ADVERTISEMENT

ಮಹಾರಾಷ್ಟ್ರ: ದೀಪಾವಳಿ ಬಳಿಕ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 10:53 IST
Last Updated 21 ಅಕ್ಟೋಬರ್ 2014, 10:53 IST

ನವದೆಹಲಿ/ಮುಂಬೈ (ಪಿಟಿಐ): ಎಲ್ಲಾ ಅವಕಾಶಗಳನ್ನು ಮುಕ್ತವಾಗಿ ಇಟ್ಟುಕೊಂಡಿರುವ ಬಿಜೆಪಿ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ನಿರ್ಧಾರವನ್ನು ಮಂಗಳವಾರ ಮುಂದೂಡಿದೆ. ಈ ಮೂಲಕ ಸರ್ಕಾರ ರಚನೆಗೆ ಯಾರ  ಬೆಂಬಲ ಪಡೆಯಬೇಕು ಎಂಬುದರ ಬಗ್ಗೆ ನಿರ್ಧರಿಸಲು ತನಗೇನೂ ಅವಸರವೇನಿಲ್ಲ ಎಂದು ಸುಳಿವು ನೀಡಿದೆ.

ಸರ್ಕಾರ ರಚನೆ ನಿಟ್ಟಿನಲ್ಲಿ ಕೇಂದ್ರ ಸಚಿವರೂ ಆಗಿರುವ ಪಕ್ಷದ ರಾಷ್ಟ್ರೀಯ ಘಟಕದ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮಂಗಳವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಯ ಭೇಟಿಯಲ್ಲಿ ಪಕ್ಷದ ಮುಂದಿನ ನಡೆಯ ಕುರಿತು ಚರ್ಚಿಸಿದ್ದಾರೆ.

ಜೇಟ್ಲಿ ಅವರ ಭೇಟಿ ಬಳಿಕ ಗಡ್ಕರಿ ಅವರು, ಆರ್‌ಎಸ್‌ಎಸ್‌ ಮುಖಂಡರೊಂದಿಗೆ ಚರ್ಚಿಸಲು ನಾಗ್ಪುರಕ್ಕೆ ತೆರಳಿದ್ದಾರೆ.

ADVERTISEMENT

ಈ ನಡುವೆ ಮಂಗಳವಾರ ಮುಂಬೈನಲ್ಲಿ ಬಿಜೆಪಿ ಶಾಸಕಾಂಗ ಪಕ್ಷ ನಾಯಕರ ಆಯ್ಕೆಗಾಗಿ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದೆ.

‘ನಾವು ಇಂದು ತೆರಳುತ್ತಿಲ್ಲ. ದೀಪಾವಳಿಯ ಬಳಿಕ ನಾನು ಮುಂಬೈಗೆ ತೆರಳುವೆ ಎನಿಸುತ್ತದೆ’ ಎಂದು ಬಿಜೆಪಿ ಸಂಸದೀಯ ಮಂಡಳಿಯ ಪರವಾಗಿ ವೀಕ್ಷಕರಾಗಿ ಆಯ್ಕೆಯಾಗಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಿಂಗ್‌ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಪಿ.ನಡ್ಡಾ ಅವರು ವೀಕ್ಷಕರಾಗಿ ಆಯ್ಕೆಯಾಗಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 145 ಸ್ಥಾನಗಳು ಬೇಕು. ಅಕ್ಟೋಬರ್‌ 15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 122 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆಗೆ ಬಿಜೆಪಿಗೆ ಇನ್ನೂ 23 ಸ್ಥಾನಗಳ ಅಗತ್ಯವಿದೆ. ಶಿವಸೇನೆ 63 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 41 ಸ್ಥಾನ ಗಳಿಸಿರುವ ಎನ್‌ಸಿಪಿ ಬಿಜೆಪಿ ಬಾಹ್ಯ ಬೆಂಬಲ ನೀಡುವುದಾಗಿ ಈಗಾಗಲೇ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.