಲೀಸರು ಜಂಟಿಯಾಗಿ ಸತತ 12 ತಾಸು ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದರು.  ಉಗ್ರರ ಬಳಿಯಿದ್ದ ಜಿಪಿಎಸ್‌ ಸಾಧನ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಗ್ರರ ದಾಳಿಗೆ ಬಲಿಯಾದವರಲ್ಲಿ ಪಂಜಾಬ್‌ನ ಎಸ್‌ಪಿ ದರ್ಜೆಯ ಒಬ್ಬ ಪೊಲೀಸ್‌ ಅಧಿಕಾರಿ ಹಾಗೂ ಮೂವರು ನಾಗರಿಕರು ಸೇರಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ 15ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು, ನೋವಿನ ಸಂಖ್ಯೆ  ಹೆಚ್ಚಾಗುವ ಸಾಧ್ಯತೆ ಇದೆ.
ಸೇನಾ ಸಮವಸ್ತ್ರದಲ್ಲಿದ್ದ ಆತ್ಮಹತ್ಯಾ ದಳದ ಉಗ್ರರು ಪಾಕಿಸ್ತಾನದಿಂದ  ಪಠಾಣಕೋಟ್‌ ಅಥವಾ ಜಮ್ಮುವಿನ ಚಾಕ್‌ ಹೀರಾ ನಗರದ ಬೇಲಿ ರಹಿತ ಗಡಿ ಮೂಲಕ ಭಾರತದೊಳಗೆ ನುಸುಳಿರಬಹುದು ಎನ್ನಲಾಗುತ್ತಿದೆ.

ಪಂಜಾಬ್‌ನಲ್ಲಿ ಉಗ್ರಗಾಮಿಗಳು ಇಷ್ಟು ದೊಡ್ಡ ಪ್ರಮಾಣದ ದಾಳಿ ನಡೆಸಿರುವುದು ಸುಮಾರು 8 ವರ್ಷಗಳ ಬಳಿಕ ಇದೇ ಮೊದಲು.

ದಾಳಿ ಹೊಣೆ ಹೊತ್ತಿಲ್ಲ: ಯಾವುದೇ ಭಯೋತ್ಪಾದನಾ ಸಂಘಟನೆ ಇದುವರೆಗೂ ಅಧಿಕೃತವಾಗಿ ದಾಳಿಯ ಹೊಣೆ ಹೊತ್ತಿಲ್ಲ. ಆದರೆ, ದಾಳಿಯ ವಿಧಾನ ನೋಡಿದರೆ ಪಾಕಿಸ್ತಾನ ಮೂಲದ ಲಷ್ಕರ್‌–ಏ–ತಯ್ಯಬಾ (ಎಲ್‌ಇಟಿ) ಅಥವಾ ಜೈಷ್‌–ಏ– ಮೊಹಮ್ಮದ್‌ (ಜೆಇಎಂ) ಆತ್ಮಹತ್ಯಾ ದಳದ ಸದಸ್ಯರು ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಳಿ ಮೇಲೆ ಬಾಂಬ್: ಈ ನಡುವೆ, ಗುರುದಾಸಪುರ – ಪಠಾಣಕೋಟ್ ನಡುವಿನ ರೈಲು ಮಾರ್ಗದಲ್ಲಿ ಐದು  ಸಜೀವ ಬಾಂಬುಗಳು ಪತ್ತೆಯಾಗಿವೆ.

ಉಗ್ರರಿಗೆ ಬಲಿಯಾಗಿದ್ದ ಅಪ್ಪ: ಉಗ್ರರ ಗುಂಡಿಗೆ ಬಲಿಯಾದ ಬಲ್ಜೀತ್‌ ಸಿಂಗ್ ಅವರ ತಂದೆ ಅಚ್ಚರ್‌ ಸಿಂಗ್‌  ಕೂಡ 1984ರಲ್ಲಿ  ಉಗ್ರರ ಗುಂಡಿಗೆ ಎದೆಯೊಡ್ಡಿ ಸಾವನ್ನಪ್ಪಿದ್ದರು. ತಂದೆಯ ಮರಣದ ಮರು ವರ್ಷವೇ ಸಹಾಯಕ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಬಲ್ಜೀತ್‌ ಸಿಂಗ್‌ ಪೊಲೀಸ್‌ ಇಲಾಖೆ ಸೇರಿದ್ದರು.

ಉಗ್ರನಲ್ಲ ಹೋಂಗಾರ್ಡ್‌: ದಿನಾನಗರ ಪೊಲೀಸ್‌ ಠಾಣೆಯಲ್ಲಿ ಸೇವೆಗೆ ನಿಯೋಜಿಸಿದ್ದ ಹೋಂಗಾರ್ಡ್‌ ಸಿಬ್ಬಂದಿಯೊಬ್ಬನನ್ನು ಉಗ್ರನೆಂದು ತಪ್ಪಾಗಿ ಭಾವಿಸಿ ಸೆರೆ ಹಿಡಿದ ಘಟನೆ ನಡೆದಿದೆ.

ಹೋಂ ಗಾರ್ಡ್‌ನನ್ನು ಸೆರೆ ಹಿಡಿದ ಭದ್ರತಾ ಸಿಬ್ಬಂದಿ ನಾಲ್ಕನೇ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದೇವೆ ಎಂಬ ಸುದ್ದಿಯನ್ನು ದೆಹಲಿಗೆ ರವಾನಿಸಿದರು. ಇದು ಒಂದು ಕ್ಷಣ ಸಂಚಲನ ಮೂಡಿಸಿತು. ದಿನಾನಗರ ಠಾಣೆಯ ಮೇಲೆ ಉಗ್ರರು ದಾಳಿ ಮಾಡಿದಾಗ ಅಲ್ಲಿಂದ ತಪ್ಪಿಸಿಕೊಂಡ ಹೋಂಗಾರ್ಡ್‌ ಸಿಬ್ಬಂದಿ ಠಾಣೆಯ ಪಕ್ಕದ ಕಟ್ಟಡದೊಳಗೆ ಅವಿತು ಕುಳಿತಿದ್ದ. ಪೊಲೀಸರು ಮತ್ತು ಸೇನೆ ಕಾರ್ಯಾಚರಣೆ ಕೈಗೊಂಡಾಗ ಅವರಿಂದ ತಪ್ಪಿಸಿಕೊಳ್ಳಲು ಉಗ್ರರು ಕೂಡ ಇದೇ ಕಟ್ಟಡಕ್ಕೆ ನುಗ್ಗಿದ್ದರು.

ಮೂವರು ಉಗ್ರರನ್ನು ಹೊಡೆದು ಉರುಳಿಸಿದ ನಂತರ ಪೊಲೀಸರು ಮತ್ತು ಯೋಧರು ಕಟ್ಟಡದೊಳಗೆ ನುಗ್ಗಿ  ಪರಿಶೀಲಿಸಿದಾಗ ಕೊಠಡಿಯೊಂದರ ಮೂಲೆಯಲ್ಲಿ ಹೆದರಿಕೆಯಿಂದ ಮುದುಡಿ ಕುಳಿತಿದ್ದ ಹೋಂ ಗಾರ್ಡ್‌ ಸಿಕ್ಕು ಬಿದ್ದ. ಆತನನ್ನು ಉಗ್ರನೆಂದು ಭಾವಿಸಿ ಯೋಧರು ಸೆರೆ ಹಿಡಿದು ತಂದರು.

ಬಿಳಿ ಕಾರಿನಲ್ಲಿ ಬಂದ ಹಂತಕರು!
ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಉಗ್ರರು ಅಪಹೃತ ಬಿಳಿ ಕಾರಿನಲ್ಲಿ ದಿನಾನಗರಕ್ಕೆ  ಬಂದಿಳಿದರು.  ಮೊದಲು ರಸ್ತೆ ಬದಿಯ ಹೋಟೆಲೊಂದರ ಮೇಲೆ, ನಂತರ ಚಲಿಸುತ್ತಿದ್ದ ಬಸ್‌ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದರು.

ಗುಂಡೇಟಿಗೆ ಮೂವರು ನಾಗರಿಕರು ಸ್ಥಳದಲ್ಲಿಯೇ ಬಲಿಯಾದರೆ, ಹತ್ತು ಪ್ರಯಾಣಿಕರು  ಗಂಭೀರವಾಗಿ ಗಾಯಗೊಂಡರು. ಅಲ್ಲಿಂದ ನೇರವಾಗಿ ಕಾರಿನಲ್ಲಿಯೇ ದಿನಾನಗರ ಪೊಲೀಸ್‌ ಠಾಣೆಗೆ ನುಗ್ಗಿದ ಉಗ್ರರು ಗುಂಡಿನ ಮಳೆಗರೆದರು.

ನಂತರ ನಡೆದ ಗುಂಡಿನ ಚಕಮಕಿಯಲ್ಲಿ  ತೀವ್ರ ಗಾಯಗೊಂಡಿದ್ದ ಪತ್ತೇದಾರ ವಿಭಾಗದ ಎಸ್‌ಪಿ ಬಲ್ಜೀತ್‌ ಸಿಂಗ್‌  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  
ಇಬ್ಬರು ಪೊಲೀಸರು ಹಾಗೂ ಇಬ್ಬರು ಹೋಂ ಗಾರ್ಡ್ಸ್‌ ಈ ಘಟನೆಯಲ್ಲಿ  ಸಾವನ್ನಪ್ಪಿದ್ದಾರೆ.

ಗುರುತು ಸಿಗದಂತೆ ಮುಂಜಾಗ್ರತೆ
ಹತ್ಯೆಗೀಡಾದ ಉಗ್ರರು ತಮ್ಮ ಗುರುತಿನ ಸುಳಿವು ಸಿಗದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸಿರುವಂತೆ ತೋರುತ್ತದೆ. ತಮ್ಮ ಗುರುತು, ವಿಳಾಸ ಪತ್ತೆಯಾಗದಂತೆ ಉಗ್ರರು ತಾವು ಧರಿಸಿದ್ದ ಬಟ್ಟೆ ಹಾಗೂ ಒಳ ಉಡುಪುಗಳ ಮೇಲಿದ್ದ  ಗುರುತಿನ ಪಟ್ಟಿಯನ್ನು ಕಿತ್ತು ಎಸೆದಿದ್ದರು.

ಮೃತರ ಬಳಿ ದೊರೆತ ಎರಡು ಜಿಪಿಎಸ್‌ ಸಾಧನ, ಅವರು ಎಲ್ಲಿಂದ ಬಂದಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಬಹುದು ಎನ್ನಲಾಗಿದೆ.
ಮೂರು ಎಕೆ–47,  ಚೀನಾ ನಿರ್ಮಿತ ಗ್ರೆನೆಡ್‌ಗಳು, 200 ಗುಂಡು,  ದ್ರಾಕ್ಷಿ, ಖರ್ಜೂರ, ಗೋಡಂಬಿಗಳು ಉಗ್ರರ ಶವದ ಬಳಿ ಪತ್ತೆಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.