ADVERTISEMENT

ಮಾಧ್ಯಮಗಳಿಗೆ ಮೋದಿ ಶ್ಲಾಘನೆ

ಸ್ವಚ್ಛ ಭಾರತ ಅಭಿಯಾನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ‘ಸ್ವಚ್ಛ ಭಾರತ ಅಭಿಯಾನ’ ಕುರಿತು ಹೆಚ್ಚು ಬರೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಕ್ಕೆ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಸದಸ್ಯರು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ‘ಸ್ವಚ್ಛ ಭಾರತದ ಕುರಿತು ಅನೇಕ ಲೇಖನಗಳನ್ನು ಓದುತ್ತಿದ್ದೇನೆ. ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಅರ್ಥಪೂರ್ಣ ಚರ್ಚೆಗಳನ್ನು ಏರ್ಪಡಿ­ಸುತ್ತಿವೆ. ಇದು ಮಾಧ್ಯಮ ದೇಶಕ್ಕೆ ಸಲ್ಲಿಸುತ್ತಿರುವ ಸೇವೆ. ಮಾಧ್ಯಮ ಹೇಗೆ ರಚ­ನಾ­ತ್ಮಕ ಪಾತ್ರ ನಿರ್ವಹಿಸಬಹುದು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ’ ಎಂದು ಹೇಳಿದರು.

‘ಲೇಖನಗಳಲ್ಲಿ ಶೇ 80ರಷ್ಟು ಟೀಕೆಗಳೇ ಆಗಿವೆ ಎನ್ನುವುದು ನನಗೆ ತಿಳಿದಿದೆ. ಆದರೆ ಅದು ಜಗತ್ತಿನ ದೃಷ್ಟಿಯಲ್ಲಿ ಭಾರತದ ಚಿತ್ರಣಕ್ಕೆ ಅಂಟಿರುವ ಕೊಳೆಯ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಿವೆ’ ಎಂದರು.

ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳ ಸುಮಾರು 400 ಸಂಪಾದಕರು, ವರದಿಗಾರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಪತ್ರಕರ್ತರೊಂದಿಗೆ ಮುಕ್ತವಾಗಿ ಬೆರೆತ ಪ್ರಧಾನಿ ಛಾಯಾಗ್ರಾಹಕರಿಂದ ಕ್ಯಾಮೆರಾ ಪಡೆದು ಪತ್ರಕರ್ತರ ಫೋಟೊ ಕ್ಲಿಕ್ಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.