ADVERTISEMENT

ಮಾಯಾವತಿ ವೇಶ್ಯೆ ಎಂದ ಬಿಜೆಪಿ ಮುಖಂಡ ವಜಾ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 22:30 IST
Last Updated 20 ಜುಲೈ 2016, 22:30 IST
ದಯಾಶಂಕರ ಸಿಂಗ್‌
ದಯಾಶಂಕರ ಸಿಂಗ್‌   

ನವದೆಹಲಿ (ಪಿಟಿಐ): ಬಿಜೆಪಿಯ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ದಯಾಶಂಕರ ಸಿಂಗ್‌ ಅವರು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಅವರನ್ನು ‘ವೇಶ್ಯೆ’ಗೆ ಹೋಲಿಸಿರುವ  ವಿದ್ಯಮಾನ ರಾಜ್ಯಸಭೆಯಲ್ಲಿ ಬುಧವಾರ ಭಾರಿ ಕೋಲಾಹಲಕ್ಕೆ ಕಾರಣವಾಯಿತು. 

ಸದಸ್ಯರ ಆಕ್ರೋಶ ತಣಿಸುವುದಕ್ಕಾಗಿ ರಾಜ್ಯಸಭೆಯಲ್ಲಿ ಬಿಜೆಪಿ ನಾಯಕರಾಗಿರುವ ಅರುಣ್‌ ಜೇಟ್ಲಿ  ಹೇಳಿಕೆ ಖಂಡಿಸಿ, ವಿಷಾದವನ್ನೂ ವ್ಯಕ್ತಪಡಿಸಿದರು.
ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಅವರು ವಿಷಯ ಪ್ರಸ್ತಾಪಿಸಿದರು. ತಮ್ಮ ಪಕ್ಷಕ್ಕೆ ಬಿಎಸ್‌ಪಿಯೊಂದಿಗೆ ರಾಜಕೀಯ ಭಿನ್ನಾಭಿಪ್ರಾಯವಿದೆ.

ಆದರೆ ರಾಜಕೀಯ ಪಕ್ಷವೊಂದರ ಮುಖ್ಯಸ್ಥೆ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಮಹಿಳೆಯೊಬ್ಬರ ವಿರುದ್ಧ ಇಂತಹ ಹೇಳಿಕೆಗೆ ಅವಕಾಶ ನೀಡುವುದಿಲ್ಲ ಎಂದು  ಹೇಳಿದರು.

ಈ ಹೇಳಿಕೆ ಬಿಜೆಪಿ ಮುಖಂಡನ ಮನಸ್ಥಿತಿಯನ್ನು ಬಿಂಬಿಸುತ್ತದೆ. ಅವರ ವಿರುದ್ಧ ಪರಿಶಿಷ್ಟ ಜಾತಿ/ಪಂಗಡಗಳ ಜನರ ವಿರುದ್ಧ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. 
ಈ ವ್ಯಕ್ತಿಯನ್ನು ಬಂಧಿಸಬೇಕು ಮತ್ತು ಇಂತಹ ಮನಸ್ಥಿತಿಯ ವ್ಯಕ್ತಿ ಯಾವುದೇ ಪಕ್ಷದ ಯಾವುದೇ ಹುದ್ದೆ ಹೊಂದಿರಬಾರದು ಎಂದರು.

ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರು ಮಾಹಿತಿ ನೀಡುವವರೆಗೆ ಈ ಬಗ್ಗೆ ತಿಳಿದಿರಲಿಲ್ಲ ಎಂದ ಜೇಟ್ಲಿ ಅವರು, ‘ಇದು ಸರಿಯಲ್ಲ, ಬಳಸಿದ ಪದಗಳನ್ನು ನಾನು ಖಂಡಿಸುತ್ತೇನೆ. ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಾವು ನಿಮ್ಮೊಂದಿಗಿದ್ದೇವೆ’ ಎಂದು ಹೇಳಿದರು.

ನೋವಿನಿಂದ ಮಾತನಾಡಿದ ಮಾಯಾವತಿ ಅವರು, ‘ನಾನು ಮದುವೆ ಆಗಿಲ್ಲ. ದೇಶದೆಲ್ಲೆಡೆ ಇರುವ ದಮನಕ್ಕೊಳಗಾದ ಜನರು ನನ್ನ ಕುಟುಂಬ ಎಂದುಕೊಂಡಿದ್ದೇನೆ. ಕೈಗಾರಿಕೋದ್ಯಮಿಗಳಿಂದ ದೇಣಿಗೆ ಪಡೆಯದೆ ದುರ್ಬಲ ವರ್ಗಗಳಿಗೆ ಸೇರಿದವರಿಂದಲೇ ದೇಣಿಗೆ ಪಡೆದುಕೊಳ್ಳಬೇಕು ಎಂಬ ನನ್ನ ಗುರು ಕಾನ್ಶಿರಾಮ್‌ ಅವರ ಸಲಹೆಯನ್ನು ಸದಾ ಅನುಸರಿಸುತ್ತೇನೆ’ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷಕ್ಕೆ ವ್ಯಕ್ತವಾಗುತ್ತಿರುವ ಜನಬೆಂಬಲದಿಂದ ಬಿಜೆಪಿ ಗಲಿಬಿಲಿಗೊಂಡಿದೆ ಎಂದೂ ಅವರು ತಿಳಿಸಿದರು. ಜೇಟ್ಲಿ ಮತ್ತು ಬೆಂಬಲ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಇತರ ಮುಖಂಡರಿಗೆ ಕೃತಜ್ಞತೆ ಹೇಳಿದರು.

‘ಜನರು ನನ್ನನ್ನು ತಮ್ಮ ಮಗಳು ಅಥವಾ ಸಹೋದರಿ ಎಂದು ಪರಿಗಣಿಸುತ್ತಾರೆ. ಹಾಗಾಗಿ ಉತ್ತರ ಪ್ರದೇಶ ಬಿಜೆಪಿ ಮುಖಂಡನ ಹೇಳಿಕೆ ಅವರ ಮಗಳು ಮತ್ತು ಸಹೋದರಿಯನ್ನು ಉದ್ದೇಶಿಸಿ ಹೇಳಿದಂತಾಗಿದೆ. ಇಂತಹ ಜನರಿಗೆ ಪ್ರೋತ್ಸಾಹ ನೀಡುತ್ತಿರುವ ಬಿಜೆಪಿಯನ್ನು ದೇಶದ ಜನರು ಕ್ಷಮಿಸುವುದಿಲ್ಲ’ ಎಂದು ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದರು.

ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಅವಿರೋಧ ನಿರ್ಣಯ ಅಂಗೀಕರಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು. ಇಡೀ ಸದನ ಹೇಳಿಕೆಯನ್ನು ಒಕ್ಕೊರಲಿನಿಂದ ಖಂಡಿಸುತ್ತದೆ ಎಂದು ರಾಜ್ಯಸಭೆ ಉಪಾಧ್ಯಕ್ಷ ಪಿ.ಜೆ. ಕುರಿಯನ್‌ ಹೇಳಿದರು. ಆ ವ್ಯಕ್ತಿಗೆ ಕಾನೂನಿನ ಅಡಿಯಲ್ಲಿ  ಸಾಧ್ಯವಿರುವ ಗರಿಷ್ಠ ಶಿಕ್ಷೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಸರ್ಕಾರವನ್ನು ಕೇಳಿಕೊಂಡರು.

ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಯತ್ನಿಸುವ ಸಂದರ್ಭದಲ್ಲಿಯೇ ಈ ಪ್ರಕರಣವೂ ನಡೆಯಿತು.

ಪಕ್ಷದ ಹುದ್ದೆಗಳಿಂದ ದಯಾಶಂಕರ್‌ ವಜಾ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಯಾವುದೇ ವಿವಾದ ಮೈಮೇಲೆ ಎಳೆದುಕೊಳ್ಳಬಯಸದ ಬಿಜೆಪಿ ವಿವಾದ ತೀವ್ರ ಸ್ವರೂಪ ಪಡೆಯುವುದಕ್ಕೆ ಮೊದಲು ದಯಾಶಂಕರ್‌ ಸಿಂಗ್‌ ವಿರುದ್ಧ ಕ್ರಮ ಕೈಗೊಂಡಿದೆ. ತಕ್ಷಣದಿಂದಲೇ ಪಕ್ಷದ ಎಲ್ಲ ಹುದ್ದೆಗಳಿಂದ ಅವರನ್ನು ವಜಾ ಮಾಡಲಾಗಿದೆ. ಸಿಂಗ್‌ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

‘ಮಾಯಾವತಿ ಅವರನ್ನು ಈ ರೀತಿಯಲ್ಲಿ ಕಲ್ಪಿಸಲೂ ನನಗೆ ಸಾಧ್ಯವಿಲ್ಲ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದವರು’ ಎಂದು ಹೇಳಿದ್ದಾರೆ.

ದಯಾಶಂಕರ್‌ ಹೇಳಿದ್ದೇನು?
ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಲ್ಲೊಬ್ಬರಾದ  ದಯಾಶಂಕರ ಸಿಂಗ್‌ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅತಿ ಹೆಚ್ಚು ಹಣ ನೀಡುವವರಿಗೆ ಮಾಯಾವತಿ ಟಿಕೆಟ್‌ ನೀಡುತ್ತಿದ್ದಾರೆ ಎಂದು ಹೇಳಿದ್ದರು.

‘ಮಾಯಾವತಿ ಅವರು ₹1 ಕೋಟಿ ಹಣ ಕೊಟ್ಟ ಯಾರಿಗಾದರೂ ಟಿಕೆಟ್‌ ಕೊಡುತ್ತಾರೆ. ಮಧ್ಯಾಹ್ನ ಹೊತ್ತಿಗೆ ಬೇರೆ ಯಾರೋ ಬಂದು ₹2 ಕೋಟಿ ಕೊಟ್ಟರೆ  ಟಿಕೆಟ್‌ ಅವರಿಗೆ ಹೋಗುತ್ತದೆ. ಸಂಜೆಯ ಹೊತ್ತಿಗೆ ಯಾರಾದರೂ ₹3 ಕೋಟಿ ಕೊಟ್ಟರೆ ಮೊದಲಿನ ಇಬ್ಬರನ್ನೂ ಕೈಬಿಟ್ಟು ಮೂರನೆಯವನಿಗೆ ಟಿಕೆಟ್‌ ನೀಡುತ್ತಾರೆ.  ಈಗ ಅವರ ವರ್ತನೆ ವೇಶ್ಯೆಗಿಂತಲೂ ಕೀಳು’ ಎಂದು ದಯಾಶಂಕರ್‌ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.  ಎಎನ್‌ಐ ಸುದ್ದಿಸಂಸ್ಥೆ ಈ ವಿಡಿಯೊವನ್ನು ಬಿಡುಗಡೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.